ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ದೇಶ, ವಿದೇಶಗಳಿಂದ ವಿವಿಧ ದೇಶಗಳ ಪ್ರಧಾನಿಗಳು, ರಾಷ್ಟ್ರಪತಿಗಳು ಭಾರತಕ್ಕೆ ಬಂದಿದ್ದರು. ಅಮೇರಿಕಾದಿಂದ ಹಿಡಿದು ಸೌದಿ ಅರೇಬಿಯಾ ತನಕ ಶೃಂಗ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ ವಿವಿಧ ರಾಷ್ಟ್ರಗಳ ಉನ್ನತ ನಾಯಕರು ಇಲ್ಲಿನ ಔತಿಥ್ಯ ನೋಡಿ ಖುಷಿಗೊಂಡಿದ್ದಾರೆ. ಮೋದಿಯವರು ಪ್ರತಿ ದೇಶದ ನಾಯಕರ ಜೊತೆ ವೈಯಕ್ತಿಕವಾಗಿ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದ್ದಾರೆ. ಇದರಲ್ಲಿ ಅನೇಕ ಒಡಬಂಡಿಕೆಗಳು, ವಾಣಿಜ್ಯ ವ್ಯವಹಾರದ ವಿಸ್ತರಣಾ ಯೋಜನೆಗಳು ಒಳಗೊಂಡಿವೆ. ಸಾಮಾನ್ಯವಾಗಿ ಆಯಾ ರಾಷ್ಟ್ರಗಳ ಮುಖ್ಯಸ್ಥರು ವಿದೇಶದಲ್ಲಿ ವಿಶೇಷ ಸಭೆಗಳಲ್ಲಿ ಭಾಗವಹಿಸುವಾಗ ತಮ್ಮ ದೇಶದ ಆಯ್ದ ಪ್ರಮುಖ ಮಾಧ್ಯಮಗಳನ್ನು ಕೂಡ ಕರೆದುಕೊಂಡು ಬರುತ್ತಾರೆ. ಮೋದಿಯವರು ಪ್ರಧಾನಿಯಾದ ನಂತರ ಈ ಸಂಪ್ರದಾಯಕ್ಕೆ ಅಂಕುಶ ಬಿದ್ದಿದೆ ಬಿಟ್ಟರೆ ಬಹುತೇಕ ರಾಷ್ಟ್ರಗಳು ಗಜಗಾತ್ರದ ಮಾಧ್ಯಮ ತಂಡದೊಂದಿಗೆ ಅಂತರಾಷ್ಟ್ರೀಯ ಸಭೆಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ನಡೆಯುವ ಬೆಳವಣಿಗೆಗಳು ತಮ್ಮ ದೇಶದ ಮಾಧ್ಯಮಗಳಲ್ಲಿ ಪ್ರಚಾರವಾಗಿ ತಮಗೆ ಮೈಲೇಜ್ ಸಿಗಲಿ ಎನ್ನುವುದು ಇದರ ಉದ್ದೇಶವಾಗಿರುತ್ತದೆ.
ಹೀಗೆ ವಿವಿಧ ರಾಷ್ಟ್ರಗಳಿಂದ ಭಾರತಕ್ಕೆ ಬಂದ ಮಾಧ್ಯಮದವರಿಗೆ ಜಿ-20 ಶೃಂಗ ಸಭೆಯಲ್ಲಿ ವಿಶೇಷ ಅನುಕೂಲಿತ ಮಾಧ್ಯಮ ಕೇಂದ್ರವನ್ನು ನಿರ್ಮಿಸಲಾಗಿತ್ತು. ಭಾರತ ಮಂಟಪಂ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಮಾಧ್ಯಮ ಕೇಂದ್ರದಲ್ಲಿ ಸುಮಾರು 3000 ಮಾಧ್ಯಮ ಪ್ರಮುಖರು ಜಿ-20 ಇದರ ಸಂಪೂರ್ಣ ಆಗುಹೋಗುಗಳನ್ನು ವರದಿ ಮಾಡಿದ್ದಾರೆ. ಸಾಮಾನ್ಯವಾಗಿ ಇಷ್ಟು ಅದ್ಭುತ ಯಶಸ್ಸಿನ ಬಳಿಕ ಅತಿಥೇಯ ರಾಷ್ಟ್ರದ ಮುಖ್ಯಸ್ಥರು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುವುದು ಸಂಪ್ರದಾಯ. ಆದರೆ ಮೋದಿಯವರು ತಮ್ಮ ಕೆಲಸ ಮಾತನಾಡಬೇಕೆ ವಿನ: ನಾವಲ್ಲ ಎನ್ನುವ ಪಾಲಿಸಿಯನ್ನು ಪಾಲಿಸಿಕೊಂಡು ಬರುತ್ತಿರುವುದರಿಂದ ಅವರು ಈ ಸಂಪ್ರದಾಯವನ್ನು ಕೂಡ ಮುರಿದಿದ್ದಾರೆ. ಆದರೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಾಧ್ಯಮಗಳು ಈ ಶೃಂಗಸಭೆಯ ವರದಿಯನ್ನು ಮಾಡುತ್ತಿರುವುದರಿಂದ ಅವರಿಗೆಲ್ಲಾ ಧನ್ಯವಾದ ಅರ್ಪಿಸಲು ಮೋದಿಯವರು ಮಾಧ್ಯಮ ಕೇಂದ್ರಕ್ಕೆ ಆಗಮಿಸಿದ್ದರು. ಯಥಾಪ್ರಕಾರ ಮಾಧ್ಯಮ ಮಿತ್ರರಿಗೆ ಕೈ ಬೀಸಿ ನಡೆಯುತ್ತಿದ್ದ ಮೋದಿಯವರನ್ನು ನೋಡಿ ಭಾರತ್ ಮಾತಾ ಕಿ ಜೈ ಎನ್ನುವ ಉದ್ಘೋಷಣೆಗಳು ಮೊಳಗಿವೆ. ಅದರಿಂದ ಇನ್ನಷ್ಟು ಖುಷಿಗೊಂಡ ಮೋದಿಯವರು ವಿಶಾಲ ಮಾಧ್ಯಮ ಕೇಂದ್ರದ ತುಂಬೆಲ್ಲಾ ಒಂದು ಸುತ್ತು ಬಂದು ಮುಂದೆ ಸಾಗಿದರು.
ಮಾಧ್ಯಮ ಕೇಂದ್ರದಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದ್ದನ್ನು ಬಿಜೆಪಿಯ ಮಾಜಿ ಮುಖಂಡ ಯಶವಂತ್ ಸಿನ್ನಾ ಟೀಕಿಸಿದ್ದಾರೆ. ಆದರೆ ಈ ಬಗ್ಗೆ ಕೆಲವರು ಪ್ರತಿಕ್ರಿಯಿಸಿ ಭಾರತ್ ಮಾತಾ ಕೀ ಜೈ ಎಂದು ಹೇಳುವ ಅವಕಾಶ ಪತ್ರಕರ್ತಿಗೆ ಇಲ್ವಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.
Leave A Reply