ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!

ಮದ್ಯ ನಿಷೇಧ ಇರುವ ರಾಜ್ಯಗಳನ್ನು ಬಿಟ್ಟು ಇತರೆ ರಾಜ್ಯಗಳು ಮದ್ಯದ ಮೇಲಿನ ತೆರಿಗೆಯಿಂದಲೇ ತಮ್ಮ ಬೊಕ್ಕಸವನ್ನು ತುಂಬಿಕೊಳ್ಳುತ್ತಿರುವುದು ಸುಳ್ಳಲ್ಲ. ಒಂದು ರೀತಿಯಲ್ಲಿ ಮದ್ಯಪ್ರಿಯರು ರಾಜ್ಯದ ಬೊಕ್ಕಸ ತುಂಬುವ ಕೆಲಸವನ್ನು ಪರೋಕ್ಷವಾಗಿ ಮಾಡುತ್ತಾ ಬರುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ. ಆದರೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಮದ್ಯಪ್ರಿಯರ ಕೊಡುಗೆ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಗೋವಾದಲ್ಲಿ ಮದ್ಯದ ದರಗಳು ಅತೀ ಕಡಿಮೆ ಪ್ರಮಾಣದಲ್ಲಿ ಇದ್ದರೆ, ಅದರ ಪಕ್ಕದ ಕರ್ನಾಟಕದಲ್ಲಿ ಮದ್ಯದ ದರಗಳು ರಾಷ್ಟ್ರದಲ್ಲಿಯೇ ಗರಿಷ್ಟ ಪ್ರಮಾಣದಲ್ಲಿವೆ ಎಂದು ವರದಿಯಾಗಿದೆ. ಇಂಟರ್ ನ್ಯಾಶನಲ್ ಸ್ಪಿರಿಟ್ ಮತ್ತು ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ನಡೆಸಿದ ಸರ್ವೆ ಪ್ರಕಾರ ಮದ್ಯಗಳಾದ ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ಗೋವಾದಲ್ಲಿ ಉದಾಹರಣೆಗೆ ನೂರು ರೂಪಾಯಿ ದರ ಇದ್ದರೆ ದೆಹಲಿಯಲ್ಲಿ ಅದು 134 ಮತ್ತು ಕರ್ನಾಟಕದಲ್ಲಿ 513 ಆಗಿರುತ್ತದೆ. ವಿದೇಶದಿಂದ ಆಮದು ಆಗುವ ಮದ್ಯದ ದರದ ಮೇಲಿನ ತೆರಿಗೆಗಳು ಬಹುತೇಕ ಏಕಪ್ರಕಾರವಾಗಿದ್ದರೂ, ವಿದೇಶಿ ಮಾರಾಟಗಾರರು ಆಮದು ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡುತ್ತಲೇ ಬರುತ್ತಿದ್ದಾರೆ.
ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರಬೇಕು ಎನ್ನುವ ಆಗ್ರಹ ಹಲವು ಸಮಯದಿಂದ ಕೇಳಿಬರುತ್ತಿದ್ದರೂ ಮದ್ಯವನ್ನು ಕೂಡ ಇದೇ ಮಾನದಂಡದ ವ್ಯಾಪ್ತಿಯಲ್ಲಿ ತರಬೇಕು ಎನ್ನುವ ಆಗ್ರಹ ಮದ್ಯಪ್ರಿಯರ ಬಾಯಿಂದ ಬಂದಿಲ್ಲ ಎನ್ನುವುದೇ ಆಡಳಿತ ಮಾಡುವವರಿಗೆ ಸಮಾಧಾನದ ವಿಷಯ.
Leave A Reply