ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
ದೆಹಲಿ ಪೊಲೀಸ್ ಇದರ ವಿಶೇಷ ತಂಡ “ನ್ಯೂಸ್ ಕ್ಲಿಕ್” ಇದಕ್ಕೆ ಸಂಬಂಧಪಟ್ಟಿರುವ ದೆಹಲಿಯಲ್ಲಿರುವ ವಿವಿಧ ಕಚೇರಿಗಳ ಮೇಲೆ ದಾಳಿ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡಿದೆ. ನ್ಯೂಸ್ ಕ್ಲಿಕ್ ನ್ಯೂಸ್ ಪೋರ್ಟಲ್ ಚೀನಾದಿಂದ ಫಂಡ್ ಪಡೆದುಕೊಂಡು ಭಾರತದಲ್ಲಿ ಇಲ್ಲಿನ ಆಡಳಿತದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿಸುತ್ತದೆ ಎನ್ನುವ ಆರೋಪದಡಿಯಲ್ಲಿ ಪೊಲೀಸರು ಈ ದಾಳಿಯನ್ನು ಸಂಘಟಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಚೀನಾದ ರಹಸ್ಯತಂತ್ರಗಳನ್ನು ಇಲ್ಲಿ ಹರಡಲು ಈ ನ್ಯೂಸ್ ಕ್ಲಿಕ್ ಮಾಧ್ಯಮ ಯತ್ನಿಸುತ್ತಿತ್ತು ಎಂದು ಆರೋಪವಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಾರ್ಟಿಯ ವಿವಿಧ ಮುಖಂಡರು “ವಿದೇಶದಿಂದ ಫಂಡ್ ಪಡೆದು ದೇಶದ ಒಳಗೆ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುವ ನ್ಯೂಸ್ ಕ್ಲಿಕ್ ಅಥವಾ ಯಾವುದೇ ನ್ಯೂಸ್ ಏಜೆನ್ಸಿಯವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ” ಎಂದು ತಿಳಿಸಿದ್ದಾರೆ. ಚೀನಾ ನಮ್ಮ ದೇಶದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ಸಹಿಸುವುದಿಲ್ಲ. ಅದಕ್ಕಾಗಿ ನಮ್ಮ ದೇಶದ ಏಜೆನ್ಸಿಯನ್ನು ಬಳಸಿಕೊಳ್ಳುತ್ತದೆ. ಇದನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಯುಎಪಿಎ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 153 ಎ (ಎರಡು ಸಮುದಾಯಗಳ ನಡುವೆ ದ್ವೇಷ ಹರಡಲು ಯತ್ನ) ಮತ್ತು 120 ಒಬಿ (ಅಪರಾಧ ಷಡ್ಯಂತ್ರ) ಅಡಿಯಲ್ಲಿ ಅಗಸ್ಟ್ 17 ರಂದು ಪ್ರಕರಣ ದಾಖಲಾಗಿತ್ತು.
ಈ ದಾಳಿಯ ಬಳಿಕ ನ್ಯೂಸ್ ಕ್ಲಿಕ್ ಇದರ ಕೆಲವು ವರದಿಗಾರರನ್ನು ದೆಹಲಿ ಪೊಲೀಸರು ಲೋಧಿ ರಸ್ತೆಯಲ್ಲಿರುವ ವಿಶೇಷ ವಿಭಾಗದ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅವರ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಮೇರಿಕಾದಲ್ಲಿರುವ ಮಿಲೆನಿಯರ್ ನೇವಿಲ್ಲೆ ರಾಯ್ ಸಿಂಗಂ ಚೀನಾ ಪರ ಪ್ರಚಾರ ಮಾಡಲು ನ್ಯೂಸ್ ಕ್ಲಿಕ್ ನ್ಯೂಸ್ ಪೋರ್ಟಲ್ ಗೆ ನಿಧಿ ಒದಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
Leave A Reply