ಅಕ್ಷಯ್ ಕುಮಾರ್ ಇನ್ನು ಭಾರತೀಯ ನಾಗರಿಕ!

ಭಾರತೀಯ ಚಿತ್ರರಂಗದ ಪ್ರಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೊನೆಗೂ ಭಾರತೀಯ ಪೌರತ್ವವನ್ನು ಪಡೆದುಕೊಂಡಿದ್ದಾರೆ. ದೇಶಭಕ್ತಿಯ ಕಥೆಗಳುಳ್ಳ, ಸೈನಿಕರ ಜೀವನದ ಮೇಲೆ ರಚಿತವಾದ, ಸ್ವಾತಂತ್ರ್ಯ ಯೋಧರ ಮೇಲೆ ಚಿತ್ರಿತವಾದ, ಭರತಖಂಡದ ಅನೇಕ ಚಕ್ರವರ್ತಿಗಳ ಹೋರಾಟದ ಬದುಕಿನ ಸಾರ ಹೊಂದಿರುವ ಅನೇಕ ಚಲನಚಿತ್ರಗಳಲ್ಲಿ ನಾಯಕನಟನಾಗಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ಆದರೂ ಅವರೇ ಒಪ್ಪಿಕೊಂಡಂತೆ ಕೆನಡಾ ದೇಶದ ಪ್ರಜೆಯಾಗಿದ್ದ ಕಾರಣ ಆಗಾಗ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಕೆನಡಾ ಕುಮಾರ್ ಎಂದು ಟ್ರೋಲ್ ಗೆ ಒಳಗಾಗುತ್ತಿದ್ದರು. ದೇಶದಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಪಾವತಿಸುವ ನಟನಾಗಿದ್ದರೂ ಅವರ ಕೆನಡಾ ಪೌರತ್ವದಿಂದಾಗಿ ಅನೇಕ ಬಾರಿ ಮುಜುಗರಕ್ಕೆ ಒಳಗಾಗಬೇಕಾಗುತ್ತಿತ್ತು.
ಕಾಕತಾಳೀಯವೋ ಎನ್ನುವಂತೆ ಅವರಿಗೆ ಭಾರತದ 77 ನೇ ಸ್ವಾತಂತ್ರ್ಯದಿನದಂದೇ ಭಾರತೀಯ ಪೌರತ್ವ ಸಿಕ್ಕಿದೆ. ಅದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ “ದಿಲ್ ಔರ್ ಸಿಟಿಜನ್ ದೋನೋ ಹಿಂದೂಸ್ತಾನಿ, ಹ್ಯಾಪಿ ಇಂಡಿಪೆಂಡೆನ್ಸ್ ಡೇ, ಜೈ ಹಿಂದ್” ಎಂದು ಬರೆದಿದ್ದಾರೆ. ಸದ್ಯ ಓಮೈಗಾರ್ಡ್ -2 ಯಶಸ್ಸಿನಲ್ಲಿರುವ ಅಕ್ಷಯ್ ಕುಮಾರ್ ಕೈಯಲ್ಲಿ ಪ್ರತಿ ವರ್ಷ ಕನಿಷ್ಟ 4 – 5 ಸಿನೆಮಾಗಳು ಇದ್ದೇ ಇರುತ್ತವೆ!
Leave A Reply