ಸಿದ್ಧಾಂತಕ್ಕಿಂತ ಮಕ್ಕಳ ಭವಿಷ್ಯ ಮುಖ್ಯ!
ಒಬ್ಬ ಶಿಕ್ಷಣ ಸಚಿವರು ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲು ಮಾಡಿದ್ದು ಮಕ್ಕಳ ಪಾಠದಲ್ಲಿ ಕೆಲವು ಪಾಠಗಳನ್ನು ಅವರದ್ದೇ ಭಾಷೆಯಲ್ಲಿ “ಕಿತ್ತು” ಬಿಸಾಡಿದ್ದು. ಅಷ್ಟು ಮಾಡಿ ಅವರು ಖುಷಿ ಪಡುವುದು, ಎದೆಯುಬ್ಬಿಸಿ ನಡೆಯುವುದು, ತಲೆಕೂದಲು ಮತ್ತೆ ಹರಡಿಕೊಳ್ಳುವುದು, ನಾವು ಅಧಿಕಾರದಲ್ಲಿದ್ದ ಕಾರಣ ಏನೂ ಬೇಕಾದರೂ ಮಾಡುತ್ತೇವೆ ಎನ್ನುವ ಅಹಂ ಎಲ್ಲವೂ ನೂತನ ಸರಕಾರದಲ್ಲಿ ನಡೆಯುತ್ತಿದೆ. ಅದೇ ಅವರ ಬಳಿ ಹೋಗಿ “ಸರ್, ನೀವು ಏನೇನೋ ಕಿತ್ತು ಹಾಕಿದ್ದಿರಲ್ಲ, ನಿಮ್ಮದೇ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 52 ಕ್ಷೇತ್ರಗಳಲ್ಲಿ ಕಾಯಂ ಶಿಕ್ಷಕರು ಇಲ್ವಲ್ಲಾ, ಅಲ್ಲೇನು ಕಿತ್ತು ಹಾಕಿಲ್ವಾ” ಎಂದು ಕೇಳಿದರೆ ಅವರ ಬಳಿ ಏನು ಉತ್ತರ ಇದೆ.
ವಿಷಯ ಏನೆಂದರೆ ಒಂದು ಇಡೀ ಊರಿನಲ್ಲಿ ಖಾಯಂ ಶಿಕ್ಷಕರಿಲ್ಲದೇ ಮಕ್ಕಳಿಗೆ ವಿದ್ಯಾಭ್ಯಾಸ ಸಿಗದಿದ್ದರೂ ಪರವಾಗಿಲ್ಲ, ನಮ್ಮ ಪಕ್ಷದ ಸಿದ್ಧಾಂತ ಮುಖ್ಯ ಎನ್ನುವ ನಿಲುವು ತುಂಬಾ ಡೇಂಜರ್. ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು, ಬ್ರಿಟಿಷರ ವಿರುದ್ಧ ನೈಜ ಹೋರಾಟ ಮಾಡಿದವರನ್ನು, ನಮ್ಮ ದೇಶದ ಮೇಲೆ ದಂಡೆತ್ತಿ ಬಂದವರನ್ನು ಸೋಲಿಸಿದವರ ಬಗ್ಗೆ ಮಕ್ಕಳು ಕಲಿಯಬಾರದು ಎನ್ನುವುದು ಈಗಿನ ಕಾಂಗ್ರೆಸ್ ಸರಕಾರದ ಮನಸ್ಥಿತಿ. ಯಾಕೆಂದರೆ ಅವರಿಗೆ ಅರ್ಜೆಂಟಾಗಿ ಮುಸ್ಲಿಮರನ್ನು ಸಂತೃಪ್ತಿಪಡಿಸಬೇಕು. ಅದಕ್ಕಾಗಿ ಅವರು ಬಲಪಂಥಿಯರು ಎನಿಸಿಕೊಂಡವರ ಪಠ್ಯಗಳನ್ನು ಕಿತ್ತು ಬಿಸಾಡಬೇಕಾಗಿದೆ. ಅದರಿಂದ ಮಕ್ಕಳು ವಾಸ್ತವದಲ್ಲಿ ಏನು ಕಲಿಯಬೇಕು ಎನ್ನುವುದಕ್ಕಿಂತ ಅವರು ಕಲಿಯುವ ಪಠ್ಯಗಳಿಂದ ಅಲ್ಪಸಂಖ್ಯಾತರಿಗೆ ನೋವಾಗುತ್ತಾ ಎನ್ನುವುದು ಕಾಂಗ್ರೆಸ್ಸಿಗರ ಅಸಮಾಧಾನ. ಮಕ್ಕಳಿಗೆ ಕಲಿಸಲು ಕಲ್ಯಾಣ ಕರ್ನಾಟಕ, ಗಡಿ ಜಿಲ್ಲೆಗಳಲ್ಲಿ ಸರಿಯಾಗಿ ಖಾಯಂ ಶಿಕ್ಷಕರು ಇದ್ದಾರಾ, ಇಲ್ವಾ ಎನ್ನುವ ಚಿಂತೆ ಸರಕಾರಕ್ಕೆ ಈಗಲೂ ಬಂದಂತೆ ಕಾಣುತ್ತಿಲ್ಲ. ಅಂತರವಿಭಾಗ ವರ್ಗಾವಣೆ ಲಾಭ ಪಡೆದ ಸಾವಿರಾರು ಶಿಕ್ಷಕರು ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ನೂರಾರು ಶಾಲೆಗಳು ಕಾಯಂ ಶಿಕ್ಷಕರಿಲ್ಲದೇ ಬೆರಳೆಣಿಕೆಯಷ್ಟು ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಂಡಿದ್ದಾರೆ. ಇದರಿಂದಾಗಿ ಸರಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಹೊಡೆತ ಬಿದ್ದಿದೆ.
ಸಿದ್ಧಾಂತಕ್ಕಿಂತ ಮಕ್ಕಳ ಭವಿಷ್ಯ ಮುಖ್ಯ!
ಮಾಧ್ಯಮವೊಂದರ ಮಾಹಿತಿಯ ಪ್ರಕಾರ ಏಷ್ಯಾಖಂಡದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದೇವದುರ್ಗ ತಾಲೂಕಿನ 100 ಶಾಲೆಗಳಲ್ಲಿ ಖಾಯಂ ಶಿಕ್ಷಕರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ಕ್ಷೇತ್ರದ 88 ಸರಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ. ಇದು ಶಿಕ್ಷಣ ಸಚಿವರ ಕ್ಷೇತ್ರದಿಂದ ಹಿಡಿದು ಪ್ರತಿ ತಾಲೂಕಿನಲ್ಲಿ ಹೆಚ್ಚು ಕಡಿಮೆ ಇದೇ ಹಣೆಬರಹ. ಇದೆಲ್ಲವನ್ನು ನೋಡುವ ಬದಲು ಯಾವ ಪಠ್ಯ ಕಿತ್ತು ಹಾಕುವುದು ಎನ್ನುವ ಟೆನ್ಷನ್ ಸರಕಾರ ಮೊದಲು ಇದೆ.
ಬಾಣಲೆಯಿಂದ ಬೆಂಕಿ ಬಿದ್ದು ಮೂರು ತಿಂಗಳು!
ಇನ್ನು 40% ಕಮೀಷನ್ ಚೊಂಗು ಹಿಡಿದು ಅಧಿಕಾರದ ದಡ ಸೇರಿದ ಕಾಂಗ್ರೆಸ್ ಸರಕಾರಕ್ಕೆ ಅದೇ ವಿಷಯ ಉರುಳಾಗುವ ಸಾಧ್ಯತೆ ಇದೆ. ಡಿಕೆಶಿ ಕಮೀಷನ್ ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ, ಅವರು ಹಣ ಕೇಳಿದ್ದಾರೆ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಗುತ್ತಿಗೆದಾರ ಹೇಮಂತ್ ಎನ್ನುವವರು ಸುದ್ದಿಗೋಷ್ಟಿ ಮಾಡಿ ಸವಾಲು ಹಾಕಿದ್ದಾರೆ. ವಿಪಕ್ಷದಲ್ಲಿ ಇರುವಾಗ ಆರೋಪ ಮಾಡುವುದು, ಟೀಕೆ ಮಾಡುವುದು ಸುಲಭ. ಅದೇ ಖುರ್ಚಿಯಲ್ಲಿ ಕೂತಾಗ ತಮ್ಮ ವಿರುದ್ಧ ಅದೇ ಬಾಣಗಳು ಬಂದಾಗ ಎದುರಿಸುವುದು ಅಷ್ಟೇ ಸವಾಲು. ತಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಡಿಕೆಶಿ ಹೇಳುತ್ತಾರಾದರೂ ಆಂತರ್ಯದಲ್ಲಿ ಅವರಿಗೆ ಆ ಬಗ್ಗೆ ಒಳಗೊಳಗೆ ಆತ್ಮಸಾಕ್ಷಿ ಏನು ಹೇಳುತ್ತದೆ ಎನ್ನುವುದು ಕೂಡ ಅಷ್ಟೇ ಮುಖ್ಯ. ಯಾಕೆಂದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಂಪಣ್ಣ ಅವರನ್ನು ಗುರಾಣಿಯನ್ನಾಗಿಸಿ ಸಮರ ಎದುರಿಸಿದ ಡಿಕೆಶಿ ಮತ್ತು ತಂಡಕ್ಕೆ ಈಗ ವಾಸ್ತವ ಏನು ಎಂದು ಗೊತ್ತಾಗಿದೆ. ಇರೋದೆ 600 ಕೋಟಿ, 2000 ಕೋಟಿ ರೂಪಾಯಿ ಎಲ್ಲಿಂದ ಕೊಡುವುದು ಎನ್ನುವುದರಿಂದ ಹಿಡಿದು ಈಗ ಕಾಮಗಾರಿಗಳ ತನಿಖೆ ಮಾಡಿಸ್ತೇವೆ ಎನ್ನುವ ತನಕ ಕಾಂಗ್ರೆಸ್ ಪಾಳಯದಿಂದ ಹಲವು ಬಗೆಯ ನೂರಾರು ಉತ್ತರಗಳು ಹೊರಗೆ ಬರುತ್ತಿವೆ. ಈಗ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ದಯಾ ಮರಣ ಕೊಡಿ ಎನ್ನುತ್ತಿದ್ದಾರೆ. ಅದೇ ವಿಷಯವನ್ನು ಡಿಕೆಶಿಯವರ ಬಳಿ ಮಾಧ್ಯಮದವರು ಕೇಳಿದಾಗ ಬ್ಲ್ಯಾಕ್ ಮೇಲಿಗೆ ಹೆದರಲ್ಲ ಎನ್ನುತ್ತಿದ್ದಾರೆ. ಅತ್ತ ಗುತ್ತಿಗೆದಾರರು ಹಣ ಮಂಜೂರು ಮಾಡಲು ತಮ್ಮಿಂದ 10 ರಿಂದ 15 ಶೇಕಡಾ ಕಮೀಷನ್ ಕೇಳಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ನಾನು ಯಾರ ಬಳಿಯೂ ಮಾತನಾಡಿಲ್ಲ ಎಂದು ಡಿಕೆಶಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ ಎನ್ನುವುದು ಕೆಂಪಣ್ಣನವರ ಅಭಿಪ್ರಾಯ. ಗುತ್ತಿಗೆದಾರರನ್ನು ದೇವರೇ ಕಾಪಾಡಬೇಕು!
Leave A Reply