ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
ನಾವು ನಮ್ಮ ಜೀವನದಲ್ಲಿ ಅನೇಕ ಸಂದರ್ಭದಲ್ಲಿ ಏನಾದರೂ ಮಾಹಿತಿಗಾಗಿ ಗೂಗಲ್ ಮೊರೆ ಹೋಗುತ್ತಾ ಇರುತ್ತೇವೆ. ಗೂಗಲ್ ನಲ್ಲಿ ಏನು ಟೈಪ್ ಮಾಡಿದರೂ ಅದರಲ್ಲಿ ನಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಹಾಗಂತ ನಾವು ಇನ್ನು ಮುಂದೆ ಆತ್ಮಹತ್ಯೆ ಮಾಡ್ಕೊಳ್ಳೋದು ಹೇಗೆ ಎಂದು ಗೂಗಲ್ ಸರ್ಚ್ ಮಾಡಿದರೆ ನೀವು ಇರುವ ಸ್ಥಳಕ್ಕೆ ಪೊಲೀಸರು ಬರುವ ಸಾಧ್ಯತೆ ಇದೆ.
ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದ ಮುಂಬೈಯ ಅಂಧೇರಿಯ ಯುವಕನೊಬ್ಬ ಬದುಕಿನಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯೋಚಿಸಿದ್ದ. ಆದರೆ ಸಾಯುವುದಕ್ಕೆ ಯಾವ ಮಾರ್ಗ ಉತ್ತಮ ಎಂದು ತೀರ್ಮಾನಿಸಲು ಆತ ಗೂಗಲ್ ಸರ್ಚ್ ಮಾಡಿದ್ದಾನೆ. ಆದರೆ ಇಂಟರ್ ನೆಟ್ ಮೇಲೆ ನಿಗಾ ಇರಿಸಿರುವ ಇಂಟರ್ ಪೋಲ್ ತಕ್ಷಣ ಜಾಗೃತವಾಗಿದೆ. ಈ ಸಂಬಂಧ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗದ ಸಿಬ್ಬಂದಿ 2 ಗಂಟೆಯೊಳಗೆ ಆ ವ್ಯಕ್ತಿಯನ್ನು ಪತ್ತೆ ಮಾಡಿ ಕೌನ್ಸೆಲಿಂಗ್ ನಡೆಸಿದ್ದಾರೆ.
ಮಂಗಳೂರಿನಲ್ಲಿಯೂ ಎರಡು ವರ್ಷಗಳ ಹಿಂದೆ ದಂಪತಿಯೊಬ್ಬರು ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ತಾವು ಸಾಯುವುದಾಗಿ ತಿಳಿಸಿದ್ದರು. ಈ ಮಾಹಿತಿಯನ್ನು ಆಧರಿಸಿ ಪೊಲೀಸ್ ಕಮೀಷನರ್ ಆ ಮನೆಗೆ ತಲುಪುವಷ್ಟರಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಂಗಳೂರಿನ ಚಿತ್ರಾಪುರ ಸಮುದ್ರ ಕಿನಾರೆಯ ಬೃಹತ್ ಸಮುಚ್ಚಯದಲ್ಲಿ ಈ ಘಟನೆ ನಡೆದಿತ್ತು. ತಮ್ಮ ಅಂತಿಮ ಸಂಸ್ಕಾರಕ್ಕಾಗಿ ಹಣ ಇಟ್ಟು ಹಿಂದೂ ಸಂಘಟನೆಯೊಂದಕ್ಕೆ ಅದನ್ನು ನೆರವೇರಿಸಲು ಕೋರಿದ್ದರು. ಈ ಆಧುನಿಕ ಯುಗದಲ್ಲಿ ಅಂತರ್ಜಾಲ ಅನೇಕ ಸಂದರ್ಭದಲ್ಲಿ ಬಹಳ ಉಪಯುಕ್ತವಾಗಿದ್ದು, ಕೆಲವರ ಬದುಕನ್ನು ಉಳಿಸುತ್ತದೆ. ಕೆಲವು ಸಂದರ್ಭದಲ್ಲಿ ಜೀವವನ್ನು ಕಸಿಯುತ್ತದೆ.
Leave A Reply