ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು – ಠಾಕ್ರೆ
ಉದ್ದವ್ ಠಾಕ್ರೆ ಕೊನೆಗೂ ಅಪಶಕುನ ನುಡಿದಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮ ಮುಂದಿನ ಜನವರಿ ಅಂತ್ಯದ ಒಳಗೆ ನಡೆಯಲಿದೆ. ಅಲ್ಲಿ ಲಕ್ಷಾಂತರ ಹಿಂದೂ ಭಕ್ತರು ಆಗಮಿಸಲಿದ್ದಾರೆ. ಅವರು ಅಲ್ಲಿ ಕಾರ್ಯಕ್ರಮ ಮುಗಿಸಿ ಹಿಂದಿರುಗುವಾಗ ಗೋದ್ರಾ ಶೈಲಿಯ ಹತ್ಯಾಕಾಂಡ ನಡೆಯಬಹುದು ಎನ್ನುವ ಅರ್ಥದ ಮಾತುಗಳನ್ನು ಉದ್ದವ್ ಠಾಕ್ರೆ ಹೇಳಿದ್ದಾರೆ. ಚುನಾವಣೆಗೆ ಕೆಲವೇ ಸಮಯ ಇರುವಾಗ ಹಾಗೆ ಆಗುವ ಸಾಧ್ಯತೆ ಇದೆ ಎಂದು ಜ್ಯೂನಿಯರ್ ಠಾಕ್ರೆ ತಮ್ಮ ನಾಲಗೆಯನ್ನು ಹರಿಯಬಿಟ್ಟಿದ್ದಾರೆ. ಉದ್ದವ್ ಈ ಮಾತುಗಳನ್ನು ಹೇಳುವ ಮೂಲಕ ಪರೋಕ್ಷವಾಗಿ ಮೂಲಭೂತವಾದಿಗಳಿಗೆ ಏನು ಹಿಂಟ್ ಕೊಟ್ಟಂತೆ ಆಗುತ್ತದೆ ಎನ್ನುವುದು ಅವರಿಗೆ ಮಾತ್ರ ಗೊತ್ತು.
ಈಗ ದೇಶದಲ್ಲಿ ಯಾರಿಗೂ ಕೋಮು ಸಂಘರ್ಷಗಳು ಬೇಕಾಗಿಲ್ಲ. ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ಸುಂದರ ದೇಗುಲ ಈ ದೇಶದ ಅಸ್ಮಿತೆಯ ಪ್ರತೀಕ. ಅಲ್ಲಿ ರಾಮಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸುವ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ದಿನ ಕೂಡ ರಾಷ್ಟ್ರದಲ್ಲಿ ಕೋಮುಗಲಭೆ ಆಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಕೇಂದ್ರದಲ್ಲಿ ಇರುವುದು ಮೋದಿ ಸರಕಾರ. ಆವತ್ತು ಒಂದೇ ಒಂದು ಸಣ್ಣ ಕಿಡಿ ಕೂಡ ಹೊತ್ತಿಸಲು ಯಾರಿಗೂ ಧೈರ್ಯ ಬಂದಿಲ್ಲ. ಯಾಕೆಂದರೆ ಈಗ ಭಾರತ ಬದಲಾಗಿದೆ. ಗೋಧ್ರಾ ಹತ್ಯಾಕಾಂಡದ ಅವಧಿಯ ದೇಶವೇ ಬೇರೆ. ಈಗ ಭಾರತವೇ ಬೇರೆ. ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯ ಸಮಯದಲ್ಲಿ ಭಾರತದಲ್ಲಿದ್ದ ಸರಕಾರವೇ ಬೇರೆ. ಈಗ ದೇಶವನ್ನು ಆಳುತ್ತಿರುವವರೇ ಬೇರೆ. ಏನಾದರೂ ಬದಲಾಗಿದೆ ಎಂದರೆ ಅದು ಉದ್ದವ್ ಠಾಕ್ರೆ ಮನಸ್ಥಿತಿ. ಅಯೋಧ್ಯೆಯ ವಿವಾದಿತ ಕಟ್ಟಡವನ್ನು ಕೆಡವಿದವರು ಯಾರು ಎಂದು ವಿಚಾರಣೆ ನಡೆಯುವಾಗ ಧೈರ್ಯವಾಗಿ ಅದನ್ನು ಮಾಡಿದವರು ಶಿವಸೇನೆಯ ಕರಸೇವಕರು ಎಂದು ಎದೆತಟ್ಟಿ ಹೇಳಿದವರು ಬಾಳಾ ಸಾಹೇಬ್ ಠಾಕ್ರೆ. ಕಾಂಗ್ರೆಸ್ಸಿನೊಂದಿಗೆ ಮೈತ್ರಿ ಮಾಡುವುದು ಸಾಧ್ಯವೇ ಇಲ್ಲ. ನಾವು ಅಧಿಕಾರಕ್ಕೆ ಬರದಿದ್ದರೂ ಪರವಾಗಿಲ್ಲ, ಆದರೆ ಅಂತವರೊಂದಿಗೆ ಅಧಿಕಾರ ಹಂಚಿಕೊಳ್ಳಲ್ಲ ಎಂದಿದ್ದರು ಠಾಕ್ರೆ. ಆದರೆ ಉದ್ದವ್ ಖುರ್ಚಿಯ ಆಸೆಗಾಗಿ ಎಲ್ಲಾ ಸಿದ್ದಾಂತವನ್ನು ತ್ಯಜಿಸಿಬಿಟ್ಟರು. ಯಾವ ಬಾಳಾ ಠಾಕ್ರೆ ತಮ್ಮ ಜೀವನದುದ್ದಕ್ಕೂ ಒಂದು ಹವಾ ಇಟ್ಟು ರಾಜಕೀಯ ಮಾಡಿದರೋ ಅದನ್ನು ಮಣ್ಣುಪಾಲು ಮಾಡಿ ಅತ್ತ ಸರಿಯಾಗಿ ಅಧಿಕಾರವನ್ನು ಸಂಭಾಳಿಸಲು ಆಗದೇ, ಇತ್ತ ಸಿದ್ಧಾಂತಕ್ಕೂ ಬದ್ಧರಾಗದೇ ಹೋಗಿದ್ದಾರೆ ಉದ್ದವ್. ಅಂತವರು ಈಗ ಗೋಧ್ರಾ ಹತ್ಯಾಕಾಂಡವನ್ನು ನೆನಪಿಸಿದ್ದಾರೆ.
ಅವರು ಹೇಳುವ ರೀತಿ ನೋಡಿದರೆ ಅವರಿಗೆ ಅಂತಹ ಹಿಂಟ್ ಸಿಕ್ಕಿರಬಹುದಾ? ಅಥವಾ ತಮ್ಮ ಎಳಸು ರಾಜಕೀಯ ಅನುಭವವನ್ನೇ ಬಳಸಿ ಹೀಗೆ ಹೇಳಿದ್ದಾರಾ ಅಥವಾ ಗುಪ್ತಚರ ವರದಿ ಏನಾದರೂ ಅವರಿಗೆ ಸಿಕ್ಕಿದೆಯಾ ಎಂದು ಅವರೇ ಹೇಳಬೇಕು.
Leave A Reply