ಬೆಂಗಳೂರಿನಲ್ಲಿ ಕಂಬಳ ನಡೆದರೆ ಕೋಣಗಳ ಸಾಗಾಟ ಹೇಗೆ ?
ತುಳುನಾಡಿನ ಪ್ರಮುಖ ಜಾನಪದ ಕ್ರೀಡೆಯಾದ ಕಂಬಳ, ಸಿಲಿಕಾನ್ ಸಿಟಿಯ ಜನರನ್ನು ಬೆರಗುಗೊಳಿಸಲು ಇಲ್ಲಿ ಆಯೋಜನೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತಾದರೆ, ನವೆಂಬರ್ ತಿಂಗಳಲ್ಲೇ ಅರಮನೆ ಮೈದಾನದಲ್ಲಿ ಜೋಡುಕರೆ ಕಂಬಳ ನಡೆಯಲಿದೆ. ಈಗಾಗಲೇ ಮೈಸೂರು ಒಡೆಯರ್ ಕುಟುಂಬದೊಂದಿಗೆ ಮಾತುಕತೆಯೂ ನಡೆದಿದ್ದು, ಸರ್ಕಾರದ ಅನುಮತಿ ಸಿಗುವುದು ಮಾತ್ರ ಬಾಕಿಯಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸುವ ಚಿಂತನೆ ನಡೆದಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ಆರಂಭಗೊಂಡಿದೆ. ಕಂಬಳ ಕರೆಗೆ ರಾಜ ಮಹಾರಾಜ ‘ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ’ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಕಂಬಳ ಕ್ರೀಡೆ ಸಾಮಾನ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಬಳ ಕ್ರೀಡೆ ಹೊಸ ಹಿರಿಮೆಯನ್ನು ಪಡೆದುಕೊಂಡಿದ್ದು, ಹೊರ ಜಿಲ್ಲೆ, ಹೊರರಾಜ್ಯ, ದೇಶ-ವಿದೇಶಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಪೇಟಾ ಸಂಸ್ಥೆ ಕಂಬಳ ಕ್ರೀಡೆಗೆ ವಿರೋಧವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿಷೇಧವಾದ ಸಂದರ್ಭ ಇಡೀ ಕರುನಾಡು ಮಾತ್ರವಲ್ಲದೆ ದೇಶಾದ್ಯಂತ ಕಂಬಳ ಪರ ಹೋರಾಟ ವ್ಯಕ್ತವಾಯಿತು. ಇದಾದ ಬಳಿಕ ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಕಂಬಳ ಕ್ರೀಡೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಸುಪ್ರೀಂ ಕೋರ್ಟ್ ಕೂಡಾ ಪೇಟಾ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಮೂಲಕ ಕಂಬಳ ಕ್ರೀಡೆಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಸುಮಾರು 3 ವರ್ಷಗಳಿಂದ ಕಂಬಳ ಕ್ರೀಡೆಯನ್ನು ರಾಜ್ಯ ರಾಜ್ಯಧಾನಿಯಲ್ಲಿ ಆಯೋಜಿಸಬೇಕೆಂಬ ಆಗ್ರಹ ವ್ಯಕ್ತವಾಗಿದ್ದು, ಅದಕ್ಕೆ ಈಗ ಕಾಲಕೂಡಿ ಬಂದಿದೆ.
ಬೆಂಗಳೂರು ತುಳು ಕೂಟ ಈ ಬಾರಿ ಸುವರ್ಣ ಸಂಭ್ರಮದಲ್ಲಿದ್ದು, ಇದರ ಸವಿ ನೆನಪಿಗಾಗಿ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ. ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ರೂವಾರಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಒಡೆಯರ್ ಕುಟುಂಬಕ್ಕೆ ಸಂಬಂಧಪಟ್ಟ ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆಗೆ ಮೈಸೂರು ರಾಜಮನೆತನದಿಂದ ಅನುಮತಿ ಸಿಕ್ಕಿದ್ದು, ಸಮಿತಿಯು ಈಗಾಗಲೇ ಎರಡು ಸುತ್ತಿನ ಸಭೆ ನಡೆದಿದೆ. ಕಂಬಳಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದ್ದು, ಸರಕಾರಿ ಮಟ್ಟದಲ್ಲಿಅನುಮತಿ ಸಿಗಲು ಬಾಕಿಯಿದೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಭೇಟಿಯಾಗುವುದಾಗಿ ಸಮಿತಿ ತಿಳಿಸಿದೆ.
ಕಂಬಳದ ಎಲ್ಲ ವಿಭಾಗದ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಕಳೆದ ಬಾರಿ ಅಂತಿಮ 8 ಸುತ್ತಿನಲ್ಲಿ ಸ್ಪರ್ಧಿಸಿದ ಕೋಣಗಳಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಕೋಣದ ಯಜಮಾನರು, ಕಂಬಳ ಸಮಿತಿ, ಕಂಬಳ ಸಂಘಟಕರ ಜತೆ ಮಾತನಾಡಿ ಸಹಕಾರ ಕೋರಲಾಗುವುದು. ಕೋಣಗಳನ್ನು ರೈಲಿನಲ್ಲಿ ಸಾಗಾಟ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಜೋಡುಕರೆ ಕಂಬಳ ಕರೆಗೆ, ಪಾರ್ಕಿಂಗ್ ವ್ಯವಸ್ಥೆ, ಏಕಕಾಲಕ್ಕೆ 4 ಲಕ್ಷ ಮಂದಿ ಪ್ರೇಕ್ಷಕರಿಗೆ ಬೇಕಾದಷ್ಟು ಜಾಗದ ವ್ಯವಸ್ಥೆಯಿದೆ. ತುಳುನಾಡಿನಲ್ಲಿ ಕಂಬಳ ಸೀಸನ್ ಆರಂಭವಾಗುವ ಮುನ್ನವೇ ಅಂದರೆ ನವೆಂಬರ್‌ನಲ್ಲಿ ಕಂಬಳ ಆಯೋಜನೆಗೆ ಚಿಂತನೆ ನಡೆದಿದೆ. ಅರಮನೆಯ ಮೈದಾನದ ಪಕ್ಕದಲ್ಲೇ ಕೆರೆಯಿದ್ದು, ಅದರ ನೀರನ್ನು ತಪಾಸಣೆಗೆ ಲ್ಯಾಬ್‌ಗೆ ಕಳುಹಿಸಲಾಗಿದೆ. ನಮ್ಮ ಕಂಬಳ ಹಿರಿಮೆಯನ್ನು ರಾಜ್ಯ, ದೇಶಕ್ಕೆ ಪರಿಚಯಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿಆಯೋಜಿಸುವ ಉದ್ದೇಶ ಹೊಂದಿದ್ದು, ನಮ್ಮ ರಾಜ್ಯಕ್ಕೆ ಅನನ್ಯ ಕೊಡುಗೆ ನೀಡಿದ ಮೈಸೂರು ಒಡೆಯರ ಹೆಸರನ್ನೇ ಐತಿಹಾಸಿಕ ಕಂಬಳ ಕರೆಗೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ತುಳುನಾಡಿನ ಆಹಾರ, ಸಂಸ್ಕೃತಿ-ಆಚಾರ ವಿಚಾರವನ್ನು ಪರಿಚಯಿಸುವ ಕೆಲಸವೂ ಆಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
Leave A Reply