ಬೇಲಿ ಹೊಲ ಇಬ್ಬರೂ ಸೇರಿ ಊರನ್ನೇ ಮೇಯುತ್ತಿದ್ದವು!
ಹೋಟೇಲಿನಲ್ಲಿ ನಿತ್ಯ ಬರೀ ಪಾಯಸ ಮಾಡುವವನಿಗೆ ಇನ್ನು ನೀನು ಕಾಫಿ ಮಾಡುವ ವಿಭಾಗಕ್ಕೆ ಎಂದು ಶಿಫ್ಟ್ ಮಾಡಿದರೆ ಅವನು ಏನು ಮಾಡುತ್ತಾನೆ. ಒಂದಾ ಅಲ್ಲಿ ಕಾಫಿಗೆ ಸಕ್ಕರೆ ಜಾಸ್ತಿ ಹಾಕಿ ಹಾಳು ಮಾಡಿಬಿಡುತ್ತಾನೆ ಅಥವಾ ಕಾಟಾಚಾರದ ಕೆಲಸ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಾನೆ. ಅದರಿಂದ ಹೋಟೇಲಿಗೆ ಕೆಟ್ಟ ಹೆಸರು ಬರುತ್ತದೆ. ಇದು ಬರಿ ಒಂದು ಹೋಟೇಲಿನ ಕಥೆ ಹೀಗೆ ಆದರೆ ಅರವತ್ತು ವಾರ್ಡಿರುವ ಒಂದೂವರೆ ವಿಧಾನಸಭಾ ಕ್ಷೇತ್ರವಿರುವ ವಿಶಾಲ ಊರಿಗೆ ಅನ್ವಯ ಮಾಡಿದರೆ ಹೇಗಾಗಬೇಡಾ? ಹಾಗೆ ಪಾಲಿಕೆ ವ್ಯಾಪ್ತಿಯಲ್ಲಿ ಬೇರೆ ಕಾಮಗಾರಿಗಳನ್ನು ನೋಡುತ್ತಿದ್ದ ಇಂಜಿನಿಯರ್ ಗಳನ್ನು ಕರೆದು ನೀವಿನ್ನು ಒಳಚರಂಡಿ ಕೂಡ ನೋಡಬೇಕು ಎಂದು ಹೇಳಿದರೆ ಅವರು ಏನು ತಾನೆ ಮಾಡಿಯಾರು, ಒಳಚರಂಡಿ ಬ್ಲಾಕ್ ಆದ ಕಡೆ ಅಲ್ಲಿ ರಂಧ್ರ ಕೊರೆದು ತ್ಯಾಜ್ಯವನ್ನು ಸನಿಹದಲ್ಲಿರುವ ತೋಡಿಗೆ ಬಿಟ್ಟಾರು. ಹಾಗಾದರೆ ಒಳಚರಂಡಿ ಕಾಮಗಾರಿಗಳನ್ನು ನೋಡಿಕೊಳ್ಳಲೆಂದೇ ಯಾರಾದರೂ ಬೇಕಾ? ಬೇಕು. ಹಿಂದೆ ಇದ್ರು. ಒಳಚರಂಡಿಗಾಗಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅವರ ಕೈಕೆಳಗೆ ಜ್ಯೂನಿಯರ್ ಇಂಜಿನಿಯರ್ ಇರುತ್ತಿದ್ದರು. ಆದರೆ ಅದರಲ್ಲಿ “ತಿನ್ನಲು” ಅಷ್ಟು ಸಿಗಲ್ಲ ಎಂದು ಎಲ್ಲರಿಗೂ ಹಂಚಿಕೊಡುವ ಕೆಲಸ ಶುರುವಾಯಿತು. ಅದರ ನಂತರವೇ ಹೀಗೆ ಕೆಲಸ ಕಾಮಗಾರಿಗಳು ಚರಂಡಿ ಹಿಡಿಯಲು ಶುರು ಮಾಡಿದ್ದವು.
ಬೇಲಿ ಹೊಲ ಇಬ್ಬರೂ ಸೇರಿ ಊರನ್ನೇ ಮೇಯುತ್ತಿದ್ದವು!
ಈಗ ನೋಡಿದರೆ ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ತಿಂಗಳ ಸಭೆಯಲ್ಲಿ ಒಳಚರಂಡಿಯದ್ದೇ ವಿಷಯ. ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಹಾಕುತ್ತಾ ಇರುತ್ತಾರೆ. ಅಷ್ಟಕ್ಕೂ ಈ ಸಮಸ್ಯೆಗೆ ಕಾರಣ ಏನು? ಬೇರೆ ಯಾರು? ಇವರೇ.. ಬಿಜೆಪಿ ಮತ್ತು ಬಹುತೇಕ ವರ್ಷ ಕಾಂಗ್ರೆಸ್ ಆಡಳಿತ ಇದ್ದ ಅವಧಿಯಲ್ಲಿ ಯೋಜನೆಗಾಗಿ ಬಂದ ಕೋಟಿಗಟ್ಟಲೆ ಹಣ ಸರಿಯಾಗಿ ಬಳಕೆಯಾಗಿದೆಯಾ ಎಂದು ಯಾವ ಪಕ್ಷದವರಾದರೂ ನೋಡಿದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ಇದರ ಮೊದಲ ಸ್ತರದಲ್ಲಿ 108 ಕೋಟಿ ರೂಪಾಯಿ ಫಂಡ್ ಮಂಜೂರಾಗಿತ್ತು. 2002 ಇಸವಿಯಲ್ಲಿ ಅದು ದೊಡ್ಡ ಮೊತ್ತ. ಆದರೆ ಅಷ್ಟು ಫಂಡ್ ಇದ್ದರೂ ಅದರ ಒಂದು ರೂಪಾಯಿ ಆದರೂ ಸಮರ್ಪಕವಾಗಿ ಸದ್ಭಳಕೆ ಆಗಿದೆಯಾ ಎನ್ನುವುದನ್ನು ನೋಡಬೇಕು. ಆಗಿಲ್ಲ. ಆಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಪಕ್ಷ. ಅವರು ಏನೂ ಕೆಲಸ ಮಾಡದೇ ಫಂಡ್ ತಿಂದು ತೇಗುತ್ತಿದ್ದರೂ ಪಾಲಿಕೆಯಲ್ಲಿ ವಿಪಕ್ಷದಲ್ಲಿದ್ದ ಬಿಜೆಪಿ ಕೇಳಿಲ್ಲ. ಆರು ವರ್ಷಗಳ ಹಿಂದೆ ಒಮ್ಮೆ ಆಗ ನಗರಾಭಿವೃದ್ಧಿ ಸಚಿವರಾಗಿದ್ದ ರೋಶನ್ ಬೇಗ್ ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ಬಂದವರು ಫ್ರೀ ಇದ್ದಿರಬೇಕು, ಅದಕ್ಕೆ ಸುರತ್ಕಲ್ ಕಡೆನೂ ಬಂದಿದ್ದರು. ಅವರಿಗೆ ಅಲ್ಲಿನ ಒಳಚರಂಡಿಯ ಅವ್ಯವಸ್ಥೆ ನೋಡಿ ದಂಗುಬಡಿದಿತ್ತು. ಅವರು ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆದೇಶ ನೀಡಿದ್ದರು. ಆದರೆ ತನಿಖೆ ಹೇಗೆ ಆಗುತ್ತೆ. ಬೇಲಿಯೇ ಎದ್ದು ಹೊಲ ಮೇಯುತ್ತಾ ಇತ್ತಲ್ಲ. ಈ ಎಡಿಬಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಧಿಕಾರಿಯೇ ನಂತರ ಕಾಂಗ್ರೆಸ್ಸಿನಿಂದ ಶಾಸಕರಾಗಿದ್ದರಲ್ಲ, ಹಾಗಿರುವಾಗ ವಿಚಾರಣೆ ಯಾರ ವಿರುದ್ಧ? ಆ ನೂರೆಂಟು ಕೋಟಿಯಲ್ಲಿ ಎಷ್ಟು ಮಂದಿ ಮಿಂದೆದಿದ್ದಾರೋ? ಭಗವಂತನಿಗೆ ಗೊತ್ತು. ಅವರ ಬಗ್ಗೆ ತನಿಖೆ ಆಗಬೇಕೆಂದು ಬಿಜೆಪಿ ಒತ್ತಾಯ ಮಾಡಲೇ ಇಲ್ಲ. ಹಟ ಹಿಡಿಯಲೇ ಇಲ್ಲ.
ಲಾಭವಿಲ್ಲದೇ ಕಾರ್ಪೋರೇಟರ್ ಮನೆಯಿಂದ ಆಚೆ ಬರಲ್ಲ, ಹೊಸ ಗಾದೆ!
ಈಗ ಕೇಂದ್ರ ಸರಕಾರದ ಅಮೃತ ಯೋಜನೆಯ ಕೋಟ್ಯಾಂತರ ರೂಪಾಯಿ ಅನುದಾನದಿಂದ ಈ ಒಳಚರಂಡಿಯ ಮಿಸ್ಸಿಂಗ್ ಲಿಂಕ್ ಸರಿಪಡಿಸುವ ಕೆಲಸ ನಡೆಯುತ್ತಿದೆ. ಹಾಗಂತಲೆ ಪಾಲಿಕೆಯ ಅರವತ್ತು ವಾರ್ಡಿನ ಯಾವುದೇ ಕಾರ್ಪೊರೇಟರ್ ಅವರಿಗೆ ಕೇಳಿ ನೋಡಿ. ನಿಮ್ಮ ವಾರ್ಡಿನಲ್ಲಿ ಎಲ್ಲೆಲ್ಲಿ ಮಿಸ್ಸಿಂಗ್ ಲಿಂಕ್ ಕಾಮಗಾರಿ ನಡೆಯುತ್ತಿದೆ ಎಂದು ಕೇಳಿದರೆ ಅವರಿಗೆ ಗೊತ್ತೆ ಇರುವುದಿಲ್ಲ. ಈಗ ಎಡಿಬಿ-2 ನಿಂದ ಕೆಲಸ ನಡೆಯುತ್ತಿದೆ. ಮ್ಯಾನ್ ಹೋಲ್ ಒವರ್ ಫ್ಲೋ ಆದರೆ ಅಲ್ಲಿಯೇ ತೋಡಿಗೆ ಬಿಡುವ ಕೆಲಸ ನಡೆಯುತ್ತಿದೆ. ಈ ಕಾಂಗ್ರೆಸ್, ಬಿಜೆಪಿ ಪ್ರತಿ ತಿಂಗಳ ಸಭೆಯಲ್ಲಿ ಪರಸ್ಪರ ಕಚ್ಚಾಟ ನಡೆಸುತ್ತಾರೆ. ಅದು ಮರುದಿನ ಪತ್ರಿಕೆಗಳಲ್ಲಿ ಬರುತ್ತದೆ. ಇವರ ನಾಟಕಕ್ಕೆ ಅಂಕದ ಪರದೆ ಬೀಳುತ್ತದೆ. ಆ ಬಳಿಕ ಮುಂದಿನ ತಿಂಗಳಿನ ಸಭೆಯ ತನಕ ಅದೇ ಕಥೆ, ಅದೇ ವ್ಯಥೆ. ಇವರಿಗೆ ನಿಜವಾಗಿಯೂ ಕೆಲಸ ಆಗಬೇಕು ಎನ್ನುವ ಮನಸ್ಸಿದ್ದರೆ ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ಒಳಚರಂಡಿಗಾಗಿ ಏಕ್ಸಕ್ಲೂಸಿವ್ ಅಭಿಯಂತರರನ್ನು ಹಾಕಲು ಮನವಿ ಮಾಡಲಿ. ಅದರೊಂದಿಗೆ ಎಲ್ಲೆಲ್ಲಿ ಒಳಚರಂಡಿ ಕಾಮಗಾರಿ ಆಗುತ್ತಾ ಇದೆಯೋ ಅಲ್ಲೆಲ್ಲಾ ಬೋರ್ಡ್ ಹಾಕಿ ಈ ಕಾಮಗಾರಿ ಯಾವಾಗ ಆರಂಭವಾಗಿದೆ ಮತ್ತು ಯಾವಾಗ ಮುಗಿಯುತ್ತದೆ ಎಂದು ಮಾಹಿತಿ ನೀಡಲಿ. ಒಟ್ಟಿನಲ್ಲಿ ಒಳಚರಂಡಿಯ ತ್ಯಾಜ್ಯದಲ್ಲಿ ಬ್ರೆಡ್ ಅದ್ದಿ ತಿನ್ನಲು ಆಗುವುದಿದ್ದರೆ ಪಾಲಿಕೆಯ ಸದಸ್ಯರು, ಅಧಿಕಾರಿಗಳು ಅದನ್ನು ಮಾಡುತ್ತಿದ್ದರು. ಆದರೆ ಏನೂ ಲಾಭವಿಲ್ಲದ ಕಾರಣ ಈ ಯೋಜನೆ ಅದರಪಾಡಿಗೆ ಅದು ಮಲಗಿದೆ!
Leave A Reply