ಮೈಸೂರು ದಸರಾದಲ್ಲಿ ಅಧಿಕಾರಿಗಳಿಂದ ಅವಕಾಶಕ್ಕಾಗಿ ಹಣದ ಬೇಡಿಕೆ!

ಸರಕಾರದ ಕೆಲಸ ಎಂದರೆ ದೇವರ ಕೆಲಸ ಎನ್ನುವ ಮಾತಿದೆ. ಹೀಗೆಂದು ವಿಧಾನಸೌಧದ ಮೇಲೆ ಬರೆಯಲಾಗಿದೆ. ಆದರೆ ಎಷ್ಟು ಮಂದಿ ಅಧಿಕಾರಿಗಳು ಅದನ್ನು ಪಾಲಿಸುತ್ತಾರೆ ಎನ್ನುವುದು ದೇವರಿಗೆ ಮಾತ್ರ ಗೊತ್ತು. ಸರಕಾರ ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಡೆಯದೇ ಇದ್ದರೆ ಸ್ವತ: ದೇವರಿಗೂ ಸಂಶಯ ಬರಬಹುದು ಎನ್ನುವಷ್ಟರ ಮಟ್ಟಿಗೆ ಸರಕಾರಿ ವ್ಯವಸ್ಥೆಯಲ್ಲಿ ಲಂಚಗುಳಿತನ ಹಾಸುಹೊಕ್ಕಾಗಿದೆ. ಅದಕ್ಕೆ ಈಗ ತಾಜಾ ಸಾಕ್ಷಿ ದೊರಕಿರುವುದು ಮೈಸೂರಿನ ನಾಡಹಬ್ಬ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ.
ಮೈಸೂರು ದಸರಾದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಕಾರದ ಹಣದಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸಲಾಗುತ್ತದೆ. ಅವರಿಗೆ ಸೂಕ್ತ ರೀತಿಯ ಸಂಭಾವನೆಯನ್ನು ನೀಡಿ ಅವರ ದಿನ, ಸಮಯವನ್ನು ನಿಗದಿಪಡಿಸಲಾಗುತ್ತದೆ. ಕಲಾವಿದರಿಗೆ ನೀಡುವ ಸಂಭಾವನೆಯನ್ನು ಆರ್ಟಿಜಿಎಸ್ ಮೂಲಕ ನೀಡುವ ನಿಯಮ ಶುರುವಾದ ನಂತರ ಅಧಿಕಾರಿಗಳಿಗೆ ಹಣ ಹೊಡೆಯಲು ಒಂದಿಷ್ಟು ಸುತ್ತಿ ಬಳಸಿ ಬರಬೇಕಾಗುತ್ತದೆ. ಅದಕ್ಕೆ ಅಧಿಕಾರಿಗಳು ಈಗ ತೆಗೆದುಕೊಂಡಿರುವ ದಾರಿ ಏನೆಂದರೆ ಕಲಾವಿದರ ಸಂಭಾವನೆಗಿಂತ ಹೆಚ್ಚು ಹಣವನ್ನು ಅವರ ಅಕೌಂಟಿಗೆ ಹಾಕುವುದು. ಅದರ ನಂತರ ಆ ಹೆಚ್ಚುವರಿ ಹಣವನ್ನು ಡ್ರಾ ಮಾಡಿ ತಮಗೆ ನೀಡಬೇಕು ಎಂದು ಹೇಳುವುದು. ಅನೇಕ ಕಲಾವಿದರು ಇದಕ್ಕೆ ಒಪ್ಪಿ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಆದರೆ ಪದ್ಮಶ್ರೀ ಪುರಸ್ಕೃತ 91 ರ ಹಿರಿಯ ಕಲಾವಿದ ಪಂಡಿತ್ ರಾಜೀವ್ ತಾರಾನಾಥರ ವಿಷಯದಲ್ಲಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ತಮ್ಮ ನೇರ ಮಾತು ಮತ್ತು ನಡವಳಿಕೆಗೆ ಹೆಸರಾದ ಪಂಡಿತ್ ರಾಜೀವ್ ತಾರಾನಾಥರನ್ನು ಸಂಪರ್ಕಿಸಿದ ಅಧಿಕಾರಿಗಳು ” ನೀವು ಕೇಳಿದ ಸಂಭಾವನೆಗಿಂತ 3 ಲಕ್ಷ ರೂ ಹೆಚ್ಚು ಕೊಡುತ್ತೇವೆ. ಹಣ ಆರ್ಟಿಜಿಎಸ್ ಮೂಲಕ ನಿಮ್ಮ ಖಾತೆಗೆ ಬರುತ್ತದೆ. ಹೆಚ್ಚುವರಿಯಾಗಿ ಜಮೆಯಾಗುವ 3 ಲಕ್ಷ ರೂ ಹಣವನ್ನು ನಮಗೆ ವಾಪಾಸ್ ನೀಡಬೇಕು” ಎಂದು ಕೋರಿದ್ದಾರೆ. ಅಧಿಕಾರಿಗಳ ಮಾತನ್ನು ಕೇಳಿದ ರಾಜೀವ್ ತಾರಾನಾಥರು ಛೀಮಾರಿ ಹಾಕಿ ವಾಪಾಸ್ ಕಳುಹಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಪಂಡಿತ್ ರಾಜೀವ್ ತಾರಾನಾಥರ ಕಾರ್ಯಕ್ರಮವನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥರಿಗೆ ಇಂತಹ ಒಂದು ಅವಕಾಶ ತಪ್ಪಿದರೆ ಏನೂ ಆಗಿ ಹೋಗುವಂತದ್ದೇನಿಲ್ಲ. ಆದರೆ ಅವರ ವಿಷಯದಲ್ಲಿ ಹಣ ನುಂಗಲು ಹೋಗಿ ಅಧಿಕಾರಿಗಳು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
Leave A Reply