ಸೂಲಿಬೆಲೆ ಎಂದರೆ ಅದೇಕಷ್ಟು “ಉರಿ”!
ಉಡುಪಿಯಲ್ಲೊಂದು ರಾಜ್ಯಮಟ್ಟದ ಕಾರ್ಯಕ್ರಮವಿತ್ತು. ಹಲವಾರು ಸಂನ್ಯಾಸಿಗಳು ಸೇರಿದ್ದರು. ಅವರಲ್ಲೊಬ್ಬರು ಚಕ್ರವರ್ತಿ ಸೂಲಿಬೆಲೆಯವರೊಂದಿಗೆ ಮಾತನಾಡುತ್ತಾ ‘ನಾವು ಕಾವಿ ತೊಟ್ಟಿದ್ದೇವೆ, ನೀವು ತೊಡಲಿಲ್ಲ. ನಮಗೂ ನಿಮಗೂ ಅಷ್ಟೇ ವ್ಯತ್ಯಾಸ. ನೀವು ರಾಷ್ಟ್ರಸಂತ’ ಎಂದರು. ಆ ಮಾತು ಅಕ್ಷರಶಃ ನಿಜ. ಸೂಲಿಬೆಲೆಯವರ ಜೀವನ ಶೈಲಿಯೇ ಅಂತಿದೆ. ರಾಷ್ಟ್ರಧರ್ಮದ ಎದುರಲ್ಲಿ ಉಳಿದ್ಯಾವ ವಿಚಾರವೂ ಅವರಿಗೆ ನಗಣ್ಯ ಹಾಗಿದೆ ಅವರ ಜೀವನಶೈಲಿ. ಸದಾ ಭರತಖಂಡದ ಒಳಿತಿಗಾಗಿ ತುಡಿಯುವ ಜೀವ ಅವರದ್ದು.
ಆಗಿನ್ನೂ ಶ್ರೀ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಭಾಜಪದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗಿತ್ತಷ್ಟೆ. ಬಹುಶಃ ಮೋದೀಜಿಯವರಲ್ಲಿದ್ದ ರಾಷ್ಟ್ರದ ಬಗೆಗಿನ ತುಡಿತ ಚಕ್ರವರ್ತಿಯವರು ಆಗಲೇ ಅರಿತಿದ್ದರು. ಶತಾಯಗತಾಯ ಅವರನ್ನು ಪ್ರಧಾನಿ ಹುದ್ದೆಗೆ ತರಲೇಬೇಕು ಅದಕ್ಕೆ ನಮ್ಮಿಂದಾಗುವ ಪ್ರಯತ್ನ ಮಾಡಲೇಬೇಕೆಂದು ಪಣ ತೊಟ್ಚವರು. ಕರ್ನಾಟಕದಲ್ಲಿ ‘ನಮೋಬ್ರಿಗೇಡ್’ ನ ಮೂಲಕ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುಜರಾತ್ ನ ಮುಖ್ಯಮಂತ್ರಿಯಾಗಿ ಮೋದಿ ಮಾಡಿದ್ದ ಸಾಧನೆಗಳ ಬಗ್ಗೆ ವಿಸ್ತಾರವಾಗಿ ಜನರಿಗೆ ತಿಳಿಸಿದರು. ಭವ್ಯ ಭಾರತದ ಬಗ್ಗೆ ಜನರಲ್ಲಿ ಕನಸನ್ನು ಬಿತ್ತಿದರು.
ಚಕ್ರವರ್ತಿಯವರ ಮಾತು ಅದೆಷ್ಟು ಪ್ರಕರವಾಗಿರುತ್ತದೆ ಎಂದರೆ ಒಮ್ಮೆ ಅವರ ಮಾತನ್ನು ಆಲಿಸಿದರೆ ಅವರನ್ನು ವಿರೋಧಿಸುವುದು ಕಷ್ಟಸಾಧ್ಯವೇ ಸರಿ. ವಿಷಯ ಜ್ಞಾನ ಮಾತ್ರವಲ್ಲದೆ ಅದನ್ನು ಜನರ ಹೃದಯಕ್ಕೆ ತಲುಪಿಸುವ ಕಲೆ ಅವರಿಗೆ ಸಿದ್ಧಿಸಿದೆ. ಪಾಪ ಕಾಂಗ್ರೆಸ್ಸಿಗೆ ಬಿಡಿ ಕೆಲವಷ್ಟು ಬಿ.ಜೆ.ಪಿಗರಿಗೂ ಸೂಲಿಬೆಲೆಯವರು ನುಂಗಲಾರದ ಇತ್ತ ಉಗುಳಲಾರದ ಬಿಸಿತುಪ್ಪ. ಅವರಲ್ಲಿರುವ ಜ್ಞಾನದ ಎದುರು ಮಾತನಾಡುವ ಅರ್ಹತೆಯಿಲ್ಲ, ಅವರು ಮಾಡಿದಷ್ಟು ಕೆಲಸ ಮಾಡಲೂ ಸಾಧ್ಯವಿಲ್ಲ ಇನ್ನು ಅವರಂತೆ ಬದುಕುವುದು ಬಿಡಿ ದೂರದ ಮಾತು. ಇಷ್ಟಿದ್ದ ಮೇಲೆ ಅಪಪ್ರಚಾರ ಬಿಟ್ಟು ಇನ್ನೇನು ಮಾಡಲು ಸಾಧ್ಯ ಹೇಳಿ!
ಅತ್ತ ಪ್ರಧಾನಿ ಸ್ವಚ್ಚ ಭಾರತ್ ಎನ್ನುತ್ತಿದ್ದರೆ ಇತ್ತ ಸೂಲಿಬೆಲೆಯವರು ಅದಾಗಲೇ ಯುವಾಬ್ರಿಗೇಡ್ ಎಂಬ ಸಂಘಟನೆ ಕಟ್ಟಿಕೊಂಡು ರಸ್ತೆ ಇಕ್ಕೆಲಗಳ ಸ್ವಚ್ಚತೆ, ಕಲ್ಯಾಣಿ ಶುದ್ಧೀಕರಣ, ದೇವಸ್ಥಾನ ಸ್ವಚ್ಚತೆ, ಶಾಲೆ, ಬಸ್ ಸ್ಟಾಂಡ್, ಸ್ಮಾರಕಗಳು, ಸರ್ಕಾರಿ ಆಸ್ಪತ್ರೆಯ ಆವರಣ ಸ್ವಚ್ಚತೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಮಾಡತೊಡಗಿದ್ದರು. ಕೇವಲ ಮಾತನ್ನು ಮಾತ್ರ ತಮ್ಮ ಬಂಡವಾಳ ಮಾಡಿಕೊಂಡ ರಾಜಕಾರಣಿಗಳು ಯಾವುದೇ ಸ್ವಾರ್ಥವಿಲ್ಲದೆ ಕೇವರ ರಾಷ್ಟ್ರದ ಮೇಲಿನ ಪ್ರೀತಿಯಿಂದಾಗಿ ಮಾತಿಗಿಂತಲೂ ಕೆಲಸ ಜಾಸ್ತಿ ಮಾಡುವ ಈ ರಾಷ್ಚ್ರಸಂತನ ಎದುರಿಗೆ ಅಪಪ್ರಚಾರ ಬಿಟ್ಟು ಬೇರೇನು ಮಾಡಲು ಸಾಧ್ಯ ಹೇಳಿ!.
ಬಹುಶಃ ಈ ರಾಷ್ಟ್ರದ ಚುನಾವಣೆಯಲ್ಲಿ ಬಹಳವಾಗಿ ಪ್ರಭಾವ ಬೀರುವುದು ಜಾತಿ. ಜಾತಿ ಪದ್ದತಿ ಎನ್ನುವುದು ರಾಷ್ಟ್ರಕ್ಕಂಟಿದ ಪಿಡುಗು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಚಕ್ರವರ್ತಿ ಸೂಲಿಬೆಲೆಯವರ ಯುವಾಬ್ರಿಗೇಡ್ ಎಂಬ ಕುಟುಂಬದಲ್ಲಿ ಜಾತಿಗೆ ಪ್ರಾಧಾನ್ಯತೆಯೇ ಇಲ್ಲವೆಂಬುದನ್ನು ಕಷ್ಟವಾದರೂ ನೀವು ನಂಬಲೇಬೇಕು. ರಾಜ್ಯಾದ್ಯಂತ ಸಹಸ್ರಾರು ಕಾರ್ಯಕರ್ತರಿರುವ ಯುವಾಬ್ರಿಗೇಡ್ ನ ಯಾರೊಬ್ಬರಿಗೂ ಇನ್ನೊಬ್ಬರ ಜಾತಿಯ ಕುರಿತು ಅರಿವಿರುವುದಿಲ್ಲ. ಅಲ್ಲಿರುವುದು ರಾಷ್ಟ್ರಧರ್ಮ ಮಾತ್ರ. ‘ಜಾತಿಯ ಸಂಕೋಲೆ ಕಳಚೋಣ ಬನ್ನಿ’ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡಿದರಲ್ಲ, ಈ ಸಮಾಜವನ್ನು ಜಾತಿಯ ಅಡಿಯಲ್ಲಿ ಒಡೆದು ಆಳುತ್ತಿದ್ದ ರಾಜಕಾರಣಿ ಮೈಪರಚಿಕೊಳ್ಳದೆ ಇನ್ನೇನು ತಾನೆ ಮಾಡಬಲ್ಲ ಹೇಳಿ!
ಬಹುಶಃ ಕೇಂದ್ರದ ರಾಷ್ಟ್ರಪರವಾದ ಯೋಜನೆಗಳನ್ನು ಸಮರ್ಥವಾಗಿ ಜನಮಾನಸಕ್ಕೆ ಸೂಲಿಬೆಲೆಯವರು ತಲುಪಿಸಿದಷ್ಟು ಭಾಜಪ ಕೂಡಾ ತಲುಪಿಸಿರಲಿಕ್ಕಿಲ್ಲ. ಎಲ್ಲಿಯೂ ಯಾವ ಪಕ್ಷಕ್ಕೂ ಅಂಟಿಕೊಳ್ಳದ ಸೂಲಿಬೆಲೆಯವರು ರಾಜಕೀಯಕ್ಕಂತೂ ಕಾಲಿಡುವುದೇ ಇಲ್ಲ ಎಂದು ಘಂಟಾಘೋಷವಾಗಿ ಸಾರಿ ಹೇಳಿದ್ದಾರೆ. ಅದೆಷ್ಟು ಕೆದಕಿದರೂ ಅವರ ಹಿಂದಿನ ಉದ್ದೇಶದಲ್ಲಿ ಅದಮ್ಯ ರಾಷ್ಟ್ರಭಕ್ತಿ ಹೊರತು ಇನ್ನೇನೂ ಕಾಣಸಿಗುವುದಿಲ್ಲ. ಈ ದೇಶದಲ್ಲಿ ನೋಟು ಅಮಾನ್ಯಿಕರಣವಾದಾಗ ರಾಜ್ಯಾದ್ಯಂತ ‘ಕ್ಯಾಶ್ ಲೆಸ್ ದುನಿಯಾ’ ಕಾರ್ಯಕ್ರಮದಡಿ ಜನರಿಗೆ ಡಿಜಿಟಲ್ ಪಾವತಿಗಳ ಅಗತ್ಯತೆ ಮತ್ತು ಉಪಯೋಗಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಿದರಲ್ಲ ಉರಿದುಕೊಳ್ಳದೆ ಇನ್ನೇನು ಮಾಡಲು ಸಾಧ್ಯ ಹೇಳಿ!
ಕೇರಳಕ್ಕೆ ವಿದ್ಯುತ್ ಸಂಪರ್ಕದ ನೆಪದಲ್ಲಿ ಸರ್ಕಾರವೊಂದು ಲಕ್ಷಾಂತರ ಮರಗಳನ್ನು ಕಡಿದು ಟಿಂಬರ್ ವ್ಯಾಪಾರ ಮಾಡುತ್ತಿದ್ದರೆ ಇತ್ತ ಸೂಲಿಬೆಲೆಯವರು ತಮ್ಮ ತಂಡದ ಮೂಲಕ ‘ಸಸ್ಯಶ್ಯಾಮಲ’ ಕಾರ್ಯಕ್ರಮದಡಿಯಲ್ಲಿ ಲಕ್ಷಾಂತರ ಗಿಡಗಳನ್ನು ನೆಡುವ ಮತ್ತು ನೆಟ್ಟ ಗಿಡಗಳನ್ನು ಪೋಷಿಸುವ ಕಾರ್ಯಕ್ರಮ ಮಾಡುತ್ತಿದ್ದರಲ್ಲ ಅದರ ಹಿಂದಿದ್ದ ಸ್ವಾರ್ಥವಾದರೂ ಏನು! ರಾಷ್ಟ್ರವನ್ನು ಒಡೆಯುವ ಅದೆಂತ ಕಾರ್ಯವಿದ್ದರೂ ಅದಕ್ಕೆ ತಡೆಗೋಡೆಯಾಗಿ ನಿಲ್ಲುತ್ತಾರಲ್ಲ ಪಾಪ ಉರಿದುಕೊಳ್ಳದೆ ಇನ್ನೇನು ಮಾಡಲು ಸಾಧ್ಯ ಹೇಳಿ!
ಈ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ತೆತ್ತರೂ ಜನಮಾನಸದಿಂದ ದೂರವಾಗಿದ್ದ ಅದೆಷ್ಟೋ ವೀರರನ್ನು ಮತ್ತೆ ಜನರಿಗೆ ಪರಿಚಯಿಸುವ ಕಾರ್ಯ ಸಮರ್ಥವಾಗಿ ಮಾಡಿದ್ದು ಚಕ್ರವರ್ತಿ ಸೂಲಿಬೆಲೆಯವರು. ರಾಷ್ಟ್ರಕ್ಕಾಗಿ ಪ್ರಾಣಕೊಡಲು ಸಿದ್ಧವಾಗಿ ಸೈನ್ಯಕ್ಕೆ ಸೇರುವ ಸೈನಿಕರ ಮೇಲೆ ಅಪಾರವಾದ ಗೌರವ ನೂರ್ಮಡಿಯಾಗುವಂತೆ ಶ್ರಮಿಸಿದವರು ಸೂಲಿಬೆಲೆ. “ಒನ್ ರ್ಯಾಂಕ್ ಒನ್ ಪೆನ್ಷನ್” ಗಾಗಿ ರಾಷ್ಟ್ರದ ಸೈನಿಕರು ಬೇಡಿಕೆಯಿಡುತ್ತಿದ್ದಾಗ ಪೋಸ್ಟ್ ಕಾರ್ಡ್ ಅಭಿಯಾನದ ಮೂಲಕ ಲಕ್ಷಾಂತರ ಪತ್ರಗಳನ್ನು ಪ್ರಧಾನಿ ಕಛೇರಿಗೆ ರವಾನಿಸಿ ಆ ಕಾನೂನು ಜಾರಿಯಾಗುವಂತೆ ಆಗ್ರಹಿಸಿದವರು. ರಾಷ್ಟ್ರ ಕಾಯುವ ಸೈನಿಕರಲ್ಲೊಮ್ಮೆ ಕೇಳಿ ನೋಡಿ ಸೂಲಿಬೆಲೆಯವರ ವ್ಯಕ್ತಿತ್ವದ ಅನಾವರಣವಾಗುತ್ತದೆ.
ಚಕ್ರವರ್ತಿಯವರ ಕೆಲಸವನ್ನು ಗಮನಿಸುತ್ತಾ ಸಾಗಿದರೆ ಈ ಸಮಾಜದ ಯಾವ ವಿಭಾಗದಲ್ಲಿ ಅವರು ಕೆಲಸ ಮಾಡಲಿಲ್ಲ ಎಂದು ಹೇಳುವುದು ಕಷ್ಟ. ಇತ್ತೀಚೆಗಷ್ಟೆ ಎಫ್.ಐ.ಆರ್ ಹಾಕಿದ ಪೊಲೀಸರಿಗೂ ಗೊತ್ತಿದೆ ‘ನಮ್ಮೊಳಗಿನ ಸೈನಿಕ’ ಎಂಬ ಕಾರ್ಯಕ್ರಮದಲ್ಲಿ ಈ ರಾಜ್ಯದ ಪೊಲೀಸರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದ್ದು ಇದೇ ಸೂಲಿಬೆಲೆಯವರ ಟೀಂ ಎಂದು. ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯ ಮಾಡಿದವರೂ ಇವರೆ ದೇವಸ್ಥಾನದ ಅರ್ಚಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಿದವರೂ ಇವರೆ. ಲೈನ್ ಮ್ಯಾನ್ ಗಳು ಅಂಚೆಯಣ್ಣ ಹೀಗೆ ಸಮಾಜದ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುವ ಪ್ರತಿಯೊಬ್ಬರಿಗೂ ಗೌರವಿಸುವ ಸೂಲಿಬೆಲೆಯವರ ಎದುರಲ್ಲಿ ಒಡೆದಾಳುವವರು ಉರಿದುಕೊಳ್ಳದೆ ಇನ್ನೇನು ತಾನೆ ಮಾಡಬಲ್ಲರು!
ಅದೆಷ್ಟು ಟೀಕೆ ತನ್ನ ಬಗ್ಗೆ ಬಂದರೂ ತಲೆ ಕೆಡಿಸಿಕೊಳ್ಳದವರು. ಟೀಕೆಗಳಿಗೆಲ್ಲ ತಮ್ಮ ಕೆಲಸಗಳಿಂದಲೇ ಉತ್ತರಿಸುತ್ತಾ ಸಾಗಿದವರು. ಸೂಲಿಬೆಲೆಯವರು ಸುಳ್ಳು ಹೇಳುತ್ತಾರೆ ಅವರು ಮಾತನಾಡುವುದಕ್ಕೆ ದಾಖಲೆಗಳೇ ಇಲ್ಲ ಎಂದ ಬೊಬ್ಬಿಡುವವರು ಯಾರೂ ಅವರು ಈ ವಿಚಾರದಲ್ಲಿ ಹೇಳಿದ್ದು ಸುಳ್ಳು ಎಂದು ಇದುವರೆಗೂ ಯಾವ ವಿಚಾರವನ್ನೂ ದಾಖಲೆ ಸಮೇತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ತಾನು ಮಂಡಿಸುವ ವಿಚಾರಕ್ಕೆ ಸದಾ ಬದ್ಧನಾಗಿರುವ ಚಕ್ರವರ್ತಿಯವರು ಬಾಯ್ತಪ್ಪಿಯೂ ಅಸಂಬದ್ಧ ಮಾತನಾಡಿದವರಲ್ಲ. ಯಾವ ವಿಚಾರವಾದರೂ ಅವರಿಗಿರುವ ಸ್ಪಷ್ಟತೆ ವಿಷಯದ ಮೇಲಿನ ಹಿಡಿತ ಅಗಾಧ ಜ್ಞಾನ ಇಲ್ಲದೆ ಇದ್ದಾಗ ಅವರನ್ನು ಎದುರಿಸಬೇಕೆಂದಾಗ ಅಪಪ್ರಚಾರ ಹೊರತು ಬೇರೇನು ಮಾರ್ಗ ಸಾಧ್ಯ ಹೇಳಿ!
ಬರೆದಷ್ಟು ಮುಗಿಯದ ಸಾಧನೆ ಕೇವಲ ಒಬ್ಬ ವ್ಯಕ್ತಿಯಿಂದ. ಸದಾ ಅಧಿಕಾರಕ್ಕಾಗಿ ಹಾತೊರೆಯುವ ಜೀವಗಳು ಅದೇನು ಮಾಡಲು ಸಾಧ್ಯ. ಬಹುಶಃ ಸಧ್ಯಕ್ಕಂತೂ ಕರ್ನಾಟಕದ ಸರ್ಕಾರಕ್ಕೆ ವಿರೋಧ ಪಕ್ಷದ ಚಿಂತೆಯಿಲ್ಲ. ಅವರ ಚಿಂತೆ ಸೂಲಿಬೆಲೆ. ಅದ್ಯಾವ ಸುಳ್ಳು ಮೋಸ ಸೂಲಿಬೆಲೆಯವರೆದುರು ನಡೆಯುವುದಿಲ್ಲವಲ್ಲ ಅದೇನಿದ್ದರೂ ಜನರಿಗೆ ತಿಳಿಸುತ್ತಾರಲ್ಲ. ರಾಜ್ಯದ ಜನರು ಪ್ರಜ್ಞಾವಂತರಾದಷ್ಟು ರಾಜಕಾರಣಿಗಳಿಗೆ ಅಪಾಯ ಹೆಚ್ಚು ಹೀಗಾಗಿಯೇ ಸೂಲಿಬೆಲೆಯವರ ವಿರುದ್ಧ ಸಮರ ಸಾರಿದ ರೀತಿ ವ್ಯವಹರಿಸುತ್ತಿದ್ದಾರೆ. ದ್ರೋಣರೆಂದೂ ರಾಜ್ಯಕ್ಕಾಗಿ ಹಪಹಪಿಸಿದವರಲ್ಲ ಆದರೆ ಅವರನ್ನು ಕೆಣಕಿದ ದ್ರುಪದನ ಸ್ಥಿತಿ ಏನಾಯ್ತು ಅರಿವಿದೆ ತಾನೆ! ಚಾಣಕ್ಯ ಎಂದೂ ರಾಜನಾಗಲಿಲ್ಲ ಆದರೆ ಆತನನ್ನ ಕೆಣಕಿದ ನಂದರ ಕಥೆಯೇನಾಯ್ತು! ನೆನಪಿಡಿ ರಾಜನೊಬ್ಬ ಒಂದು ರಾಜ್ಯಕ್ಕೆ ರಾಜನಾಗಬಲ್ಲ ಆದರೆ ಚಕ್ರವರ್ತಿ ಆರ್ಯಾವರ್ತಕ್ಕೇ ನಾಯಕ.
-ಶಶಿಧರ್ ತಲ್ಲೂರಂಗಡಿ
Leave A Reply