ಅಂದು ಸಿದ್ದು, ಇಂದು ಹರಿ!

ಸಮುದ್ರದ ನಂಟಾದರೂ ಉಪ್ಪಿಗೆ ಬರ ಎನ್ನುವ ಮಾತಿದೆ. ಬಿ.ಕೆ.ಹರಿಪ್ರಸಾದ್ ವಿಷಯದಲ್ಲಿ ಈಗ ಆಗಿರುವುದೇ ಅದು. ಮುಖ್ಯಮಂತ್ರಿಗಳನ್ನು ಮಾಡುವುದು ಗೊತ್ತು. ಇಳಿಸುವುದು ಗೊತ್ತು ಎಂದು ಕೆಲವು ದಿನಗಳ ಹಿಂದೆನೆ ಹರಿ ಬಹಿರಂಗವಾಗಿ ಒಂದು ಕಡೆ ಹೇಳಿದ್ದರು. ಅದು ಅಕ್ಷರಶ: ನಿಜ. ಹಾಗಂತ ಹೇಳಿ ಹರಿಪ್ರಸಾದ್ ಮನಸ್ಸು ಮಾಡಿದರೆ ನಾಳೆ ಯಾವುದಾದರೂ ಕಾಂಗ್ರೆಸ್ ಆಡಳಿತ ಇರುವ ರಾಜ್ಯದ ಸಿಎಂ ಇಳಿಬೇಕಾಗುತ್ತದೆ ಎನ್ನುವ ಅರ್ಥ ಅಲ್ಲ. ಆದರೆ ತುಂಬಾ ಕಾಲ ಶಕ್ತಿಪೀಠದ ಕೆಳಗೆನೆ ಕೂತಿದ್ದರೆ ನಮಗೂ ಏನೋ ಶಕ್ತಿ ಇದೆ ಎಂದು ಭ್ರಮಿಸುವ ಮನಸ್ಥಿತಿ ಬಿಕೆ ಹರಿಪ್ರಸಾದ್ ಅವರದ್ದು. ಕರ್ನಾಟಕದಲ್ಲಿರುವ ಯಾವುದೇ ನಾಯಕ ಗಾಂಧಿ ಕುಟುಂಬಕ್ಕೆ ತುಂಬಾ ಕ್ಲೋಸ್ ಎಂದರೆ ಅದು ನಿಸ್ಸಂಶಯವಾಗಿ ಹರಿ ಮಾತ್ರ. ಹಿಂದೆ ಹರಿಗಿಂತ ಒಂದು ಹೆಜ್ಜೆ ಮುಂದೆ ಆಸ್ಕರ್ ಫೆರ್ನಾಂಡಿಸ್ ಇದ್ರು. ಅವರ ನಿಧನದ ನಂತರ ವಯಸ್ಸಿನಲ್ಲಿ ಖರ್ಗೆ ಇದ್ದಾರಾದರೂ ಹರಿ ಗಾಂಧಿ ಕುಟುಂಬದ ಕಿಚನ್ ಕ್ಯಾಬಿನೆಟ್ಟಿನ ಖಾಯಂ ಸದಸ್ಯ. ಖರ್ಗೆ ಕಾಂಗ್ರೆಸ್ಸಿಗೆ ಈಗ ಅನಿವಾರ್ಯತೆ, ಆದರೆ ಹರಿ ಗಾಂಧಿ ಫ್ಯಾಮಿಲಿಯ ನಂಬಿಕಸ್ಥ ನೆಂಟ. ಇಷ್ಟೆಲ್ಲಾ ಬಿರುದಾಂಕಿತ ಇದ್ದರೂ ಒಂದು ರಾಜ್ಯದ ಯಕಶ್ಚಿತ ಸಚಿವ ಸ್ಥಾನ ತನಗೆ ಸಿಗಲಿಲ್ಲ ಎಂದರೆ ಜನಪಥ್ 10 ರಲ್ಲಿ ತಲೆ ಎತ್ತಿ ನಡೆಯೋಕಾಗುತ್ತಾ ಎನ್ನುವುದೇ ಹರಿ ಅನುಭವಿಸುತ್ತಿರುವ ಸಮಸ್ಯೆ. ಸೋನಿಯಾ ಮಧ್ಯಾಹ್ನ ಮಲಗಿ ಸಂಜೆ ಏಳುವಾಗ ಮೊಬೈಲಿನಲ್ಲಿ ಮಿಸ್ ಕಾಲ್ ಗಳಿದ್ದರೆ ಮೊದಲು ಮಾಡುವುದೇ ಹರಿಗೆ ಎನ್ನುವ ವಾತಾವರಣದಲ್ಲಿ ರಾಜಕೀಯವಾಗಿ ಬೆಳೆದಿದ್ದು ಹರಿಪ್ರಸಾದ್. ನಿನ್ನದೇನಿದ್ದರೂ ಮೇಡಂ ಮನೆಯ ಅಂಗಳದಲ್ಲಿ ತೋರಿಸು. ಇಲ್ಲೇನಿದ್ದರೂ ನನ್ನದೇ ನಡೆಯುವುದು ಎನ್ನುವ ಶೈಲಿಯಲ್ಲಿ ಹೇಳಿ ಮುಂದೆ ಸಾಗಿದ ಸಿದ್ದುವನ್ನು ಕಂಡರೆ ಹರಿಪ್ರಸಾದ್ ಮಧ್ಯರಾತ್ರಿಯಲ್ಲಿಯೂ ಕಿರುಚುವ ವಾತಾವರಣ ಸೃಷ್ಟಿಯಾಗಿದೆ.
ನನ್ನ ಕ್ಯಾಪೆಸಿಟಿ ಇವರು ನೋಡಿಲ್ಲ!
ಮೊನ್ನೆ ಪರಂ ಮತ್ತು ಸತೀಶ್ ಜಾರಕಿಹೊಳಿ ಹರಿಯನ್ನು ಸಮಾಧಾನ ಮಾಡಲು ಹೋದಾಗ ” ಇವನ್ಯಾವನ್ರಿ ನನಗೆ ಮಿನಿಸ್ಟರ್ ಮಾಡಲ್ಲ ಎನ್ನುವುದು, ನಾನು ಒಂದು ಕಾಲ್ ಮಾಡಿದ್ರೆ ಎಂತೆಂತಹ ಸಿಎಂಗಳೇ ನನ್ನ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು. ನಾನೀಗ ಇವನ ಮುಂದೆ ಮಿನಿಸ್ಟರ್ ಮಾಡಿ ಎಂದು ಬೇಡಬೇಕಾ?” ಎಂದು ಹೇಳಿ ಚಾ ಕುಡಿಸಿ ಕಳುಹಿಸಿದ್ದಾರೆ. ಅದನ್ನು ಕೇಳಿಸಿಕೊಂಡು ಹೊರಗೆ ಬಂದ ಪರಂ, ಜಾರಕಿಹೊಳಿ ” ಅವರು ನಮ್ಮ ದೊಡ್ಡ ನಾಯಕರು, ಏನೂ ಮನಸ್ತಾಪವಿಲ್ಲ, ಹೀಗೆ ಬಂದ್ದಿದ್ವಿ” ಎಂದು ಮಾಧ್ಯಮಗಳ ಮುಂದೆ ವರದಿ ಒಪ್ಪಿಸಿದ್ದಾರೆ. ಅಷ್ಟಕ್ಕೂ ಇವರಿಬ್ಬರಿಗೆ ಸೂಚನೆ ಕೊಟ್ಟು ಕಳುಹಿಸಿದ್ದೇ ಸುರ್ಜೆವಾಲಾ ಮತ್ತು ವೇಣು. ಏನ್ರೀ ಅದು, ಹರಿಗೂ ಅವರಿಗೂ ಮನಸ್ತಾಪ, ನೋಡ್ಕೊಂಡು ಬನ್ರಿ ಎಂದು ಇಬ್ಬರೂ ಹೇಳಿದ್ದೇ ತಡ ಪರಂ ಮತ್ತು ಸತೀಶ್ ಹೋಗಿ ಮಾತನಾಡಿಸಿಕೊಂಡು ಬಂದಿದ್ದಾರೆ. ಹಾಗಾದರೆ ಎಲ್ಲವೂ ಸರಿಹೋಗುತ್ತಾ? ನೋ ವೇ. ಇದಕ್ಕೆ ಇರುವುದು ಒಂದೇ ದಾರಿ. ಹರಿ ವಿಧಾನಪರಿಷತ್ ಸದಸ್ಯತ್ವದ ಅವಧಿ ಮುಗಿದ ಮೇಲೆ ವಾಪಾಸ್ ದೆಹಲಿಗೆ ಕರೆಸಿಕೊಳ್ಳುವ ತನಕ ಈ ತಿಕ್ಕಾಟ ಮುಂದುವರೆಯುತ್ತಲೇ ಇರುತ್ತದೆ.
ಅಂದು ಸಿದ್ದು, ಇಂದು ಹರಿ!
ಇದನ್ನು ಒಂದು ರೀತಿಯಲ್ಲಿ ಹಿಸ್ಟರಿ ರಿಪಿಟ್ ಎನ್ನಬಹುದು. ಜೆಡಿಎಸ್ ನಲ್ಲಿ ಇದ್ದಾಗ ಸಿದ್ದುವಿಗೂ ಹೀಗೆ ಪಕ್ಷದಲ್ಲಿಯೇ ಉಸಿರುಗಟ್ಟಿಸುವ ವಾತಾವರಣ ಇತ್ತು. ತಾನು ಬಲಿಷ್ಟ ಕುರುಬರ ನಾಯಕನಾದರೂ ತಮಗೆ ಸಿಎಂ ಆಗುವ ಅವಕಾಶವನ್ನು ದೊಡ್ಡ ಗೌಡರು ತಪ್ಪಿಸಿ ಧರಂ ಸಿಎಂ ಆಗಲು ಒಪ್ಪಿದರಲ್ಲ, ಆಗ ಸಿದ್ದು ಪಕ್ಷದೊಳಗೆ ಇದ್ದುಕೊಂಡೇ ಅಹಿಂದ ನಾಯಕನಾಗಲು ಹೊರಟರು. ಅಲ್ಲಿಂದ ಅವರ ಶಕ್ತಿ ಸಾಮರ್ತ್ಯ ನೋಡಿದ ಕಾಂಗ್ರೆಸ್ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿತು. ಅವರನ್ನು ನಂತರ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಯಿತು. ಈಗಲೂ ಮತ್ತೆ ಅಧಿಕಾರಕ್ಕೆ ಮರಳಿದ ಬಳಿಕ ಸಿಎಂ ಮಾಡಲಾಗಿದೆ. ಬಹಳ ಕಷ್ಟಪಟ್ಟು ಸಮಾಧಾನಪಡಿಸಿ ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಇಬ್ಬರಿಗೂ ಅವರವರ ಬಳಗದವರನ್ನು ಸಚಿವರನ್ನಾಗಿ ಮಾಡುವ ಕೋಟಾ ನೀಡಲಾಗಿದೆ. ಎರಡೂ ತಂಡಗಳಿಗೆ ಸಲ್ಲುವ ಖಾದರ್ ಅವರಿಗೆ ಸ್ವಲ್ಪ ಟೈಮ್ ಸ್ಪೀಕರ್ ಮಾಡಲಾಗಿದೆ. ಯಾಕೆಂದರೆ ಜಮೀರ್ ಮುಸ್ಲಿಂ ಕೋಟಾದಲ್ಲಿ ಸಿದ್ದು ಬಳಗದಿಂದ ಮಿನಿಸ್ಟರ್ ಆಗಲೇಬೇಕಿತ್ತು. ಹಾಗಾದರೆ ಹರಿ ಒಬ್ಬರೇ ಯಾಕೆ ಬಾಕಿಯಾದ್ರು.
ಅದು ಸಿದ್ದು ಉರುಳಿಸಿದ ದಾಳ ಎನ್ನುವುದು ಹರಿಪ್ರಸಾದ್ ಅಭಿಮತ. ಅವರು ಪಕ್ಕಾ ಡಿಕೆಶಿ ಬಣವಲ್ಲವಾದರೂ ಸಿದ್ದು ವಿರೋಧಿ ಬಣ ಹೌದು. ಡಿಕೆಶಿ ಗಾಂಧಿ ಕುಟುಂಬದ ಆರ್ಥಿಕ ಪೈಪ್ ಲೈನ್ ಆಗಿರುವುದರಿಂದ ಹರಿಗೆ ಡಿಕೆಶಿ ಜೊತೆ ಸಲುಗೆ ಜಾಸ್ತಿ. ಆದರೆ ಕೊನೆಯ ಕ್ಷಣದಲ್ಲಿ ಏನೂ ಆಗಿರದಿದ್ದ ಬೋಸುರಾಜ್ ಅವರನ್ನು ಸಚಿವರನ್ನಾಗಿ ಮಾಡಿ ತಮಗೆ ತಟ್ಟೆ ಕೊಟ್ಟ ಬಳಿಕ ಡಿಕೆಶಿ ಬಳಿ ಮಾತನಾಡಿದ ಹರಿಗೆ ತಾನು ಸಿಎಂ ಆದಾಗ ಗ್ಯಾರಂಟಿ ಮಿನಿಸ್ಟರ್ ಮಾಡುತ್ತೇನೆ ಎಂದು ಡಿಕೆಶಿ ಬೆನ್ನು ಸವರಿದ್ದಾರೆ. ಆಗಿನಿಂದ ಸಿದ್ದು ವಿರುದ್ಧ ಹರಿ ಬಾಣ ಬಿಡುತ್ತಿದ್ದಾರೆ. ಪಂಚೆ ಒಳಗೆ ಖಾಕಿ ಚೆಡ್ಡಿ ಇದೆ ಎನ್ನುತ್ತಿದ್ದಾರೆ. ಅರಸು ಕಾರಿನಲ್ಲಿ ಕುಳಿತರೆ ಅರಸು ಆಗಲ್ಲ ಎನ್ನುತ್ತಿದ್ದಾರೆ. ಇದನ್ನೆಲ್ಲ ದೆಹಲಿಯಿಂದ ನೋಡುತ್ತಿರುವ ವೇಣು ರಾಹುಲ್ ಕಿವಿಯಲ್ಲಿ “ಹರಿಜಿಕೋ ದೆಹಲಿ ವಾಪಾಸ್ ಬುಲಾಯೇಂಗೇ ಕ್ಯಾ?” ಎಂದಿದ್ದಾರೆ!
Leave A Reply