ಮೋದಿ ವಿರುದ್ಧ ಪ್ರಿಯಾಂಕಾ ಗೆಲುವು ನಿಶ್ಚಿತ – ಸಂಜಯ್ ರಾವತ್

ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಿದರೆ ಅವರು ಗೆಲ್ಲಲಿದ್ದಾರೆ ಎಂದು ಉದ್ಭವ್ ಠಾಕ್ರೆ ಬಣದ ರಾಜ್ಯಸಭಾ ಸದಸ್ಯರಾದ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪ್ರಿಯಾಂಕಾ ವಾದ್ರಾ ಗೆಲುವು ನಿಶ್ಚಿತ ಎಂದು ಸಂಜಯ್ ರಾವತ್ ಹೇಳಿರುವುದನ್ನು ಕಾಂಗ್ರೆಸ್ ಒಪ್ಪುತ್ತಾ ಎನ್ನುವುದು ಪ್ರಶ್ನೆ. ಯಾಕೆಂದರೆ ಅಂಗೈ ತೋರಿಸಿ ಅವಲಕ್ಷಣ ಅನಿಸಿಕೊಳ್ಳುವ ಉಮ್ಮೇದಿನಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ.
ಮುಂದಿನ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಅಗ್ನಿ ಪರೀಕ್ಷೆ. ಕನಿಷ್ಟ ನೂರು ಸೀಟುಗಳನ್ನು ದಾಟದೇ ಹೋದರೆ ಮಿತ್ರಪಕ್ಷದ ನೆರವಿನಿಂದ ಅಧಿಕಾರ ಹಿಡಿಯುವುದು ಕಷ್ಟ ಎನ್ನುವುದು ಸೋನಿಯಾ ಗಾಂಧಿಯವರಿಗೆ ಗೊತ್ತಿದೆ. ಹಾಗಿರುವಾಗ ಅವರು ಮಗಳ ರಾಜಕೀಯ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಾರಾ ಎನ್ನುವುದು ಪ್ರಶ್ನೆ. ಆದರೆ ಸಂಸದ ಸಂಜಯ್ ರಾವತ್ ಪ್ರಕಾರ ವಾರಣಾಸಿ ಈ ಬಾರಿ ಸುಲಭದ ತುತ್ತು.
ಅದರೊಂದಿಗೆ ರಾಯಬರೇಲಿ ಮತ್ತು ಅಮೇಠಿಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ. ಅಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುವುದು ಕಷ್ಟ ಎನ್ನುವುದನ್ನು ಅವರು ತಿಳಿಸಿದ್ದಾರೆ. ಆದರೆ ಮೋದಿಯವರು ಈ ಬಾರಿ ವಾರಣಾಸಿಯಿಂದ ಸ್ಪರ್ಧಿಸುತ್ತಾರಾ ಎನ್ನುವುದು ಗ್ಯಾರಂಟಿಯಾಗಿಲ್ಲ. ಅವರು ಬಹುತೇಕ ದಕ್ಷಿಣ ಭಾರತದ ಯಾವುದೇ ರಾಜ್ಯದಿಂದ ಸ್ಪರ್ಧಿಸಬಹುದು ಎನ್ನುವುದು ಸದ್ಯದ ಊಹೆ. ಒಂದು ವೇಳೆ ಮೋದಿಯವರು ವಾರಣಾಸಿಯಿಂದ ಸ್ಪರ್ಧಿಸದೇ, ಬಿಜೆಪಿಯಿಂದ ಬೇರೆ ಮುಖಂಡರು ಯಾರಾದರೂ ಸ್ಪರ್ಧಿಸಿದರೂ ಆಗಲೂ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಾರಾ, ಹಾಗೆ ಆದರೂ ಗೆಲ್ಲುವುದು ಕಷ್ಟ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
Leave A Reply