ಗ್ಯಾರಂಟಿ ಕೊಟ್ಟು ವಾರಂಟಿ ಮುಗಿದಂತೆ ಆಡುತ್ತಿರುವ ಸರಕಾರ!
ಇದು ಬೇಕಿತ್ತಾ ಎಂದು ಸಿದ್ದುಜಿ, ಡಿಕೆಶಿ, ಪರಮೇಶ್ವರ್ ಅವರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಿದೆ. ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಅವರನ್ನು ಆರೇ ತಿಂಗಳಿಗೆ ಇಲ್ಲಿಂದ ವರ್ಗಾವಣೆ ಮಾಡಿದ್ದು ಯಾಕೆ ಎಂದು ಅವರು ಮಂಗಳೂರಿನ ಜನರಿಗೆ ಉತ್ತರಿಸಬೇಕಿದೆ. ಅದಕ್ಕಾಗಿ ಅವರ ಮುಂದೆ ನಾವೇ ಪ್ರಶ್ನೆ ಇಡುತ್ತಿದ್ದೇವೆ. ಮೊದಲ ಪ್ರಶ್ನೆ: ಅವರು ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಹೊರಟಿದ್ದೇ ಮೊದಲ ತಪ್ಪಾ? ಇಲ್ಲಿಯ ತನಕ ಯಾವುದೇ ಪೊಲೀಸ್ ಕಮೀಷನರ್ ಕೈ ತೊಳೆದುಕೊಂಡು ಈ ಪರಿ ಡ್ರಗ್ಸ್ ಮಾಫಿಯಾದ ಹಿಂದೆ ಬಿದ್ದಿರಲಿಲ್ಲ. ಯಾಕೆಂದರೆ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಯಾವ ಬಿಲದಿಂದ ಮಂಗಳೂರಿನ ಒಳಗೆ ಬರುತ್ತಿದೆ ಎಂದು ಪತ್ತೆ ಹಚ್ಚುವ ಗೋಜಿಗೆ ಹೋಗುತ್ತಿರಲಿಲ್ಲ. ಎಲ್ಲಿಯೋ ಮೂಲೆಯಲ್ಲಿ ಅಡಗಿ ಕುಳಿತು ಗಾಂಜಾ ಎಳೆಯುತ್ತಿದ್ದವನನ್ನು ಬಂಧಿಸಿ ಪೊಲೀಸರು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಬಂಧಿತನಾದವನು ಕೆಲವೇ ದಿನಗಳ ಒಳಗೆ ಮತ್ತೆ ಹೊರಗೆ ಬಂದು ಮತ್ತೆ ಎರಡು ಸ್ಟಾರ್ ಹೆಚ್ಚು ಭಡ್ತಿ ಪಡೆದವನಂತೆ ವ್ಯವಹಾರಕ್ಕೆ ತೊಡಗುತ್ತಿದ್ದ. ಆದರೆ ಕುಲದೀಪ್ ಜೈನ್ ಹಾಗೆ ಮಾಡಲಿಲ್ಲ. ಅವರು ಹಿಡಿದವನ ಜಾತಕ ತೆರೆದರು. ಒಂದರಿಂದ ಮತ್ತೊಂದು ಹೀಗೆ ನಿರಂತರ ಹೋಗಿ ಕೊನೆಗೆ ದೊಡ್ಡ ದೊಡ್ಡ ಕುಳಗಳ ಬಾಗಿಲು ತಟ್ಟಿ ಅಂತವರನ್ನು ಎಳೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಅವರ ವರ್ಗಾವಣೆ ಆಗಿದೆ.
ಡ್ರಗ್ಸ್ ವಿಷಯದಲ್ಲಿ ಸರಕಾರ ಮಾಡಬೇಕಾಗಿರುವುದು ಏನು?
ಸರಕಾರದ ಮುಖ್ಯ ಜವಾಬ್ದಾರಿ ತನ್ನ ಏಜೆಂಡಾವನ್ನು ಸರಿಯಾಗಿ ಅನುಷ್ಟಾನಕ್ಕೆ ತಂದು ಸಧೃಡ ಸಮಾಜವನ್ನು ಕಟ್ಟುವುದು. ದೇಶ ಗಟ್ಟಿಯಾಗಬೇಕಾದರೆ ಯುವ ಜನಾಂಗ ಶಕ್ತಿಯುತವಾಗಿರಬೇಕು. ಅದಕ್ಕಾಗಿ ಡ್ರಗ್ಸ್ ಊರುಗಳ ಒಳಗೆ ಕಾಲಿಡಬಾರದು. ಹಾಗಂತ ಭಾಷಣಗಳಲ್ಲಿ ರಾಜಕಾರಣಿಗಳು ಘಂಟಾಘೋಷವಾಗಿ ಹೇಳುತ್ತಾರೆ. ಆದರೆ ಅದನ್ನು ಅವರೇ ನಿಂತು ಅನುಷ್ಟಾನಕ್ಕೆ ತರಲು ಆಗುವುದಿಲ್ಲ. ಅದಕ್ಕಾಗಿ ಪೊಲೀಸ್ ಇಲಾಖೆ ಬೇಕು. ಇನ್ನು ಪೊಲೀಸ್ ಅಧಿಕಾರಿಗಳು ಒಂದು ಉನ್ನತ ಹುದ್ದೆಯಲ್ಲಿದ್ದಾರೆ ಎನ್ನುವ ಕಾರಣಕ್ಕೆ ಅವರು ಸರಿಯಾಗಿ ಕೆಲಸ ನಿರ್ವಹಿಸುತ್ತಾರೆ ಎಂದಲ್ಲ. ಅವರಿಗೆ ಇಚ್ಚಾಶಕ್ತಿ ಬೇಕು. ಅದರಲ್ಲಿಯೂ ಸಮೃದ್ಧಭರಿತ ಹುಲ್ಲುಗಾವಲು ಎಂಬ ಗಾಂಜಾ ಮಾಫಿಯಾದ ಫಸಲಿಗೆ ಕೈ ಹಾಕಿದವರ ನಡು ಮುರಿಯಲು ಯಾವ ಪೊಲೀಸ್ ಅಧಿಕಾರಿಯೂ ಮುಂದೆಕೆ ಬರುವುದಿಲ್ಲ. ಆದರೆ ಕುಪದೀಪ್ ಜೈನ್ ಎಂಬ ಅಪರೂಪದ ಅಧಿಕಾರಿ ಆ ಧೈರ್ಯ ಮಾಡಿದ್ರು. ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿನಿಯರ ಬಂಧನವಾಯಿತು. ಡ್ರಗ್ಸ್ ಪೂರೈಸುತ್ತಿದ್ದ ನೈಜೀರಿಯಾದ ವ್ಯಕ್ತಿಗಳ ಬಂಧನವಾಯಿತು. ಅಷ್ಟೊತ್ತಿಗೆ ಗಾಂಜಾ ಪೂರೈಕೆದಾರರು ಅಂಡು ಸುಟ್ಟ ಬೆಕ್ಕಿನಂತೆ ಆಗಿದ್ದರು. ಬೆಕ್ಕು ಸೀದಾ ತನ್ನ ಅಪ್ಪಂದಿರಿಗೆ ಕರೆ ಮಾಡಿತು. ಅವರಿಂದ ಸರಕಾರದ ಧಣಿಗಳಿಗೆ ಕಳುಹಿಸಬೇಕಾದ ಕಪ್ಪ ಕಳುಹಿಸಿಕೊಡಲಾಗಿರಬಹುದು. ಅಲ್ಲಿಗೆ ಕುಲದೀಪ್ ಜೈನ್ ಅವರಿಗೆ ಮಂಗಳೂರಿನಲ್ಲಿ ಉಳಿಸಿದರೆ ಅವರು ನಮಗೆ ದುಬಾರಿಯಾಗುತ್ತಾರೆ ಎಂದು ಅರಿತವರು ಅವರನ್ನು ಮಂಗಳೂರಿನಿಂದ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರಕ್ಕೆ ಅವರ ಮೇಲೆ ಎಷ್ಟು ಕೋಪ ಇದ್ದಿರಬಹುದು ಎಂದರೆ ಅವರಿಗೆ ಮುಂದಿನ ಹುದ್ದೆ ವಹಿಸಿಕೊಳ್ಳುವ ಜಾಗ ಕೂಡ ತೋರಿಸಿಲ್ಲ. ಇಷ್ಟೇ ಅಲ್ಲ, ಕುಲದೀಪ್ ಜೈನ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸೇವೆ ಸಲ್ಲಿಸುತ್ತಿದ್ದ ಡಿಸಿಪಿ ಅಂಶುಕುಮಾರ್ ಅವರನ್ನು ಕೂಡ ಎತ್ತಂಗಡಿ ಮಾಡಲಾಗಿದೆ.
ಗ್ಯಾರಂಟಿ ಕೊಟ್ಟು ವಾರಂಟಿ ಮುಗಿದಂತೆ ಆಡುತ್ತಿರುವ ಸರಕಾರ!
ಕುಲದೀಪ್ ಜೈನ್ ಯಾವ ಪರಿ ಕೆಲಸ ಮಾಡುತ್ತಿದ್ದರು ಎಂದರೆ ಹತ್ತು ವರ್ಷಗಳ ಹಿಂದಿನ ಕೇಸುಗಳನ್ನೆಲ್ಲಾ ಜಾಲಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಅವರು ಹೆಡೆಮುರಿ ಕಟ್ಟುತ್ತಿದ್ದರು. ಇದರಿಂದ ರಾಜಕೀಯ ಆಶ್ರಯದಲ್ಲಿದ್ದ ಡ್ರಗ್ಸ್ ಮಾಫಿಯಾದ ಬಾಲದ ಮೇಲೆ ಜೈನ್ ಕಾಲಿಟ್ಟ ಹಾಗೆ ಆಗಿತ್ತು. ನೋವಿನಿಂದ ನರಳಿದ ಮಾಫಿಯಾ ಹೆಡೆ ಎತ್ತಿ ಬುಸ್ ಹೇಳಿದೆ. ಅದಕ್ಕೆ ಮರಳು ಮಾಫಿಯಾ ಕೂಡ ಕೈಜೋಡಿಸಿದೆ. ಜೈನ್ ವರ್ಗಾವಣೆಯಿಂದ ಡ್ರಗ್ಸ್ ಮಾಫಿಯಾ ಮತ್ತು ಮರಳು ಮಾಫಿಯಾದವರು ಇವತ್ತು ಹಬ್ಬ ಮಾಡುತ್ತಿರಬಹುದು. ಯಾಕೋ ಕಾಂಗ್ರೆಸ್ಸಿಗರು ಒಂದು ಕಡೆಯಿಂದ ಗ್ಯಾರಂಟಿ ಕೊಡಿಸಿ ಮತ್ತೊಂದೆಡೆ ವಾರಂಟಿ ಕಳೆದುಕೊಳ್ಳುತ್ತಿದ್ದಾರೆ!
Leave A Reply