ಸಿಎಂ ಭೇಟಿಯಾದ ಬಿಜೆಪಿಯ ಇನ್ನೊಬ್ಬ ಶಾಸಕ!
ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿಯ ಒಬ್ಬೊಬ್ಬರೇ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗುತ್ತಿದ್ದಾರೆ. ಮೊದಲಿಗೆ ಎಸ್ ಟಿ ಸೋಮಶೇಖರ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಾಧ್ಯಮಗಳು ಕೇಳಿದ್ದಕ್ಕೆ ಕ್ಷೇತ್ರದ ಪ್ರಗತಿಗಾಗಿ ಭೇಟಿಯಾಗಿದ್ದೆ ಎಂದು ಹೇಳಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಸಿಎಂ ಬಿಡುಗಡೆಗೊಳಿಸಿದರು.
ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸೋಮಶೇಖರ್ ಅವರು ಹೇಳುತ್ತಲೇ ಬರುತ್ತಿದ್ದರಾದರೂ ಅವರನ್ನು ಲೋಕಸಭೆಗೆ ಮತ್ತು ಅವರ ಮಗನನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಸುವ ಮಾತುಕತೆ ನಡೆದಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆ ವಿಷಯ ಚರ್ಚೆಯಲ್ಲಿ ಇರುವಂತೆ ಮಾಜಿ ಶಾಸಕ, ಬಿ.ಎಸ್ ವೈ ಆಪ್ತ ಮತ್ತು ಅವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಎಂಪಿ ರೇಣುಕಾಚಾರ್ಯ ಅವರು ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಕಠಿಣ ಮಾತುಗಳಿಂದ ಬಿಜೆಪಿಯನ್ನು ಅವರು ಟೀಕಿಸುತ್ತಾ ಬರುತ್ತಿದ್ದರು. ಹಾಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡರು ಹೇಳಿದರೂ ಅವರು ಸೊಪ್ಪು ಹಾಕಿರಲಿಲ್ಲ. ಸಭೆಗೆ ಕರೆದಾಗಲೂ ಗೈರು ಹಾಜರಾಗಿ ತಮ್ಮ ಕೋಪವನ್ನು ಪ್ರದರ್ಶಿಸಿದ್ದರು. ಅದರ ನಂತರ ಅವರು ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು.
ಈಗ ಇದೆಲ್ಲವೂ ನಡೆಯುತ್ತಿರುವಾಗಲೇ ಬಿಜೆಪಿಯ ಮತ್ತೊಬ್ಬ ಶಾಸಕ, ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಾವು ತಮ್ಮ ಕ್ಷೇತ್ರ ಯಲ್ಲಾಪುರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಕೋರಲು ಹೋಗಿರುವುದಾಗಿ ಮಾಧ್ಯಮಗಳಿಗೆ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರೇ ಬಿಜೆಪಿ ಶಾಸಕರು, ಮಾಜಿ ಶಾಸಕರು ಸಿದ್ಧರಾಮಯ್ಯನವರನ್ನು ಏನಾದರೊಂದು ನೆಪ ಇಟ್ಟುಕೊಂಡು ಭೇಟಿ ಮಾಡುತ್ತಿದ್ದಾರೆ. ಕೇಳಿದರೆ ರಾಜಕೀಯ ಮಾತನಾಡಲೇ ಇಲ್ಲ ಎನ್ನುತ್ತಿದ್ದಾರೆ.
Leave A Reply