ಯಾವಾಗ ಸಿಗಲಿದೆ ಗುತ್ತಿಗೆದಾರರ ಬಾಕಿ?

ಬಿಲ್ ಪಾವತಿಸಿ ಅಥವಾ ದಯಾಮರಣ ಕರುಣಿಸಿ ಎಂದು ಬಿಬಿಎಂಪಿ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರಿಗೆ ಹಣ 2000 ಕೋಟಿ ರೂ ಲಭ್ಯವಿದ್ದರೂ ಸುಮಾರು 26 ತಿಂಗಳುಗಳಿಂದ ಗುತ್ತಿಗೆದಾರರು ಕಾರ್ಯ ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿಸಲಾಗಿಲ್ಲ. ಈ ಕೂಡಲೇ ಹಣ ಪಾವತಿಸಿ, ಇಲ್ಲದಿದ್ದರೆ 500 ಮಂದಿ ಬಿಬಿಎಂಪಿ ಗುತ್ತಿಗೆದಾರರಿಗೆ ದಯಾಮರಣ ಕರುಣಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆಯುತ್ತೇವೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಹಿಂದಿನ ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಾಗ ಬಿಲ್ ಸರಿಯಾಗಿ ಪಾವತಿಯಾಗದೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ವಿಷಯ ಮುಂದಿಟ್ಟು ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್ ರಾಜ್ಯವಾಪಿ ವ್ಯಾಪಕ ಪ್ರತಿಭಟನೆ ಮಾಡಿತ್ತು. ಅದರೊಂದಿಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಕೂಡ 40% ಕಮೀಷನ್ ವಿಷಯ ಇಟ್ಟುಕೊಂಡು ಆಗಿನ ವಿಪಕ್ಷ ಮುಖಂಡ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಅದು ಕೂಡ ಕಾಂಗ್ರೆಸ್ಸಿಗೆ ಬಿಜೆಪಿ ವಿರುದ್ಧ ಪ್ರಬಲ ಅಸ್ತ್ರ ಒದಗಿಸಿತ್ತು.
ಈ ಎಲ್ಲಾ ವಿಷಯಗಳ ಲಾಭ ಕಾಂಗ್ರೆಸ್ಸಿಗೆ ದೊರಕಿತ್ತು.
ಈಗ ಅಧಿಕಾರಕ್ಕೆ ಬಂದು ಎರಡು ಮುಕ್ಕಾಲು ತಿಂಗಳು ಕಳೆದು ಹೋದರೂ ಬಿಬಿಎಂಪಿ ಗುತ್ತಿಗೆದಾರರಿಗೆ ಬಾಕಿ ನೀಡಿಲ್ಲ. ಹೀಗಿರುವಾಗ ಇನ್ನು ರಾಜ್ಯದ ಅದೆಷ್ಟೋ ಗುತ್ತಿಗೆದಾರರು ಕೂಡ ಹೀಗೆ ಎಷ್ಟೋ ತಿಂಗಳಿನಿಂದ ಬರಬೇಕಾದ ಬಾಕಿ ಬರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಬಿಬಿಎಂಪಿಯಲ್ಲಿ ಈಗ ಚುನಾಯಿತ ಆಡಳಿತ ಇಲ್ಲದೇ ಇರುವುದರಿಂದ ಅಧಿಕಾರದ್ದೇ ದರ್ಬಾರ್ ನಡೆಯುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿರುವುದರಿಂದ ಏನಾದರೂ ಸಿಗಬಹುದು ಎನ್ನುವ ಆಶಾಭಾವನೆಯನ್ನು ಗುತ್ತಿಗೆದಾರರು ಹೊಂದಿದ್ದಾರೆ. ಈ ಗುತ್ತಿಗೆದಾರರು ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Leave A Reply