ಪ್ರದೀಪು ಎಂಬ ಚಿಕ್ಕಬಳ್ಳಾಪುರದ ಎಳಸು ಶಾಸಕನ ಪ್ರಶ್ನೆ ಅಲ್ಲ!
ಚಿಕ್ಕಾಬಳ್ಳಾಪುರದ ಶಾಸಕ ಪ್ರದೀಪು ಸೋಲಿಸಿದ್ದು ಸಣ್ಣ ಕುಳವನ್ನೆನ್ನಲ್ಲ. ಮಾಜಿ ಸಚಿವ ಸುಧಾಕರ್ ಸೋತಿರುವುದೇ ಬಹಳ ದೊಡ್ಡ ವಿಷಯ. ಹಾಗೆ ಚಿಕ್ಕಬಳ್ಳಾಪುರದ ಜನತೆ ಪ್ರದೀಪ್ ಈಶ್ವರ್ ಅವರಿಗೆ ಅಧಿಕಾರ ಕೊಟ್ಟು ಏನಾದರೂ ಮಾಡಪ್ಪ ಎಂದು ಹೇಳಿದ್ದಾರೆಂದರೆ ಈ ಮನುಷ್ಯ ಒಂದೊಂದು ದಿನ ಕೂಡ ಲೆಕ್ಕ ಹಾಕಿ ಐದು ವರ್ಷ ಹೇಗೆ ಮುಗಿಯುತ್ತೆ ಎಂದು ಗೊತ್ತಿಲ್ಲ ಎನ್ನುವಂತೆ ಕ್ಷೇತ್ರದ ಸೇವೆ ಮಾಡಬೇಕು. ಅದು ಬಿಟ್ಟು ಪ್ರದೀಪು ಆರಂಭದಲ್ಲಿ ಅಗಸ ಎತ್ತಿ ಎತ್ತಿ ಓಗೆದ ಎನ್ನುವ ಗಾದೆಯಂತೆ ಆಡಿದ್ದೇ ಆಡಿದ್ದು. ಮೊಬೈಲ್ ನಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದೇ ಮಾಡಿದ್ದು. ಈ ವ್ಯಕ್ತಿ ಸದನದಲ್ಲಿ ಮಾತನಾಡಿದ್ರು ಸುದ್ದಿ ಆಯಿತು, ಏನು ಮಾಡಿದ್ರು ಟಿವಿಯವರು ತೋರಿಸಲು ಶುರು ಮಾಡಿದರಲ್ಲ, ಅಲ್ಲಿಗೆ ಪ್ರದೀಪುವಿಗೆ ತಾನೇ ಕರ್ನಾಟಕದ ಸ್ಟಾರ್ ಎನ್ನುವ ಅಹಂಭಾವ ಮನಸ್ಸಿನಲ್ಲಿ ಮೂಡಿತು. ಅದಕ್ಕೆ ಸರಿಯಾಗಿ ಟಿವಿಯವರು ಪ್ರದೀಪು ಸಾಮಾನ್ಯ ಶಾಸಕರಾಗಿದ್ದರೂ ನ್ಯೂಸ್ ಅವರ್ ಅದು ಇದು ಎಂದು ಒಂದೊಂದು ಗಂಟೆ ಸಂದರ್ಶನ ಮಾಡಿದರಲ್ಲ, ಪ್ರದೀಪು ಸಿಎಂ ಗೆಟಪ್ಪು ಹಾಕುವುದು ಮಾತ್ರ ಬಾಕಿ.
ಮಿಂಚುವುದೇ ಗುರಿಯಾಗಬಾರದು!
ಹೀಗಿರುವಾಗ ತಮ್ಮ ಟಿಆರ್ ಪಿಗಾಗಿ ಯಾವುದಾದರೂ ಮಿಕವನ್ನು ಹುಡುಕುವ ಬಿಗ್ ಬಾಸ್ ಮುಖ್ಯಸ್ಥರು ಪ್ರದೀಪುವಿಗೆ ಇಂದ್ರ, ಚಂದ್ರ ಹೇಳಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಪ್ಪಿಸಿದ್ದಾರೆ. ಈ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗುತ್ತಾರಲ್ಲ, ಅವರಿಗೆ ಮಧ್ಯರಾತ್ರಿಯಲ್ಲಿ ಐಶ್ಚರ್ಯ ಬಂದಂತೆ ಕೆಲವೊಮ್ಮೆ ಅನಿಸುವುದು ಇದೆ. ಅವರಿಗೆ ಎದುರಿಗೆ ಏನೂ ಕಾಣಿಸುವುದಿಲ್ಲ. ಕಾಣಿಸುವುದು ಕೇವಲ ಹೊಗಳು ಭಟ್ಟರ ಬಹುಪರಾಕ್ ಮಾತ್ರ. ಇಂತಹ ಸನ್ನಿವೇಶದಲ್ಲಿ ಪ್ರದೀಪು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಮ್ಮತಿಸಿದ್ದಾರೆ. ಒಬ್ಬ ಜನಪ್ರತಿನಿಧಿ, ಅದರಲ್ಲಿಯೂ ರಾಷ್ಟ್ರೀಯ ಪಕ್ಷವೊಂದರಲ್ಲಿ ಆಯ್ಕೆಯಾಗಿರುವವರು ಇಂತಹ ಹೆಜ್ಜೆ ಇಡುವಾಗ ಪಕ್ಷದ ಅಧ್ಯಕ್ಷರಿಗೆ, ಸಿಎಂ ಅವರಿಗೆ ಕೇಳಬೇಕು. ಆದರೆ ಪ್ರದೀಪು ಇದನ್ನೆಲ್ಲಾ ಮಾಡಿದಂತೆ ಕಾಣುವುದಿಲ್ಲ. ಯಾಕೆಂದರೆ ಒಂದು ಘಳಿಗೆ ಮೇಕಪ್ ಮಾಡಿ ಸಂದರ್ಶನಕ್ಕೋ, ಅಡುಗೆ ಕಾರ್ಯಕ್ರಮಕ್ಕೋ ಡಿಕೆಶಿ ಹೋದ ಹಾಗೆ ಹೋಗಿ ಬರುವುದು ಬೇರೆ. ಆದರೆ ಬಿಗ್ ಬಾಸ್ ನಂತಹ ಕಾರ್ಯಕ್ರಮಗಳಲ್ಲಿ ತುಂಡು ಬಟ್ಟೆ ತೊಟ್ಟ ಚೆಂದುಳ್ಳಿಗಳ ನಡುವೆ ಮಿಂಚುವುದು ಬೇರೆ. ಆದರೆ ಪ್ರದೀಪು ರಾಜ್ಯವ್ಯಾಪಿ ಮಿಂಚುವುದೇ ಮುಖ್ಯ ಗುರಿಯಾಗಿ ಇಟ್ಟುಕೊಂಡಿರುವಾಗ ಅವರಿಗೆ ಇದೆಲ್ಲ ನೆನಪಿಗೆ ಬರಲಿಲ್ಲ.
ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ!
ಅಷ್ಟಕ್ಕೂ ಪ್ರದೀಪು ಒಂದಿಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಇದ್ದರೆ ರಾಜ್ಯವೇನೂ ಮುಳುಗುವುದಿಲ್ಲ. ಅವರು ಹೋಗದೇ ಕ್ಷೇತ್ರದಲ್ಲಿಯೇ ಇದ್ದರೂ ಕರ್ನಾಟಕ ಸಿಂಗಾಪುರ್ ಆಗುವುದಿಲ್ಲ. ಅವರ ಈ ನಡೆಯ ಬಗ್ಗೆ ಮಾರ್ಕ್ ಕೊಡಬೇಕಾದವರು ಅವರ ಕ್ಷೇತ್ರದ ಜನತೆ. ಅವರು ಖುಷಿಯಾಗಿದ್ದರೆ ಪ್ರದೀಪು ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ. ಮೂರು ತಿಂಗಳು ಅಮೇರಿಕಾಕ್ಕೆ ಹೋಗಿ ಬಂದರೂ ರಾಜ್ಯಕ್ಕೇನೂ ತೊಂದರೆ ಇಲ್ಲ. ಆದರೆ ಇದು ಪ್ರದೀಪು ಎಂಬ ಚಿಕ್ಕಬಳ್ಳಾಪುರದ ಎಳಸು ಶಾಸಕನ ಪ್ರಶ್ನೆ ಅಲ್ಲ. ಇದು ಅವರು ನಿರ್ವಹಿಸುವ ಸ್ಥಾನದ ಪ್ರಶ್ನೆ. ಅವರ ಕ್ಷೇತ್ರವನ್ನು ಸೇರಿ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಕರೆಂಟ್ ಬಿಲ್ ಸಹಿತ ಬೇರೆ ಬೇರೆ ವಿಚಾರಗಳಿಗೆ ಜನ ಬೊಬ್ಬೆ ಹೊಡೆಯುವ ಪರಿಸ್ಥಿತಿ ಬರುತ್ತಿದೆ. ಅದರೊಂದಿಗೆ ಒಬ್ಬ ಜನಪ್ರತಿನಿಧಿಗೆ ತನ್ನದೇ ಕೆಲಸಕಾರ್ಯಗಳಿರುತ್ತವೆ. ಇದೇ ಪ್ರದೀಪುವಿಗೆ ಟಿಕೆಟ್ ಕೊಡಿಸಲು ದೊಡ್ಡ ದೊಡ್ಡ ತಲೆಗಳು, ಪತ್ರಕರ್ತರು ಬೆವರಿಳಿಸಿದ್ದಾರೆ. ಕಾರ್ಯಕರ್ತರು ಶ್ರಮಿಸಿದ್ದಾರೆ. ಕ್ಷೇತ್ರದ ಮುಖಂಡರು ದುಡಿದಿದ್ದಾರೆ. ಅವರೆಲ್ಲರೂ ಈ ಪ್ರದೀಪು ಬಿಗ್ ಬಾಸ್ ಮನೆಯೊಳಗೆ ಇರುವಷ್ಟು ದಿನ ವಿಪಕ್ಷಗಳ ಟೀಕೆಗೆ, ಕ್ಷೇತ್ರದ ನಾಗರಿಕರ ಪ್ರಶ್ನೆಗೆ ಉತ್ತರ ಕೊಡಬೇಕು. ಅದರೊಂದಿಗೆ ಈ ಪ್ರದೀಪುವಿಗಾಗಿ ಸಿದ್ದು, ಡಿಕೆಶಿ ಹೋಗಿಬಂದ ಕಡೆಯೆಲ್ಲೆಲ್ಲಾ ಬೇರೆ ವಿಷಯ ಬಿಟ್ಟು ಇದಕ್ಕೆ ಮಾಧ್ಯಮಗಳಿಗೆ ಉತ್ತರ ಕೊಡಬೇಕು. ಕೊನೆಗೆ ಸ್ಪೀಕರ್ ಅವರಿಗೆ ದೂರು ಕೊಡುವ ತನಕ ವಿಷಯ ಹೋಯಿತು. ಕ್ಷೇತ್ರದ ಜನರ ಆಶೋತ್ತರಗಳಿಗೆ ಹೋರಾಟ ಮಾಡುವಾಗ ಇಮೇಜಿಗೆ ದಕ್ಕೆ ಬಂದರೆ ಅದು ಪಾಸಿಟಿವ್. ಅದೇ ದ್ರೋಣ್ ಪ್ರತಾಪು ತರದವರು ಇರೋ ಕಡೆ ಸಮಯ ವ್ಯರ್ಥ ಮಾಡಲು ಹೋಗುವುದೇ ಮೈನಸ್. ಕೊನೆಗೆ ಪ್ರದೀಪು ಹೊರಗೆ ಬಂದು ಅತಿಥಿಯಾಗಿ ಹೋಗಿದ್ದು ಅಷ್ಟೇ ಅಂದಿದ್ದಾರೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ, ವಿಷಯ ಅಷ್ಟೇ!
Leave A Reply