ಬಿಜೆಪಿ ಶಾಸಕರಿಲ್ಲದೇ ಖಾದರ್ ಸಮಸ್ಯೆ ಪರಿಹಾರ ಸಭೆ!
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರ ಸಮಸ್ಯೆ ಮತ್ತು ಟಿಡಿಆರ್ ವಿಷಯದ ಮೇಲೆ ಸಭೆ ಮಾಡಿದ್ದಾರೆ. ಅವರ ಸಭೆಯಲ್ಲಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪಾಲಿಕೆ ಕಮೀಷನರ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಕಾಂಗ್ರೆಸ್ಸಿನ ಇಬ್ಬರು ಕಾರ್ಪೋರೇಟರ್ ಗಳು ಮತ್ತು ಒಂದಿಷ್ಟು ಅಧಿಕಾರಿಗಳು ಇದ್ದರು. ಒಂದು ಸಭೆ ಎಂದು ಮಾಡುವಾಗ ಅದರಲ್ಲಿ ಸಂತ್ರಸ್ತರು, ಸಮಸ್ಯೆ ಅರಿತವರು, ಸಮಸ್ಯೆಗೆ ಪರಿಹಾರ ಸೂಚಿಸುವವರು ಎಲ್ಲರೂ ಇರಬೇಕು. ಅದರೊಂದಿಗೆ ಒಂದು ಸಮಸ್ಯೆಯ ಕಾರ್ಯವಾಪಿ ಕೂಡ ಬಹಳ ಪ್ರಮುಖವಾಗಿರುವಂತದ್ದು. ಇನ್ನೊಂದು ಏನೆಂದರೆ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದು ಎಂದರೆ ಕೇವಲ ಒಂದು ಸೈಡ್ ಮಾತ್ರ ಚರ್ಚೆ ಮಾಡುವುದಲ್ಲ. ಎಲ್ಲರನ್ನು ಸೇರಿಸಿ ಅವರ ಕ್ಷೇತ್ರದ ನಾಗರಿಕರ ಕಷ್ಟಸುಖ ಕೇಳಿ ಸಭೆಯಲ್ಲಿ ಒಂದು ನಿರ್ಣಯಕ್ಕೆ ಬರಬೇಕು. ಅದಕ್ಕಾಗಿಯೇ ನಾವು ಶಾಸಕರನ್ನು ಆರಿಸಿದ್ದು. ಅದರಲ್ಲಿಯೂ ಸರಕಾರಿ ಮಟ್ಟದ ಸಭೆಗಳು ಎಂದರೆ ಹೀಗೆ ಸಭೆಗಳಿಗೆ ತನ್ನದೇ ಆಗಿರುವ ಆಯಾಮಗಳಿರುತ್ತವೆ. ಇನ್ನು ಒಬ್ಬ ಶಾಸಕರಾದವರು ವಿಧಾನಸಭಾಧ್ಯಕ್ಷರಾದ ನಂತರ ಅವರು ಯಾವುದೇ ಪಕ್ಷದ ಮುಖಂಡರಲ್ಲ. ಅದಕ್ಕಾಗಿ ಅವರಿಂದ ಪಕ್ಷಕ್ಕೆ ರಾಜೀನಾಮೆ ಕೊಡಿಸಲಾಗುತ್ತೆ. ಅವರು ನಂತರ ಆ ಸ್ಥಾನದಿಂದ ಕೆಳಗಿಳಿದ ಮೇಲೆ ಶಾಸಕರೋ, ಸಚಿವರು ಆಗಿ ಆಗಬೇಕಾದರೆ ರಾಜಕೀಯ ಮಾಡಲಿ. ಅದು ಬಿಟ್ಟು ಸ್ಪೀಕರ್ ಆದವರು ಕೂಡ ರಾಜಕೀಯ ಮಾಡಲು ಇಳಿದರೆ ಏನಾಗಬಹುದು. ಹಾಗಾದರೆ ಕಾಂಗ್ರೆಸ್ ಕರಾವಳಿಯಲ್ಲಿ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಅವರ ಧ್ವನಿ ಕೇಳಲ್ವಾ? ಹೀಗೆ ಮಾಡುವ ಮೂಲಕ ಖಾದರ್ ಸಾಧಿಸಿದ್ದು ಏನು, ಅದರಿಂದ ದೊರೆಯುವ ಪ್ರಯೋಜನ ಎಂತದ್ದು ಎನ್ನುವುದು ಯಾರಿಗಾದರೂ ಗೊತ್ತಾಗುತ್ತದೆ.
ಈಗ ಬೆಂಗಳೂರಿನಲ್ಲಿ ಆಗಿರುವ ಸಭೆ ಕೂಡ ಅಂತಹುದೇ. ಈ ಟಿಡಿಆರ್ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇರುವ ವ್ಯವಸ್ಥೆ. ಅದರಲ್ಲಿಯೂ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಇದು ಚಾಲ್ತಿಯಲ್ಲಿದೆ. ಆ ನಾಲ್ಕು ಕ್ಷೇತ್ರಗಳೆಂದರೆ ಮಂಗಳೂರು ಅಂದರೆ ಉಳ್ಳಾಲ, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಮತ್ತು ಮೂಲ್ಕಿ-ಮೂಡಬಿದ್ರೆ ಕ್ಷೇತ್ರಗಳು. ಈ ನಾಲ್ಕು ಕ್ಷೇತ್ರಗಳ ಪೈಕಿ ಅಲ್ಲಿ ಇದ್ದದ್ದು ಖಾದರ್ ಮಾತ್ರ. ಇನ್ನು ಮೀನುಗಾರರ ವಿಷಯಕ್ಕೆ ಬಂದರೆ ಅಲ್ಲಿ ಸಭೆಯಲ್ಲಿ ಕರೆಕ್ಟಾಗಿ ಗೊತ್ತಿರುವವರು ಯಾರಿದ್ದರು. ಕರಾವಳಿಯ ಶಾಸಕರೇ ಇಲ್ಲದೇ ಮೀನುಗಾರರ ಸಮಸ್ಯೆಯಾದ ಸೀಮೆ ಎಣ್ಣೆ ಬಗ್ಗೆ ಚರ್ಚೆ ಮಾಡಲು ಆಗುತ್ತಾ? ಈ ಮೀನುಗಾರಿಕೆಯ ಬಗ್ಗೆ ಗೊತ್ತಿರಬೇಕಾದರೆ ಒಂದಿಷ್ಟು ಸಮುದ್ರವಾದರೂ ನಿತ್ಯ ನೋಡಿದವರು ಬೇಕಲ್ಲ. ಇನ್ನು ಆ ಸಮಸ್ಯೆ ಖಾದರ್ ಸಾಹೇಬ್ರಿಗೆ ಗೊತ್ತಿದೆ, ಅವರೇ ಎಲ್ಲಾ ತಿಳಿದವರು, ಅವರೇ ಎಲ್ಲವನ್ನು ಪರಿಹರಿಸುತ್ತಾರೆ, ಕಾಂಗ್ರೆಸ್ ಸರಕಾರ ಇನ್ನು ಎಂತಹುದೇ ಸಮಸ್ಯೆ ಇದ್ದರೂ ತನ್ನ ಶಾಸಕರನ್ನು ಮಾತ್ರ ಕೂರಿಸಿ ಪರಿಹರಿಸುತ್ತದೆ ಎಂದಾದರೆ ಹಾಗೆ ಮಾಡುತ್ತೆನೆಂದು ಹೇಳಿ ಬಿಡಲಿ. ಸೇಡಿನ ರಾಜಕಾರಣವೇ ಮಾಡಬೇಕು, ಕ್ರೆಡಿಟ್ ನಾವೊಬ್ಬರೇ ಪಡೆಯಬೇಕು ಎನ್ನುವ ಹಟದ ನಡುವೆ ಅಭಿವೃದ್ಧಿ ವಿಷಯದ ಚರ್ಚೆಗಳು ನಡೆಯುತ್ತಿವೆ!
Leave A Reply