ಒಂದು ಕಡೆ ಚಂದ್ರಯಾನ, ಮತ್ತೊಂದೆಡೆ ಸರ್ವರ್ ಡೌನ್!
ನಾವು ನಮ್ಮನ್ನು ಎಷ್ಟೇ ಮುಂದುವರೆದಿದ್ದೇವೆ ಎಂದು ಅಂದುಕೊಂಡರೂ ಕೆಲವೊಮ್ಮೆ ಸರಕಾರಿ ಇಲಾಖೆಗಳಲ್ಲಿ ಆಗುವ ಕಿರಿಕಿರಿಗಳಿಂದ ನಮ್ಮದು ಇಷ್ಟೇನಾ ಎನ್ನುವ ಫಿಲಿಂಗ್ ಉಂಟಾಗುತ್ತದೆ. ಅದು ನಿಮ್ಮ ಅನುಭವಕ್ಕೂ ಬಂದಿರಬಹುದು. ಅತ್ತ ನಮ್ಮ ಹೆಮ್ಮೆಯ ವಿಜ್ಞಾನಿಗಳು ಚಂದ್ರನಲ್ಲಿಗೆ ಲ್ಯಾಂಡರ್ ಕಳುಹಿಸಿ ಸಂಭ್ರಮಪಡುತ್ತಿದ್ದರೆ ಇತ್ತ ಒಂದು ಸರ್ವರ್ ಸರಿ ಮಾಡಲಾಗದೇ ನಮ್ಮ ಅಧಿಕಾರಿಗಳು ಜನರ ಮುಂದೆ ಸಣ್ಣವರಾಗುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ 18 ದಿನಗಳಿಂದ ಯಾವುದೇ ಈ- ಖಾತೆ ಆಗುತ್ತಿಲ್ಲ. ಕೇಳಿದರೆ ಸರ್ವರ್ ಡೌನ್ ಎನ್ನಲಾಗುತ್ತದೆ. ಎಲ್ಲಿ ಎಂದು ಕೇಳಿದರೆ ಬೆಂಗಳೂರಿನಲ್ಲಿ ಸರ್ವರ್ ಡೌನ್ ಆಗಿದೆ. ಆದ್ದರಿಂದ ಇಲ್ಲಿ ಕೂಡ ಸಮಸ್ಯೆ ಆಗಿದೆ ಎನ್ನುತ್ತಾರೆ. ಹೀಗಾದರೆ ಹೇಗೆ ಎನ್ನುವುದನ್ನು ಬೆಂಗಳೂರಿನಲ್ಲಿ ಹಾಳಾದ ಸರ್ವರ್ ಎದುರು ಕುಳಿತು ಅಧಿಕಾರಿಗಳು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕು.
ಹೀಗೆ ವಾರಗಟ್ಟಲೆ ಸರ್ವರ್ ಡೌನ್ ಆದರೆ ಅರ್ಜೆಂಟಾಗಿ ಈ – ಖಾತಾ ಮಾಡಿಸಿಕೊಳ್ಳಬೇಕಾದ ಒತ್ತಡದಲ್ಲಿರುವ ಜನರು ಏನು ಮಾಡಬೇಕು. ಕೆಲವರಿಗೆ ಮಗಳ, ತಂಗಿಯ ಮದುವೆಗೆ ಅರ್ಜೆಂಟಾಗಿ ಈ ಖಾತಾ ಇಲ್ಲದೇ ಹೋದರೆ ಸೇಲ್ ಡೀಡ್ ಆಗುವುದಿಲ್ಲ. ಮುಂಬೈ ನೆಲೆಸಿರುವ ನಮ್ಮ ಊರಿನ ಯಾವುದಾದರೂ ವ್ಯಕ್ತಿಗೆ ಜಾಗ ಖರೀದಿಸುವುದಾಗಿದ್ದರೆ ಈ ಸಮಸ್ಯೆಯಿಂದ ಅದು ಮುಂದಕ್ಕೆ ಹೋಗುತ್ತದೆ. ನಾವು ಚಂದ್ರನಲ್ಲಿಗೆ ಹೋದ ನಾಲ್ಕನೇ ದೇಶ ಎನ್ನುವ ಖುಷಿಯಲ್ಲಿದ್ದೇವೆ. ತಾಂತ್ರಿಕವಾಗಿ ತುಂಬಾ ಮುಂದುವರೆದಿದ್ದೇವೆ ಎಂದು ನಾವು ಅಂದುಕೊಂಡರೂ ಈ ಸರ್ವರ್ ಡೌನ್ ನಂತಹ ಸಮಸ್ಯೆಯನ್ನು ಪರಿಹರಿಸಲು 18 ದಿನಗಳು ಬೇಕಾಗುತ್ತದೆ ಎಂದರೆ ಬಾಹ್ಯಕಾಶ ತಂತ್ರಜ್ಞಾನ ಎಷ್ಟೇ ಮುಂದುವರೆದಿದೆ ಎಂದು ಅಂದುಕೊಂಡರೂ ನಮ್ಮ ಸರಕಾರಿ ಇಲಾಖೆಗಳು ಇವತ್ತಿಗೂ ಎಲ್ಲಿ ಇರಬೇಕೋ ಅಲ್ಲಿಯೇ ಇವೆ ಎನ್ನುವುದು ಬೇಸರದ ಸಂಗತಿ.
ಇಚ್ಚಾಶಕ್ತಿಯ ಕೊರತೆ!
ಒಂದು ತಾಂತ್ರಿಕ ತೊಂದರೆ ಯಾವುದೇ ಸರಕಾರಿ ಯಂತ್ರದಲ್ಲಿ ಕಾಣಿಸಿಕೊಂಡರೂ ಅದು ಅರ್ಧ ಗಂಟೆಯೊಳಗೆ ಸರಿಯಾಗಿಬಿಡಬೇಕು. ಅದು ಆಗದಿದ್ದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಅಧಿಕಾರಿಗಳ ಮತ್ತು ಅವರನ್ನು ಆಳುತ್ತಿರುವ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಈ – ಖಾತಾ ಮಾಡಿಸುವುದು ಒಂದೇ ಸರ್ವರ್ ನಲ್ಲಿದೆ. ಆ ಸರ್ವರ್ ನಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ನಿಗದಿಪಡಿಸಿದ ಜಾಗ ಸೀಮಿತವಾಗಿತ್ತು. ಆದ್ದರಿಂದ ಇಲ್ಲಿನ ದಾಖಲೆಗಳ ಹೆಚ್ಚಳ ಮತ್ತು ಒತ್ತಡದ ಪರಿಣಾಮವಾಗಿ ಅದು ಹ್ಯಾಂಗ್ ಆಗಿದೆ ಎನ್ನುವ ಮಾಹಿತಿಯನ್ನು ನೀಡಲಾಗುತ್ತಿದೆ. ಬುಧವಾರ ಸಂಜೆಯೊಳಗೆ ಸರಿ ಮಾಡುವ ಭರವಸೆ ನೀಡಲಾಗಿದೆ. ಅದರೊಂದಿಗೆ ಇನ್ನೊಂದು ಶಾಕಿಂಗ್ ನ್ಯೂಸ್ ಕೂಡ ಸರಕಾರದ ಕಡೆಯಿಂದ ನೀಡಲಾಗಿದೆ. ಅದೇನೆಂದರೆ ಇಡೀ ರಾಜ್ಯಕ್ಕೆ ಒಂದೇ ಸರ್ವರ್ ಎಂದು ನಿರ್ಧಾರವಾಗಿದೆ. ಕೇವಲ ಎರಡು ಸ್ಥಳೀಯಾಡಳಿತ ಸಂಸ್ಥೆಗಳ ಈ – ಖಾತಾ ಮಾಡಿಸುವಾಗಲೇ ಈ ಸರ್ವರ್ ಡೌನ್ ಆಗುತ್ತಿದೆ. ಇನ್ನು ಇಡೀ ರಾಜ್ಯದ ಏಳು ಪಾಲಿಕೆಗಳ ದಾಖಲೆಗಳನ್ನು ಇದರಲ್ಲಿ ಅಪಲೋಡ್ ಮಾಡಲಾಗುವಾಗ ಇನ್ನೆಷ್ಟು ಬಾರಿ ಹ್ಯಾಂಗ್ ಆಗುತ್ತದೆ ಎನ್ನುವುದನ್ನು ಊಹಿಸುವಾಗಲೇ ಈ – ಖಾತಾ ಮಾಡಿಸುವವರಿಗೆ ಹೆದರಿಕೆ ಉಂಟಾಗಬಹುದು.
ಅಷ್ಟಕ್ಕೂ ಈ ಸರ್ವರ್ ಯಾವಾಗ ಆಗಿರುವುದು?
ಪ್ರೇಮಾನಂದ ಶೆಟ್ಟಿಯವರು ಮೇಯರ್ ಆಗಿದ್ದಾಗ ಕೊನೆಯ ಮೀಟಿಂಗ್ ಮೇಲೆ ಇದು ಜಾರಿಗೆ ಬಂದಿರುವುದು. ಆಗಿನ್ನು ಸರ್ವರ್ ಹೊಸತು. ಇಷ್ಟು ಬೇಗ ಸಮಸ್ಯೆ ಕಾಣಿಸಿಕೊಂಡು ಹೀಗೆಲ್ಲಾ ತೊಂದರೆಯಾಗುತ್ತದೆ ಎಂದರೆ ಈ ಬಗ್ಗೆ ತಕ್ಷಣ ವಿಚಾರಣೆಯನ್ನು ಮಾಡಬೇಕು. ಇದರಿಂದ ಮಂಗಳೂರಿನವರ ಕಷ್ಟ ಪರಿಹಾರ ಆಗಬಹುದು. ಈಗ ಬುಧವಾರ ಎಲ್ಲವೂ ಸರಿ ಆಗುತ್ತದೆ ಎಂದು ಹೇಳಲಾಗುತ್ತದೆಯಾದರೂ ಅದು ನಂತರ ಮತ್ತೆ ಯಾವಾಗ ಈಗಿನಂತೆ ಹ್ಯಾಂಗ್ ಆಗುತ್ತದೆ ಎಂದು ಹೇಳಲಾಗದು. ಈ ಬಗ್ಗೆ ಪಾಲಿಕೆಯಲ್ಲಿ ಮೇಯರ್ ಆಗಲಿ ಸದಸ್ಯರಿಗೆ ಆಗಲಿ ಏನೂ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಹೇಗೂ ಪಾಲಿಕೆಯ ಚುನಾವಣೆಗೆ ಎರಡು ವರ್ಷ ಇದೆಯಲ್ಲ!
Leave A Reply