ಷಡಕ್ಷರಿ ಅವರು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ!
ವಾಕರಿಕೆ ಬರುವಷ್ಟು ಬಹುಮತವನ್ನು ಪಡೆದ ಕೂಡಲೇ ಸುಗಮ ಆಡಳಿತ ನಡೆಸುತ್ತೇವೆ ಎನ್ನುವುದು ಭ್ರಮೆ. ಇದು ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರಬಹುದು. ಚುನಾವಣೆಗೆ ಸಜ್ಜಾಗಿರುವ ರಾಜಸ್ಥಾನದಲ್ಲಿ ವೇದಿಕೆಯ ಮೇಲೆನೆ ಅಲ್ವಾರ್ ಜಿಲ್ಲೆಯ ಶಾಸಕರೊಬ್ಬರು ತಮ್ಮದು ಏನೂ ನಡೆಯುವುದಿಲ್ಲ. ಇಡೀ ರಾಜ್ಯ ಲೂಟಿಯಲ್ಲಿ ನಿರತವಾಗಿದೆ. ಸಿಕ್ಕಿದ್ದಷ್ಟು ಎಲ್ಲರೂ ನುಂಗುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ಪರಿಸ್ಥಿತಿಯನ್ನು ಊಹಿಸಿದರೆ ನಮ್ಮದು ನಾಯಿ ಪಾಡು ಆಗಿದೆ. ಹೇಳುವವರು, ಕೇಳುವವರು ಯಾರೂ ಇಲ್ಲ ಎಂದು ಬಹಿರಂಗವಾಗಿ ಗೋಳು ತೋಡಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಹೋಗುವ ಕೊನೆಯ ದಿನಗಳಲ್ಲಿ ಹೀಗೆ ಆದರೆ ಅಲ್ಲಿ ಮುಂದೆ ಹಾಲಿ ಆಡಳಿತ ಪಕ್ಷಕ್ಕೆ ಭವಿಷ್ಯವಿಲ್ಲ ಎಂದೇ ಅರ್ಥ. ರಾಜಸ್ಥಾನದಲ್ಲಿ ರಾಜೆಯವರನ್ನು ಸಿಎಂ ಅಭ್ಯರ್ಥಿ ಮಾಡಲು ಭಾರತೀಯ ಜನತಾ ಪಾರ್ಟಿಯ ಹೈಕಮಾಂಡಿಗೆ ಮನಸ್ಸಿಲ್ಲ. ಹಾಗಂತ ನಾಯಕನಿಲ್ಲದೇ ಚುನಾವಣೆಗೆ ಹೋದರೆ ಎಷ್ಟರಮಟ್ಟಿಗೆ ಅದು ಲಾಭವಾಗುತ್ತದೆ ಎನ್ನುವುದು ಈಗ ಹೇಳುವುದು ಕಷ್ಟ. ಅದು ಬೇರೆ ವಿಷಯ. ಆದರೆ ಬಹಿರಂಗವಾಗಿ ತಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರದಲ್ಲಿರುವ ಪಕ್ಷವೇ ಹೇಳುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅತ್ತ ರಾಜಸ್ಥಾನದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹಾಗೆ ಇದ್ದರೆ ಕರ್ನಾಟಕದಲ್ಲಿಯೂ ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ಶಾಸಕರು ಸತ್ಯ ಒಪ್ಪಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಶಾಸಕರದ್ದೂ ಅದೇ ಹಾದಿ!
ಕಾಂಗ್ರೆಸ್ ಪಕ್ಷದ ಶಾಸಕ ಷಡಕ್ಷರಿ ಅವರು ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎನ್ನುವುದನ್ನು ಪರೋಕ್ಷವಾಗಿ ನಾಗರಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಐದು ಉಚಿತ ಗ್ಯಾರಂಟಿಗಳು ನಮ್ಮನ್ನು ಮಲಗಿಸಿಬಿಟ್ಟಿವೆ ಎಂದು ಕಾಂಗ್ರೆಸ್ ಶಾಸಕ ಷಡಕ್ಷರಿ ಹೇಳಿದ್ದಾರೆ. ಹಾಗಾದರೆ ಮುಂದಿನ ಬಜೆಟ್ ತನಕ ಏನೂ ಅಭಿವೃದ್ಧಿ ಇಲ್ವಾ? ಬಹುತೇಕ ಇಲ್ಲ. ಯಾಕೆಂದರೆ ಒಂದು ರಾಜ್ಯದ ಆದಾಯ ಅದರ ಖರ್ಚಿಗಿಂತ ಕಡಿಮೆಯಾಗಿ ಬಿಟ್ಟರೆ ಅಭಿವೃದ್ಧಿಗೆ ಏನು ಕೊಡುವುದು? ಎಲ್ಲಿಂದಲಾದರೂ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆಯಲೇಬೇಕು. ಗ್ಯಾರಂಟಿ ನಿಲ್ಲಿಸುವ ಹಾಗಿಲ್ಲ. ಯಾಕೆಂದರೆ ಎದುರಿಗೆ ಲೋಕಸಭಾ ಚುನಾವಣೆ ಇದೆ. ಅದರಲ್ಲಿ ಕನಿಷ್ಟ 10 ರಿಂದ 12 ಸೀಟು ಗೆಲ್ಲದಿದ್ದರೆ ಕಾಂಗ್ರೆಸ್ ಕೇಂದ್ರದಲ್ಲಿ ತಲೆ ಎತ್ತಿ ನಡೆಯುವುದು ಕಷ್ಟ. ದಕ್ಷಿಣದಲ್ಲಿ ಬಿಜೆಪಿಗೆ ಹೇಗೆ ಕರ್ನಾಟಕ ಒಂದೇ ಆಸರೆಯೋ ಅದೇ ರೀತಿಯಲ್ಲಿ ಕಾಂಗ್ರೆಸ್ಸಿಗೂ ಹೆಚ್ಚು ಕಡಿಮೆ ಅದೇ ಪರಿಸ್ಥಿತಿ. ಆದ್ದರಿಂದ ಗ್ಯಾರಂಟಿ ಇನ್ನು ಒಂದು ವರ್ಷ ನಿರ್ವಿಘ್ನವಾಗಿ ಮುಂದುವರೆಯುತ್ತಿದೆ.
ಅತ್ತ ಅಧಿಕಾರ ಇತ್ತ ಬಿಸಿತುಪ್ಪ!
ಸದ್ಯ ಪಂಜಾಬಿನಿಂದ ಬರುತ್ತಿರುವ ಮಾಹಿತಿ ಪ್ರಕಾರ ಅಲ್ಲಿನ ಸರಕಾರ ಉಚಿತ ಗ್ಯಾರಂಟಿಗಳಿಗೆ ಸಾಲ ತೆಗೆದುಕೊಂಡು ಆರ್ಥಿಕವಾಗಿ ದಿವಾಳಿಯಾಗುವ ಹಂತದಲ್ಲಿದೆ. ಹಾಗೆಂದು ಇಲ್ಲಿ ಹೇಳಿದರೆ ಬಡವರ ವಿರೋಧಿ ಎಂದು ಹಣೆಪಟ್ಟಿ ಬರುತ್ತದೆ. ಇನ್ನೊಂದೆಡೆ ಉಚಿತ ಗ್ಯಾರಂಟಿ ಕೊಡಿ. ಅದರ ನಡುವೆ ಅಭಿವೃದ್ಧಿ ಕೂಡ ಮಾಡಿ ಎನ್ನುವುದು ಜನರ ಸಹಜ ಬೇಡಿಕೆ, ಯಾಕೆಂದರೆ ಈಗ ಹೊಸ ಸರಕಾರ ಬಂದಿದೆ. ಕಾಂಗ್ರೆಸ್ ಶಾಸಕರಲ್ಲಿ ಹಲವರು ಈ ಚುನಾವಣೆಯ ಹಿಂದೆ ಅಂದರೆ 2018 ರಲ್ಲಿ ಸೋತಿದ್ದವರು ಈಗ ಒಂದು ಗ್ಯಾಪಿನ ಬಳಿಕ ಮತ್ತೆ ಆಯ್ಕೆಯಾಗಿ ಬಂದಿದ್ದಾರೆ. ಅವರ ಮೇಲೆ ಸಹಜವಾಗಿ ಕ್ಷೇತ್ರದ ನಾಗರಿಕರಿಗೆ ನಿರೀಕ್ಷೆ ಜಾಸ್ತಿ ಇದೆ. ಆ ಕೆಲಸ ಆಗಬೇಕು. ಈ ಕೆಲಸ ಆಗಬೇಕು ಎಂದು ಮನವಿ ಹಿಡಿದುಕೊಂಡು ಬರುತ್ತಾರೆ. ನಿಮ್ಮದೇ ಸರಕಾರ ಅಲ್ವಾ? ಏನಾದರೂ ಮಾಡಿ ಎಂದು ಒತ್ತಡ ಹಾಕುತ್ತಾರೆ. ಅಲ್ಲಿ ನೋಡಿದರೆ ಫಂಡ್ ಇಲ್ಲ. ಹೀಗಿರುವಾಗ ಕ್ಷೇತ್ರದ ಜನರಿಗೆ ಹೇಗೆ ಮುಖ ತೋರಿಸುವುದು. ಆದ್ದರಿಂದ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಇದು ಕೇವಲ ಷಡಕ್ಷರಿ ಒಬ್ಬರ ಸಮಸ್ಯೆ ಅಲ್ಲ. ಬಹುತೇಕ ಎಲ್ಲಾ ಶಾಸಕರ ಸಮಸ್ಯೆ ಇದೇ ಆಗಿದೆ. ಯಾಕೆಂದರೆ ಅಧಿಕಾರಕ್ಕೆ ಬಂದಿರುವುದೇ ಹಿಂದಿನ ಸರಕಾರದ ಜನವಿರೋಧಿ ಆಡಳಿತ ಮತ್ತು ಉಚಿತ ಗ್ಯಾರಂಟಿಗಳಿಂದ. ಹೀಗಿರುವಾಗ ನಾವು ಜನರಿಗೆ ಉತ್ತಮ ಅಭಿವೃದ್ಧಿಯ ಮೂಲಕ ಆಡಳಿತ ಕೊಡದೇ ಇದ್ದರೆ ಆಗುತ್ತಾ? ಆದ್ದರಿಂದ ಕಾಂಗ್ರೆಸ್ ಶಾಸಕರಲ್ಲಿ ಹಲವರು ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದಾರೆ. ಬಿಜೆಪಿ ಶಾಸಕರ ಪರಿಸ್ಥಿತಿ ಕೇಳಬೇಕಾಗಿಲ್ಲ. ಕಾಂಗ್ರೆಸ್ಸಿನವರಿಗೆ ಚೊಂಬು ಸಿಕ್ಕಿರುವಾಗ ಬಿಜೆಪಿ ಶಾಸಕರಿಗೆ ಸದ್ಯ ಒಂದು ಸ್ಪೂನ್ ಸಿಗುವುದು ಕಷ್ಟ.
Leave A Reply