ಡಿಕೆಶಿ ಕೃಷ್ಣಾಷ್ಟಮಿ ಜೋರಾಗಿ ಸಾಗಿದೆ!
ಯಾರೂ ಪಕ್ಷ ಬಿಡಲ್ಲ ಎನ್ನುವ ಫಿಕ್ಸ್ ಉತ್ತರ!
ಈಗ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಯಾವ ಪರಿಸ್ಥಿತಿ ಅನುಭವಿಸುತ್ತಿದೆಯೋ ಅದೇ ಪರಿಸ್ಥಿತಿಯನ್ನು ಹಿಂದೆ ಕಾಂಗ್ರೆಸ್ ಅನುಭವಿಸುತ್ತಾ ಇತ್ತು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗಿನಿಂದ ಹಿಡಿದು ನಂತರ ಸೋನಿಯಾ ಅಧ್ಯಕ್ಷತೆಯನ್ನು ವಹಿಸಿ 2014 ರ ತನಕ ಕಾಂಗ್ರೆಸ್ ರಾಜ್ಯ ಮುಖಂಡರು ರಾಜ್ಯದಲ್ಲಿ ಒಂದು ಸಣ್ಣ ಹುಲ್ಲುಕಡ್ಡಿಯನ್ನು ಎತ್ತಿ ಇಡಲು ಹೈಕಮಾಂಡ್ ಕಡೆ ನೋಡಬೇಕಾಗುತ್ತಿತ್ತು. ಆದರೆ 2014 ರ ನಂತರ ಕೇಂದ್ರದಲ್ಲಿ ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಆಗುತ್ತಾ ಹೋಯಿತು. ಕಾಂಗ್ರೆಸ್ ದುರ್ಬಲವಾಗುತ್ತಾ ಹೋಯಿತು. ಈಗ ಎಲ್ಲಿಯ ತನಕ ಅಂದರೆ ಜಾತ್ಯಾತೀತ ಜನತಾದಳ ನಮ್ಮ ಶತ್ರುವೋ ಅಥವಾ ಮಿತ್ರನೋ ಎನ್ನುವುದು ಬಿಜೆಪಿಯ ರಾಜ್ಯದ ಉನ್ನತ ಮುಖಂಡರಿಗೆ ಡೌಟು ಬರುವಷ್ಟರ ಮಟ್ಟಿಗೆ ಬಿಜೆಪಿ ಹೈಕಮಾಂಡಿನಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯದ ಮೊದಲ ಸ್ತರದ ನಾಯಕರ ಬಳಿ ಮಾಧ್ಯಮದವರು ಏನು ಪ್ರಶ್ನೆ ಕೇಳಿದರೂ ಒಬ್ಬೊಬ್ಬರು ಒಂದೊಂದು ಉತ್ತರ ಕೊಡುತ್ತಿದ್ದಾರೆ. ಕಾರಣ ಯಾರ ಬಳಿ ಉತ್ತರ ಇಲ್ಲ.
ಡಿಕೆಶಿ ಕೃಷ್ಣಾಷ್ಟಮಿ ಜೋರಾಗಿ ಸಾಗಿದೆ!
ಯಾವಾಗ ಮೊದಲ ಸ್ತರದ ನಾಯಕರೇ ಕತ್ತಲೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ನಡೆಯುತ್ತಾರೋ ಕೆಳಗಿನ ಹಂತ ನಿಸ್ತೇಜವಾಗುತ್ತಾ ಹೋಗುತ್ತದೆ. ಯಾವಾಗ ಕಾಂಡವೇ ಟೊಳ್ಳಾಗುತ್ತಾ ಹೋಗುತ್ತದೆಯೋ ಆಗ ಎಲೆಗಳು ಒಣಗುತ್ತವೆ. ಅಕ್ಷರಶ: ಬಿಜೆಪಿಯ ರಾಜ್ಯ ನಾಯಕರ ಪರಿಸ್ಥಿತಿ ಹೀಗೆ ಇದೆ. ಇಲ್ಲದಿದ್ದರೆ ಕೃಷ್ಣಾಷ್ಟಮಿಗೆ ಬಿಜೆಪಿಯ ಮಾಜಿ ಶಾಸಕಿ ಅದು ಕೂಡ ಚುನಾವಣೆಯಲ್ಲಿ ಸೋತು ಮೂರುವರೆ ತಿಂಗಳಾಗಿದೆ ಅಷ್ಟೇ, ಅವರು ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರನ್ನು ಊಟಕ್ಕೆ ಕರೆಯುವ ಮಟ್ಟಿಗೆ ಮುಂದೆ ಹೋಗುತ್ತಾರೆ ಎಂದರೆ ಇದಕ್ಕಿಂತ ಸೋಜಿಗ ಬೇರೆ ಏನೂ ಇಲ್ಲ. ನಿನ್ನೆ ಮೊನ್ನೆ ತನಕ ತಾನೇ ಹೊನ್ನಾಳಿಯ ಹುಲಿ ಎಂದು ಮೆರೆಯುತ್ತಾ, ಯಡ್ಡಿಜಿಯ ನೆರಳಾಗಿ ನಿಲ್ಲುತ್ತಿದ್ದ ಮಾಜಿ ಶಾಸಕ ರಾಜ್ಯ ಬಿಜೆಪಿ ಸೋತ ನೋವು ಇನ್ನು ಅರಗಿಸಿಕೊಳ್ಳುವ ಮೊದಲೇ ಡಿಸಿಎಂ, ಸಿಎಂ ಮುಂದೆ ದೈನೇಸಿಯಾಗಿ ನಿಲ್ಲುತ್ತಾರೆ ಎಂದರೆ ಅದಕ್ಕಿಂತ ಅಸಹ್ಯ ಬೇರೆ ಉಂಟಾ? ರಾಷ್ಟ್ರೀಯ ಮುಖಂಡರು ಬೆಂಗಳೂರಿನಲ್ಲಿ ಕರೆದ ಸಭೆಗೆ ಮೂರ್ನಾಕು ಬಿಜೆಪಿ ಶಾಸಕರೇ ಬರದೇ ಸಡ್ಡು ಹೊಡೆಯುತ್ತಾರೆ ಎಂದರೆ ಅದಕ್ಕಿಂತ ಅಹಂ ಬೇರೆ ಇದೆಯಾ? ತಮ್ಮದೇ ಕ್ಷೇತ್ರದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕಾಂಗ್ರೆಸ್ ಸರಕಾರವನ್ನು ಅಸಹ್ಯವಾಗುವಷ್ಟು ಹೊಗಳುವ ಬಿಜೆಪಿ ಶಾಸಕರು. ಇಷ್ಟು ಮಂದಿಗೂ ನೀವು ಕೇಳಿ ನೋಡಿ, ನಾವು ಬಿಜೆಪಿ ಬಿಡುವ ಪ್ರಶ್ನೆನೆ ಇಲ್ಲ ಎನ್ನುತ್ತಾರೆ ಆದರೆ ಎಲ್ಲಿಯವರೆಗೆ ಹೆಚ್ಚೆಂದರೆ ಡಿಸೆಂಬರಾ?
ಅಧಿಕಾರ ಮತ್ತು ನೈತಿಕತೆ ವಿರುದ್ಧ ಪದವೇ?
ಇನ್ನು ಸೋತವರಲ್ಲಿ ಕೆಲವು ಬಿಜೆಪಿ ಶಾಸಕರು ತಮ್ಮ ಸೋಲಿಗೆ ಬಿಜೆಪಿಯ ಇಂತಿಂತಹ ನಾಯಕರೇ ಕಾರಣ ಎಂದು ಹೇಳುತ್ತಾ ಬರುತ್ತಿದ್ದಾರೆ. ಉದಾಹರಣೆಗೆ ರೇಣುವನ್ನೇ ತೆಗೆದುಕೊಳ್ಳೋಣ. ಯಡ್ಡಿಜಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದೇ ತಮ್ಮ ಸೋಲಿಗೆ ಕಾರಣ ಎಂದು ಹೇಳುತ್ತಾ ತಿರುಗುತ್ತಿದ್ದಾರೆ. ಅದಕ್ಕಾಗಿ ಕೇಂದ್ರದ ನಾಯಕರನ್ನು ಬೊಟ್ಟು ಮಾಡುತ್ತಿದ್ದಾರೆ. ತನ್ನನ್ನು ಹೊನ್ನಾಳಿಯಲ್ಲಿ ಸೋಲಿಸುವ ಗಂಡೇ ಹುಟ್ಟಿಲ್ಲ ಎಂದು ಮೆರೆದಾಡುತ್ತಿದ್ದ ರೇಣುವನ್ನು ಅಲ್ಲಿನ ಜನ ಸೋಲಿಸಿದ್ದಾರೆ. ಕೆಲವರಿಗೆ ಎರಡು ಸಲ ಗೆದ್ದರೆ ಸಾಕು, ತಾವೇ ಅಭಿವೃದ್ಧಿಯ ಹರಿಕಾರ ಎಂದು ತೀರ್ಮಾನಿಸಿ ತಲೆಯಲ್ಲಿ ಕಿರೀಟ ಇಟ್ಟುಕೊಂಡು ಕುದುರೆ ಹತ್ತಿಬಿಡುತ್ತಾರೆ. ಯಾವಾಗ ಅವರನ್ನು ಅಧಿಕಾರ ಎಂಬ ಕುದುರೆ ಮೈಕೊಡವಿ ಬೀಳಿಸಿತ್ತು ಎಂದೇ ಗೊತ್ತಿರುವುದಿಲ್ಲ. ಇನ್ನು ಕೆಲವರು ತಾವು ನಿನ್ನೆ ಮೊನ್ನೆ ಬೈಯುತ್ತಿದ್ದ ವಿರೋಧಿ ಪಕ್ಷದವರ ಮನೆಗೆ ಹೋಗಿ ನನ್ನನ್ನು ನಿಮ್ಮ ಪಕ್ಷಕ್ಕೆ ಸೇರಿಸಲು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ದಮ್ಮಯ್ಯ ಹಾಕುತ್ತಾರೆ ಎಂದರೆ ಅವರ ಹಪಾಹಪಿ ಹೇಗಿರಬೇಡಾ? ಸುಕುಮಾರ ಶೆಟ್ಟಿಯವರನ್ನು ಒಂದು ಸಲ ಶಾಸಕರನ್ನಾಗಿ ಮಾಡಿದ್ದು ಪಕ್ಷ. ಅದು ಬಿಟ್ಟು ಅವರೇನೂ ದೊಡ್ಡ ನಾಯಕ ಅಲ್ಲ. ಅಂತವರು ಪಕ್ಷಕ್ಕೆ ನಿಷ್ಟರಾಗಿರಬೇಕೆ ವಿನ: ತಕ್ಷಣ ಪಂಚೆ ಮೇಲೆತ್ತಿಕೊಂಡು ಗೋಪಾಲ ಪೂಜಾರಿ ಮನೆಯ ಅಂಗಳದಲ್ಲಿ ಹೋಗಿ ನಿಲ್ಲುವುದಾ? ಯಾಕೋ ಅಧಿಕಾರ ಎನ್ನುವುದು ನೈತಿಕತೆ ಎಂಬ ಶಬ್ದವನ್ನು ಹೊಡೆದು ಬಿಸಾಡಿ ಹುಟ್ಟಿದ ಪದವಾ?
Leave A Reply