ಅವಿಶ್ವಾಸ ನಿಲುವಳಿ ನಮಗೊಂದು ಅವಕಾಶ – ಮೋದಿ

ಲೋಕಸಭೆಯಲ್ಲಿ ಆಡಳಿತರೂಢ ಎನ್ ಡಿಎ ಸರಕಾರದ ಅವಿಶ್ವಾಸ ನಿಲುವಳಿ ಮಂಡಿಸಿರುವ ಇ.ಂ.ಡಿ.ಯಾ. ಮೈತ್ರಿಕೂಟಕ್ಕೆ ಅದೊಂದು ಕೇವಲ ಕಾರ್ಯಕ್ರಮ ಮಾತ್ರ. ಆದರೆ ದೇಶದ ಬೆಳವಣಿಗೆ, ಸಮಗ್ರತೆ, ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಎನ್ ಡಿಎ ಮೈತ್ರಿಕೂಟಕ್ಕೆ ನಮ್ಮ ವಿಷಯವನ್ನು ಜನರ ಮುಂದೆ ಇಡಲು ಇದೊಂದು ಅವಕಾಶ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ವಿಪಕ್ಷಗಳ ಒಕ್ಕೂಟದಲ್ಲಿ ಅವರಿಗೆ ಪರಸ್ಪರರ ಬಗ್ಗೆ ನಂಬಿಕೆ, ವಿಶ್ವಾಸ ಇಲ್ಲ ಎನ್ನುವುದು ದೇಶಕ್ಕೆ ತಿಳಿದಿದೆ. ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವ ಮತ್ತು ಕುಟುಂಬ ರಾಜಕಾರಣಕ್ಕೆ ಮುಕ್ತಾಯ ಹಾಡುವ ನಮ್ಮ ಬದ್ಧತೆ ಯಾವಾಗಲೂ ಅಚಲವಾಗಿದೆ ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ. ಅವಿಶ್ವಾಸ ನಿಲುವಳಿಯ ಮೇಲೆ 16 ಗಂಟೆ ಚರ್ಚೆಗಳು ನಡೆಯಲಿದ್ದು, 15 ಸಂಸದರು ಮಾತನಾಡಲಿದ್ದಾರೆ. ವಿಪಕ್ಷಗಳ ಕಡೆಯಿಂದ ರಾಹುಲ್ ಗಾಂಧಿ ಮೊದಲ ಭಾಷಣ ಮಾಡಿದರೆ ಆಡಳಿತ ಪಕ್ಷದ ಕಡೆಯಿಂದ ಭಾರತೀಯ ಜನತಾ ಪಾರ್ಟಿ ಸಂಸದ ನಿಶಿಕಾಂತ್ ದುಬೆ ಪ್ರಥಮ ಭಾಷಣ ಮಾಡಲಿದ್ದಾರೆ.
ಈ ಅವಿಶ್ವಾಸ ಗೊತ್ತುವಳಿ ಬಗ್ಗೆ ಸಂಸದೀಯ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿಯವರು ಪಕ್ಷದ ಸಂಸದರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ನಾವು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲಿದ್ದೇವೆ ಎಂದು ನುಡಿದಿದ್ದಾರೆ.
ಇನ್ನು ಎನ್ ಸಿಟಿ ಬಿಲ್ ( ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ದೆಹಲಿ ಕಾಯ್ದೆ 1991) ತಿದ್ದುಪಡಿ ಬಗ್ಗೆ ಪಕ್ಷದ ಸಂಸದರ ಸಭೆಯಲ್ಲಿ ಮಾತನಾಡಿದ ಮೋದಿಯವರು ಈ ಮಸೂದೆ ಲೋಕಸಭಾ ಚುನಾವಣೆ ಎಂಬ ಫೈನಲ್ ಪಂದ್ಯದ ಮೊದಲಿನ ಸೆಮಿಫೈನಲ್ ಆಗಿದೆ. ಈಗಾಗಲೇ ನಾವು ರಾಜ್ಯಸಭೆಯಲ್ಲಿ ನಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದೇವೆ. ಫೈನಲ್ ಪಂದ್ಯದ ಮೊದಲು ಇದನ್ನು ಗೆದ್ದು ನಮ್ಮ ಹಾದಿಯಲ್ಲಿ ನಡೆಯೋಣ ಎಂದು ತಿಳಿಸಿದ್ದಾರೆ.
Leave A Reply