ಪುನೀತ್ ಕೆರೆಹಳ್ಳಿ ಹೆಬಿಯಸ್ ಕಾರ್ಪಸ್, ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್!
ತನ್ನನ್ನು ಗೂಂಡಾ ಕಾಯ್ದೆಯಡಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಸಲ್ಲಿಸಿದ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಿಸಿದ ಹೈಕೋರ್ಟ್ ನ್ಯಾಯಪೀಠ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾನೂನು ಮತ್ತು ಶಾಂತಿ ಪಾಲನಾ ವಿಭಾಗದ ಅಧೀನ ಕಾರ್ಯದರ್ಶಿ ಸೇರಿದಂತೆ ಒಟ್ಟು ಆರು ಪ್ರತಿವಾದಿಗಳಿಗೆ ನೋಟಿಸು ಜಾರಿಗೊಳಿಸಲು ಆದೇಶಿಸಿದೆ.
ಪುನೀತ್ ಪರ ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಅವರು ವಾದಿಸಿದರು. ನ್ಯಾಯಪೀಠದ ಎದುರು ಸವಿಸ್ತಾರವಾಗಿ ವಾದ ಮಂಡಿಸಿದ ಎಂ ಅರುಣ್ ಶ್ಯಾಮ್ ಅವರು “ಅರ್ಜಿದಾರರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅದಕ್ಕಾಗಿ ರಾಷ್ಟ್ರ ರಕ್ಷಣಾ ಪಡೆ ಹೆಸರಿನ ಸಂಘಟನೆಯನ್ನು ಕಟ್ಟಿದ್ದಾರೆ. ದೇಶಕ್ಕಾಗಿ ಹೋರಾಡುವ ಸಮಾನ ಮನಸ್ಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಹಲವು ಕ್ರಿಮಿನಲ್ ಪ್ರಕರಣಗಳನ್ನು ಹೂಡಲಾಗಿದೆ. ರಾಜಕೀಯ ದ್ವೇಷದ ಕಾರಣಕ್ಕೆ ಅವರನ್ನು ಅಗಸ್ಟ್ 11 ರಂದು ಅಕ್ರಮವಾಗಿ ಬಂಧಿಸಲಾಗಿದೆ” ಎಂದು ಹೇಳಿದರು.
“ನಗರ ಪೊಲೀಸ್ ಆಯುಕ್ತರು ಯಾವುದೇ ವಿವೇಚನೆ ಬಳಸದೆ ಏಕಾಏಕಿ ಗೂಂಡಾ ಕಾಯ್ದೆಯಡಿ ಅವರ ವಿರುದ್ಧ ಬಂಧನದ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಅರ್ಜಿದಾರರು ನೀಡಿದ್ದ ಮನವಿಯನ್ನು ಪರಿಗಣಿಸಿಲ್ಲ. ಇದು ಏಕಪಕ್ಷೀಯ ನಡೆ. ಹಾಗಾಗಿ ಅವರನ್ನು ಬಂಧಿಸಲು ಹೊರಡಿಸಿರುವ ಆದೇಶ ಅಕ್ರಮವಾಗಿದ್ದು, ಅದನ್ನು ರದ್ದುಪಡಿಸಬೇಕು” ಎಂದು ಅವರು ಕೋರಿದರು. ಅವರ ಕೋರಿಕೆಯನ್ನು ಹೈಕೋರ್ಟ್ ಮನ್ನಿಸಿರುವುದು ಪುನೀತ್ ಕೆರೆಹಳ್ಳಿ ಪ್ರಕರಣದಲ್ಲಿ ವಾದಿಗೆ ಸಿಕ್ಕಿರುವ ಆರಂಭಿಕ ಜಯ ಎಂದು ಹೇಳಬಹುದು
Leave A Reply