ಕರ್ನಾಟಕ ಪೊಲೀಸರು ಯಾಕೆ ಕೇರಳದಲ್ಲಿ ಡೀಲ್ ಮಾಡಿದ್ರು?
ಕರ್ನಾಟಕ ಪೊಲೀಸರಿಗೆ ದೇಶದಲ್ಲಿಯೇ ಉತ್ತಮ ಹೆಸರಿದೆ. ಮಹಾರಾಷ್ಟ್ರದ ನಂತರ ಕರ್ನಾಟಕ ಪೊಲೀಸರು ಅತೀ ಉತ್ತಮ ಸೇವಾ ದಾಖಲೆ ಹೊಂದಿದ್ದಾರೆ. ಎಷ್ಟೆಷ್ಟೋ ಕಠಿಣ ಕೇಸುಗಳನ್ನು ಭೇದಿಸಿ ನೈಜ ಆರೋಪಿಗಳನ್ನು ಬಂಧಿಸಿದ ಹೆಗ್ಗಳಿಕೆ ಕರ್ನಾಟಕ ಪೊಲೀಸರಿಗೆ ಇದೆ. ಅಂತಹ ಪೊಲೀಸರು ತಾವೇ ಸ್ವತ: ಪಕ್ಕದ ರಾಜ್ಯದ ಪೊಲೀಸರಿಂದ ಬಂಧನಕ್ಕೊಳಗಾಗುವುದಾ?
ಇಂತಹ ಒಂದು ಘಟನೆ ನಡೆದಿದೆ. ಬಿಟ್ ಕಾಯಿನ್ ಸೇರಿದಂತೆ ಈ ಆಧುನಿಕ ಕಾಲದ ಕರೆನ್ಸಿ ಅವ್ಯವಹಾರದ ತನಿಖೆಯ ಜಾಡು ಹಿಡಿದು ಕರ್ನಾಟಕದ ಪೊಲೀಸರು ಕೇರಳಕ್ಕೆ ಹೋಗಿದ್ದರು. ಅಲ್ಲಿ ಅವರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧಿಸುವುದು ಬಿಟ್ಟು ಇವರು ಡೀಲ್ ಮಾಡಲು ಕುಳಿತುಕೊಂಡಿದ್ದಾರೆ. ಕೊನೆಗೆ 25 ಲಕ್ಷ ರೂಪಾಯಿಗಳಿಗೆ ಡೀಲ್ ಕುದುರಿದೆ. ಹಣ ವಸೂಲು ಮಾಡಿದ ಪೊಲೀಸರು ಅಲ್ಲಿಂದ ರಾಜಾರೋಷವಾಗಿ ಕರ್ನಾಟಕದ ದಾರಿ ಹಿಡಿದಿದ್ದಾರೆ. ಅಷ್ಟೊತ್ತಿಗೆ ಈ ಸುದ್ದಿ ಕೇರಳದ ಪೊಲೀಸರಿಗೆ ಸಿಕ್ಕಿದೆ. ಬಹುಶ: ಆ ಆರೋಪಿಗಳು ಇಲ್ಲಿಯ ತನಕ ಕೇರಳ ಪೊಲೀಸರಿಗೆ ಮಾಮೂಲಿ ಕೊಟ್ಟು ಡೀಲ್ ಮಾಡುತ್ತಿದ್ದಿರಬಹುದು. ಆವತ್ತು ಕೇರಳ ಪೊಲೀಸರು ಹಣಕ್ಕಾಗಿ ಫೋನ್ ಮಾಡಿದಾಗ ಈಗ ತಾನೇ ಕರ್ನಾಟಕ ಪೊಲೀಸರು ತೆಗೆದುಕೊಂಡು ಹೋದರು. ಇವತ್ತು ನಮ್ಮ ಬಳಿ ಕೊಡಲು ಏನೂ ಇಲ್ಲ ಎನ್ನುವ ಸಂಗತಿಯನ್ನು ಆರೋಪಿಗಳು ಕೇರಳ ಪೊಲೀಸರಿಗೆ ಹೇಳಿದ್ದಾರೆ. ನಮ್ಮ ತಟ್ಟೆಯಲ್ಲಿದ್ದ ಊಟವನ್ನು ಕಸಿದುಕೊಂಡು ಹೋದವರು ಯಾರು ಎನ್ನುವುದು ಗೊತ್ತಾಗದೇ ಕೇರಳ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಆರೋಪಿಗಳ ಬಳಿ ವಾಹನದ ನಂಬ್ರ ಏನಾದರೂ ಇದೆಯಾ ಎಂದು ಕೇಳಿದ್ದಾರೆ. ಪೊಲೀಸ್ ಗಾಡಿ. ಅದರಲ್ಲಿ ಕೆಎ ಎಂದು ಬರೆದಿತ್ತು ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ. ಕೇರಳ ಪೊಲೀಸರಿಗೆ ಅಷ್ಟೇ ಸಾಕಿತ್ತು. ಅವರು ತಕ್ಷಣ ಕರ್ನಾಟಕ – ಕೇರಳ ಗಡಿಯಲ್ಲಿ ಯಾವುದಾದರೂ ಕರ್ನಾಟಕದ ಪೊಲೀಸ್ ವಾಹನ ಬಂದರೆ ನಿಲ್ಲಿಸಿ ಚೆಕ್ ಮಾಡಲು ಚೆಕ್ ಪೋಸ್ಟಿನಲ್ಲಿರುವ ಪೊಲೀಸ್ ಸಿಬ್ಬಂದಿಗೆ ತಿಳಿಸಿದ್ದಾರೆ. ಇತ್ತ ನಮ್ಮನ್ನು ಯಾರಾದರೂ ನಿಲ್ಲಿಸಿ ಪರಿಶೀಲಿಸುವಷ್ಟು ಅನುಮಾನ ಯಾರಿಗೂ ಬರುವುದಿಲ್ಲ ಎಂದು ಕರ್ನಾಟಕದ ಪೊಲೀಸರು ಆರಾಮವಾಗಿ ಸಾಗಿದ್ದಾರೆ. ಚೆಕ್ ಪೋಸ್ಟಿನಲ್ಲಿ ಪೊಲೀಸರು ನಿಲ್ಲಿಸಿ ಹೀಗೆ ಸುಮ್ಮನೆ ರೂಟಿನ್ ಚೆಕ್ ಎಂದು ಸಬೂಬು ಹೇಳಿ ಪೊಲೀಸ್ ಗಾಡಿಯನ್ನು ಶೋಧಿಸಿದ್ದಾರೆ. ನೋಡಿದರೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ 25 ಲಕ್ಷ ರೂಪಾಯಿಗಳ ಕಂತೆ ಇದದ್ದು ಪತ್ತೆಯಾಗಿದೆ. ಈ ಅವಕಾಶವನ್ನು ಕೇರಳ ಪೊಲೀಸರು ಬಿಡುವ ಚಾನ್ಸ್ ಇದೆಯಾ?
ಕೇರಳ ಪೊಲೀಸರು ಹಿಡಿದದ್ದು ಆಶ್ಚರ್ಯ!
ನಮಗೆ ಸಿಗದೇ ಇದ್ದದ್ದು ಕರ್ನಾಟಕ ಪೊಲೀಸರಿಗೂ ಸಿಗಬಾರದು ಎಂದು ಅವರು ನಿರ್ಧರಿಸಿದ್ದಾರೆ. ಕೇರಳ ಪೊಲೀಸರು ಮನಸ್ಸು ಮಾಡಿದರೆ ಅದರಲ್ಲಿ ಒಂದಿಷ್ಟು ಶೇರ್ ತೆಗೆದು ಕರ್ನಾಟಕದ ಪೊಲೀಸರನ್ನು ಬಿಡುವ ಸಾಧ್ಯತೆ ಇತ್ತು. ಆದರೆ ತಮಗೆ ಮಾಹಿತಿ ನೀಡದೇ, ತಮ್ಮ ರಾಜ್ಯದೊಳಗೆ ಪ್ರವೇಶಿಸಿ, ನಮ್ಮ ರಾಜ್ಯದಲ್ಲಿ ಅಡಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ, ಅವರೊಂದಿಗೆ ಡಿಲೀಂಗ್ ಮಾಡಿ ಹಣವನ್ನು ಕೂಡ ತೆಗೆದುಕೊಂಡು ಎಸ್ಕೇಪ್ ಆಗುತ್ತಿದ್ದ ಕರ್ನಾಟಕ ಪೊಲೀಸರ ಹಿರೋಯಿಸಂ ಬಗ್ಗೆ ಕೇರಳ ಪೊಲೀಸರ ಅಹಂಗೆ ಪೆಟ್ಟಾಗಿದೆ. ನಿಮ್ಮನ್ನು ಹೀಗೆ ಬಿಟ್ಟರೆ ನೀವು ನಮ್ಮ ಮೂಗಿನೊಳಗೆ ಬೆರಳಾಕಿ ಎಳೆಯುತ್ತಿರಿ, ನಿಮ್ಮ ಡೀಲಿಂಗ್ ಎಲ್ಲರಿಗೂ ಗೊತ್ತಾಗಬೇಕು ಎಂದು ಕೇರಳ ಪೊಲೀಸರು ನಿಶ್ಚಯಿಸಿದ್ದಾರೆ. ತಕ್ಷಣ ಇದನ್ನು ಮಾಧ್ಯಮಗಳ ಮೂಲಕ ಹೊರಪ್ರಪಂಚಕ್ಕೆ ವೈರಲ್ ಮಾಡಿದ್ದಾರೆ. ಅಲ್ಲಿಗೆ ಕರ್ನಾಟಕ ಪೊಲೀಸರ ಮಾನವನ್ನು ಹರಾಜಿಗೆ ಇಟ್ಟಿದ್ದಾರೆ.
ಸರಿಯಾಗಿ ನೋಡಿದರೆ ಕರ್ನಾಟಕದ ಭಾರತೀಯ ಜನತಾ ಪಾರ್ಟಿಗೆ ಇದು ದೊಡ್ಡ ವಿಷಯ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದ ಪೊಲೀಸರ ಮೇಲೆ ಮಾಮೂಲು ವಸೂಲಿ ಹೆಚ್ಚು ಮಾಡಲು ಒತ್ತಡ ಹೆಚ್ಚಿದೆ. ಅದಕ್ಕಾಗಿ ಪಕ್ಕದ ರಾಜ್ಯಕ್ಕೂ ಹೋಗಬೇಕಿದೆ ಎಂದು ಕಾಂಗ್ರೆಸ್ ಸರಕಾರದ ಮೇಲೆ ಬಾಣ ಎಸೆಯಬಹುದಿತ್ತು. ಆದರೆ ಅವರು ಈ ವಿಷಯ ಎತ್ತಲು ಹೋಗಿಲ್ಲ. ಅದಕ್ಕೆ ಕಾರಣ ಬಿಟ್ ಕಾಯಿನ್ ಹಗರಣ.
ಮೂಲ ಹುಡುಕಲು ಇದು ಸಹಕಾರಿ!
ಕ್ರಿಪ್ಟೋ ಕರೆನ್ಸಿ ವಿಷಯ ಬಂದಾಗ ಎಲ್ಲಾ ಪಕ್ಷಗಳ ಮುಖಂಡರು ಕೂಡ ಅದರಲ್ಲಿ ಶಾಮೀಲು. ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಾಗಲೇ ಇದು ಬೆಳಕಿಗೆ ಬಂದಿತ್ತು. ಆದರೆ ಏನೂ ಆಗಿರಲಿಲ್ಲ. ಕಾಂಗ್ರೆಸ್ಸಿಗರು ಆಗ ವೀರಾವೇಶದಿಂದ ಹೋರಾಡಿ ನಮ್ಮ ಸರಕಾರ ಬಂದ ಬಳಿಕ ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇವರು ಕೂಡ ಏನೂ ಮಾಡುತ್ತಿಲ್ಲ. ಆದರಿಂದ ಈ ವಿಷಯದಲ್ಲಿ ಯಾರೂ ಕೂಡ ತುಟಿ ಬಿಚ್ಚುತ್ತಿಲ್ಲ. ಈ ನಡುವೆ ಕರ್ನಾಟಕ ಪೊಲೀಸರು ಸಿಪ್ಪೆಯ ರುಚಿ ನೋಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಹಣ್ಣನ್ನು ತಿಂದವರು ಯಾರೂ ಮಾತನಾಡಲು ಹೋಗುತ್ತಿಲ್ಲ. ಇನ್ನು ಕೇರಳ ಪೊಲೀಸರು ಒಬ್ಬರು ಸಬ್ ಇನ್ಸಪೆಕ್ಟರ್ ಹಾಗೂ ಇಬ್ಬರು ಕಾನ್ಸಸ್ಟೇಬಲ್ ಗಳನ್ನು ಹಿಡಿದ ತಕ್ಷಣ ಕರ್ನಾಟಕದ ಎಲ್ಲಾ ಪೊಲೀಸರು ಹೀಗೆ ಎಂದು ಸಾಬೀತುಪಡಿಸಲು ಹೋಗುವುದು ಅವರ ಭ್ರಮೆ. ಈಗ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕದ ಪೊಲೀಸರು ಯಾಕೆ ಹಾಗೆ ಮಾಡಿದರು ಎನ್ನುವುದರ ತನಿಖೆಯಾಗಬೇಕು. ಅವರಿಗೆ ಎಲ್ಲಿಂದಲಾದರೂ ಒತ್ತಡ ಇತ್ತಾ, ಇದರ ಮೂಲ ಏನು ಎನ್ನುವುದನ್ನು ಪತ್ತೆ ಮಾಡಬೇಕು. ಆಗ ಏನಾದರೂ ಸತ್ಯ ಹೊರಗೆ ಬರಬಹುದು. ಅದು ಬಿಟ್ ಕಾಯಿನ್ ಹಗರಣದಲ್ಲಿ ನೈಜ ಆರೋಪಿಗಳ ತನಕ ಹೋಗಲು ಸಹಕಾರಿಯಾಗಬಹುದು. ಒಂದು ವೇಳೆ ರಾಜ್ಯದ ಕಾಂಗ್ರೆಸ್ ಸರಕಾರ ಇಚ್ಚಾಶಕ್ತಿ ಇದ್ದರೆ ಮಾತ್ರ ಇದೆಲ್ಲಾ ಸಾಧ್ಯ!!
Leave A Reply