ಪಾಕ್ ವೈರಿ ರಾಷ್ಟ್ರ ಯಾರಿಗೆ? ಸೈನಿಕರಿಗೆ ಮಾತ್ರಾನಾ?
ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಇಂಡೋ-ಪಾಕ್ ಮ್ಯಾಚ್ ಎಂಬುದು ಟ್ರೆಂಡಿಂಗ್ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ ಇನ್ನು ತನ್ನ ಕಳ್ಳಬುದ್ಧಿಯನ್ನು ಬಿಡದೇ ಇರುವುದು. ಪಾಕಿಸ್ತಾನ ಪೋಷಿತ ಭಯೋತ್ಪಾದಕರು ಈಗಲೂ ಭಾರತದ ಗಡಿಯೊಳಗೆ ನುಗ್ಗಿ ಮುರಾಮೋಸದಿಂದ ನಮ್ಮ ಯೋಧರ ಮೇಲೆ ದಾಳಿ ಮಾಡುತ್ತಿದ್ದಾರೆ. ನಮ್ಮ ವೀರ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಗಡಿಯಲ್ಲಿ ನಾಗರಿಕರು ಸಾಯುತ್ತಿದ್ದಾರೆ. ಆದರೆ ದೇಶದ ಒಳಗೆ ಏನಾಗುತ್ತಿದೆ. ಪರಮ ಶತ್ರು ರಾಷ್ಟ್ರದ ಆಟಗಾರರಿಗೆ ನಮ್ಮ ರಾಷ್ಟ್ರದಲ್ಲಿ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಿಸಲಾಗುತ್ತಿದೆ. ಅವರು ಹೋಟೇಲಿಗೆ ಪ್ರವೇಶಿಸುವಾಗ ನಮ್ಮ ಹೆಣ್ಣು ಮಕ್ಕಳಿಂದ ಡ್ಯಾನ್ಸ್ ಮಾಡಿಸಲಾಗುತ್ತಿದೆ. ಪಾಕ್ ಕ್ರಿಕೆಟಿಗರೊಂದಿಗೆ ನಮ್ಮ ಕ್ರಿಕೆಟಿಗರು ಉಭಯಕುಶಲೋಪರಿ ನಡೆಸುತ್ತಾರೆ. ಪಾಕ್ ಕಲಾವಿದರು ಇಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಅವರೊಂದಿಗೆ ನಮ್ಮ ಕಲಾವಿದರು ಸೇಲ್ಪಿ ತೆಗೆಯುತ್ತಿದ್ದಾರೆ. ನಮ್ಮ ಕಲಾವಿದರು ಪಂದ್ಯಾಟದ ಮೊದಲು ಅವರಿಗಾಗಿ ಹಾಡುವ ಕಾರ್ಯಕ್ರಮ ಇದೆ. ಎಲ್ಲರೂ ಎರಡೂ ತಂಡದ ಆಟ ನೋಡಲು ಮೈದಾನದಲ್ಲಿ ತುಂಬುತ್ತಿದ್ದಾರೆ. ಇದನ್ನೆಲ್ಲಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಹಳ ಖುಷಿ ಖುಷಿಯಿಂದ ಮಾಡಿಸುತ್ತಿದೆ. ಹಾಗಾದರೆ ಪಾಕ್ ವೈರಿ ರಾಷ್ಟ್ರ ಯಾರಿಗೆ?
ಜನರು, ಕಲಾವಿದರು, ಆಟಗಾರರು ಪಾಕಿಸ್ತಾನದ ಆಟಗಾರರಿಗೆ ಅತಿಥಿ ಸತ್ಕಾರದಲ್ಲಿ ಮೈಮರೆಯುತ್ತಿದ್ದರೆ ಪಾಕಿಸ್ತಾನ ಶತ್ರು ಎನಿಸಿಕೊಂಡಿರುವುದು ಗಡಿಯಲ್ಲಿರುವ ನಮ್ಮ ಸೈನಿಕರಿಗೆ ಮಾತ್ರವೇ? ನಾವು ನಮಗೆ ಬೇಕಾದ ಹಾಗೆ ಅವರೊಂದಿಗೆ ಕ್ರಿಕೆಟ್ ಹೆಸರಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದೇವೆ. ನೀವು ಮಾತ್ರ ಅವರೊಂದಿಗೆ ಸೆಣಸಾಡಿ ಎಂದು ಸೈನಿಕರಿಗೆ ನಾವು ಪರೋಕ್ಷವಾಗಿ ಹೇಳಿದಂತೆ ಆಗುತ್ತಿಲ್ಲವೇ? ನಮ್ಮ ಸೈನಿಕರ ಬಲಿದಾನ ನಾವು ಮರೆತುಬಿಟ್ಟೆವಾ? ಪಾಕ್ ಆಟಗಾರ ಭಾರತೀಯ ಮೈದಾನದಲ್ಲಿ ಶತಕ ಹೊಡೆಯುತ್ತಾನೆ. ಅದರ ಕ್ರೆಡಿಟ್ ನಮ್ಮ ಶತ್ರು ಗಾಜಾಕ್ಕೆ ಸಮರ್ಪಿಸುತ್ತಾನೆ ಮತ್ತು ನಾವು ಯಾವುದೋ ಪಾಕ್ ನಿರೂಪಕಿಯನ್ನು ಮಾತ್ರ ಗಡಿಪಾರು ಮಾಡಿ ಏನೋ ದೊಡ್ಡ ಸಾಧನೆ ಮಾಡಿದಂತೆ ಆಡುತ್ತಿದ್ದೇವೆ. ಅಷ್ಟಕ್ಕೂ ಬಿಸಿಸಿಐ ಕಾರ್ಯದರ್ಶಿ ಯಾರು? ಇದೇ ರಾಷ್ಟ್ರದ ಗೃಹ ಸಚಿವ ಅಮಿತ್ ಶಾ ಮಗ. ಇದೇ ವರ್ಷದ ಸೆಪ್ಟೆಂಬರ್ 13 ರಂದು ಪಾಕಿಸ್ತಾನ ಕಳುಹಿಸಿದ ಭಯೋತ್ಪಾದಕರಿಂದ ಇಬ್ಬರು ಭಾರತೀಯ ಯೋಧರು ಹಾಗೂ ಒಬ್ಬರು ಪೊಲೀಸ್ ಆಫೀಸರ್ ಹುತಾತ್ಮರಾಗಿದ್ದಾರೆ. ಆದರೆ ನಾವು ಪಾಕ್ ಆಟಗಾರರಿಗೆ, ಅವರೊಂದಿಗೆ ಬಂದಿರುವವರಿಗೆ ಉಪಚಾರ ಮಾಡುತ್ತಿದ್ದೇವೆ. ಹೀಗೆ ಬಹಳ ದೊಡ್ಡ ರೀತಿಯಲ್ಲಿ ಮೂಡುತ್ತಿರುವ ಆಕ್ರೋಶಕ್ಕೆ ಬಿಸಿಸಿಐ ಮತ್ತು ಕೇಂದ್ರ ಸರಕಾರ ಏನು ಉತ್ತರ ಕೊಡುತ್ತದೆ ಎಂದು ನೋಡಬೇಕು.
Leave A Reply