ವಂದೇ ಭಾರತ್ ರೈಲಿಗೆ ಕಿತ್ತಳೆ ಬಣ್ಣವೇಕೆ?
ವಂದೇ ಭಾರತ್ ರೈಲಿಗೆ ಕಿತ್ತಳೆ ಬಣ್ಣವೇಕೆ? ವೈಜ್ಞಾನಿಕ ಕಾರಣ ತಿಳಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್.
ಕಿತ್ತಳೆ ಬಣ್ಣದ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ, ನೂರು ಪ್ರತಿಶತದಷ್ಟು ವೈಜ್ಞಾನಿಕ ಚಿಂತನೆ ಇದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದರು.
ಇತ್ತೀಚೆಗೆ ಪತ್ರಕರ್ತರ ಜತೆ ನಡೆದ ಸಂವಾದದ ವೇಳೆ ಕಿತ್ತಳೆ ಬಣ್ಣದ ಹಿಂದೆ ರಾಜಕೀಯ ಇದೆ ಎಂಬ ಆರೋಪವನ್ನು ಅಲ್ಲಗೆಳೆದರು. ಮಾನವನ ಕಣ್ಣಿಗೆ ಹಳದಿ ಮತ್ತು ಕಿತ್ತಳೆ ಬಣ್ಣಗಳು ಹೆಚ್ಚು ಗೋಚರಿಸುತ್ತದೆ. ಯೂರೋಪ್ನಲ್ಲಿ ಶೇ. 80ರಷ್ಟು ರೈಲುಗಳು ಕಿತ್ತಳೆ ಬಣ್ಣ ಅಥವಾ ಹಳದಿ ಮತ್ತು ಕಿತ್ತಳೆ ಬಣ್ಣದ ಸಂಯೋಜನೆಯನ್ನು ಒಳಗೊಂಡಿವೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಸಿಲ್ವರ್ನಂತಹ ಇತರೆ ಅನೇಕ ಬಣ್ಣಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳಂತೆ ಪ್ರಕಾಶಮಾನವಾಗಿವೆ ಆದರೆ, ಮಾನವನ ಕಣ್ಣಿಗೆ ಗೋಚರತೆಯ ದೃಷ್ಟಿಕೋನದಿಂದ ಕಿತ್ತಳೆ ಮತ್ತು ಹಳದಿ ಬಣ್ಣದ ಉತ್ತಮ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇಲ್ಲಿ ನೂರರಷ್ಟು ವೈಜ್ಞಾನಿಕ ಚಿಂತನೆ ಇದೆ ಎಂದು ಸ್ಪಷ್ಟನೆ ನೀಡಿದರು.
ಇದೇ ಕಾರಣಕ್ಕೆ ವಿಮಾನಗಳು ಮತ್ತು ಹಡಗುಗಳಲ್ಲಿರುವ ಬ್ಲ್ಯಾಕ್ ಬಾಕ್ಸ್ಗಳ ಬಣ್ಣವೂ ಕಿತ್ತಳೆ ಬಣ್ಣದಲ್ಲಿರುತ್ತವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿ ಮತ್ತು ಜೀವರಕ್ಷಣಾ ಜಾಕೆಟ್ಗಳು ಕೂಡ ಕಿತ್ತಳೆ ಬಣ್ಣದಲ್ಲೇ ಇರುತ್ತವೆ ಎಂದು ಹೇಳಿದರು.
ಭಾರತೀಯ ರೈಲ್ವೆ ಇಲಾಖೆಯು ತನ್ನ ಮೊದಲ ಕಿತ್ತಳೆ-ಬೂದು ಬಣ್ಣದ ವಂದೇ ಭಾರತ್ ರೈಲನ್ನು ಸೆಪ್ಟೆಂಬರ್ 24ರಂದು ಕೇರಳದ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಪ್ರಾರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24 ರಂದು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚಾಲನೆ ನೀಡಿದ ಒಂಬತ್ತು ವಂದೇ ಭಾರತ್ ರೈಲುಗಳಲ್ಲಿ ಇದು ಕೂಡ ಒಂದಾಗಿದೆ.
Leave A Reply