ಹಳೆ ಫೋಟೋ ಶೇರ್ ಮಾಡಿ ಸಂಭ್ರಮಿಸಿದ ಸುಮಲತಾ!

ಬೆಲೆಕಟ್ಟಲಾಗದ ಫೋಟೋ ಇವತ್ತು ಸಿಕ್ಕಿತು ಎಂದು ಸಂಭ್ರಮ ಹಂಚಿಕೊಂಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್. 2006 ರಲ್ಲಿ ಅಂಬರೀಶ್ ಅವರು ಬೆಂಗಳೂರಿನ ಕೆಎಸ್ ಸಿಎ ಸ್ಟೇಡಿಯಂನಲ್ಲಿ ಎಂ.ಎಸ್.ಧೋನಿಯವರಿಗೆ ವೈಯಕ್ತಿಕವಾಗಿ ಎರಡು ಲಕ್ಷ ರೂಪಾಯಿ ಚೆಕ್ ನೀಡಿ ಶುಭ ಹಾರೈಸಿದ ಫೋಟೋವನ್ನು ಸುಮಲತಾ ಅಂಬರೀಶ್ ಅವರು “ಎಕ್ಸ್”ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಂಬರೀಶ್ ಅವರು ಅದರ ಮೊದಲು ಒಮ್ಮೆ ಧೋನಿಯವರ ತಂದೆಯವರ ಸಂದರ್ಶವನ್ನು ಟಿವಿಯಲ್ಲಿ ನೋಡುತ್ತಿದ್ದರಂತೆ. ಆ ದಿನಗಳಲ್ಲಿ ಧೋನಿ ಇನ್ನು ಇಷ್ಟು ಪ್ರಸಿದ್ಧಿಗೆ ಬಂದಿರಲಿಲ್ಲ. ಉದಯೋನ್ಮುಖ ಆಟಗಾರರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದರು. ಆಗ ಅವರನ್ನು ನೋಡಲು ಮನೆಗೆ ಅತಿಥಿಗಳು ಬರುತ್ತಿದ್ದರು. ಆದರೆ ಬಂದವರಿಗೆ ಕುಳಿತುಕೊಳ್ಳಲು ಸರಿಯಾಗಿ ಆಸನದ ವ್ಯವಸ್ಥೆ ಇರಲಿಲ್ಲ. ಈ ಮಾತನ್ನು ಧೋನಿಯವರ ತಂದೆಯವರು ಹೇಳಿದ್ದನ್ನು ಕೇಳಿ ಅಂಬರೀಶ್ ಭಾವುಕರಾಗಿದ್ದರಂತೆ.
ದೊಡ್ಡ ಕ್ರೀಡಾಪ್ರೇಮಿಯಾಗಿದ್ದ ಅಂಬರೀಶ್ ಅವರು ಕ್ರಿಕೆಟ್ ಆಟದ ಬಗ್ಗೆ ಉತ್ತಮ ಜ್ಞಾನವನ್ನು ಕೂಡ ಹೊಂದಿದ್ದರು. ಅಂಬರೀಶ್ ಅವರು ಅಂದು ಧೋನಿಯವರಿಗೆ ಚೆಕ್ ಕೊಟ್ಟು ಪ್ರೋತ್ಸಾಹಿಸಿದ ಫೋಟೋ ಕಳೆದುಹೋಗಿದ್ದು, ಬಹಳ ಕಾಲದ ನಂತರ ಸುಮಲತಾ ಅವರಿಗೆ ಸಿಕ್ಕಿದೆ. ಇದು ಆವತ್ತಿನ ದಿನಗಳನ್ನು ಅವರಿಗೆ ನೆನಪಿಸಿದೆ. ಈ ಫೋಟೋವನ್ನು ಅವರು ಧೋನಿಯವರಿಗೂ ಟ್ಯಾಗ್ ಮಾಡಿದ್ದು, “ಈ ಘಳಿಗೆ ನಿಮಗೆ ನೆನಪಿರಲಿಕ್ಕಿಲ್ಲ, ಆದರೆ ನಿಮ್ಮ ಸಾಧನೆ ನಿಜಕ್ಕೂ ದೇಶಕ್ಕೆ ಹೆಮ್ಮೆ ತರುವಂತದ್ದು” ಎಂದು ಬರೆದಿದ್ದಾರೆ.
Leave A Reply