ರಿಜ್ವಾನ್ ಪೆವಿಲಿಯನ್ ಗೆ ಮರಳುವಾಗ “ಜೈ ಶ್ರೀರಾಮ್” ಘೋಷಣೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ರಿಜ್ವಾನ್ ಭಾರತದ ಮೈದಾನದಲ್ಲಿ ಹಿಂದೂಗಳ ಮಧ್ಯೆ ನಮಾಜ್ ಓದಿದ್ದು ತುಂಬಾ ವಿಶೇಷವಾಗಿತ್ತು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಎಆರ್ ವೈ ನ್ಯೂಸ್ ವಾಹಿನಿಯ ಪ್ಯಾನಲ್ ಡಿಸ್ಕಷನ್ ನಲ್ಲಿ ಹೇಳಿದ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆಗೆ ಒಳಗಾಗುತ್ತಿದೆ. ಶನಿವಾರ ಗುಜರಾತಿನ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಶ್ವಕಪ್ ಪಂದ್ಯಾವಳಿಯ ಮಹತ್ವದ ಪಂದ್ಯ ನಡೆಯಿತು. ಅದರಲ್ಲಿ ಮೊಹಮ್ಮದ್ ರಿಜ್ವಾನ್ 49 ರನ್ ಆಗಿ ವೇಗಿ ಜಸ್ ಪ್ರೀತ್ ಬೂಮ್ರಾ ದಾಳಿಗೆ ಔಟಾಗಿ ಪೆವಿಲಿಯನ್ ಗೆ ಮರಳುವಾಗ ಕೆಲವು ಪ್ರೇಕ್ಷಕರು ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಪರ, ವಿರೋಧ ಚರ್ಚೆಗಳು ಶುರುವಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪುತ್ರ ಸಚಿವ ಉದಯನಿಧಿ ಸ್ಟಾಲಿನ್ ಇದು ಒಪ್ಪತಕ್ಕದ್ದಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ಶ್ರೇಷ್ಟ ಆತಿಥ್ಯ ಮತ್ತು ಮಾದರಿ ಕ್ರೀಡಾ ಮನೋಭಾವಕ್ಕೆ ಹೆದರುವಾಸಿಯಾಗಿದೆ. ಕ್ರೀಡೆ ಎರಡು ದೇಶಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿ ಸಹೋದರ ಬಾಂಧವ್ಯವನ್ನು ಹೆಚ್ಚಿಸಬೇಕು. ಆದರೆ ಈ ರೀತಿ ಮಾಡುವುದರಿಂದ ದ್ವೇಷ ಭಾವನೆ ಹೆಚ್ಚಾಗಲಿದ್ದು ಅದು ಒಪ್ಪತಕ್ಕದ್ದಲ್ಲ” ಎಂದು ಹೇಳಿದ್ದಾರೆ.
ಟಿಎಂಸಿ ಸಂಸದ ಸಾಕೇತ್ ಗೋಖಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಈ ನಡೆಯನ್ನು ಟೀಕಿಸುತ್ತಾ ” ಭಾರತ 2036 ರ ಒಲಿಂಪಿಕ್ಸ್ ಇದರ ಆತಿಥ್ಯ ವಹಿಸಿಕೊಳ್ಳಲು ಕಾತರಿಸುತ್ತಿರುವ ಈ ಹಂತದಲ್ಲಿ ಬಿಜೆಪಿ ಬೆಂಬಲಿತ ಪ್ರೇಕ್ಷಕರು ಈ ರೀತಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ಸ್ ನಂತಹ ಕ್ರೀಡಾಕೂಟವನ್ನು ನಮಗೆ ವಹಿಸುವ ವಿಷಯದಲ್ಲಿ ಅಡ್ಡಿಯಾಗಲಿದೆ” ಎಂದು ಹೇಳಿದರು. ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪೀನರ್ ಮತ್ತು ಹಾಲಿ ವಿಶ್ಲೇಷಕ ಲಕ್ಷ್ಮಣ್ ಶಿವರಾಮ ಕೃಷ್ಣನ್ ಪತ್ರಕರ್ತ ರಾಜದೀಪ್ ಸರದೇಸಾಯಿ ಅವರ ಕಮೆಂಟಿಗೆ ತೀಕ್ಣ ಪ್ರತಿಕ್ರಿಯೆಯನ್ನು “ಎಕ್ಸ್” ನಲ್ಲಿ ನೀಡಿದ್ದಾರೆ. ” ನಾನು ಹದಿನಾರು ವರ್ಷ ಪ್ರಾಯದಲ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವಾಗ ಅಲ್ಲಿ ನಮ್ಮ ದೇಶ, ಸಂಸ್ಕೃತಿ, ಧರ್ಮ, ಬಣ್ಣದ ತನಕ ಪ್ರತಿಯೊಂದನ್ನು ಹೀಯಾಳಿಸುತ್ತಿದ್ದ ಅನುಭವ ನಮಗೆ ಆಗಿದೆ. ಅಂತಹ ಅನುಭವವನ್ನು ನೀವು ಪಡೆದಿರಲಾರಿರಿ. ಆದ್ದರಿಂದ ಆ ವಿಷಯದ ಕುರಿತು ನೀವು ಮಾತನಾಡಲೇಬೇಡಿ” ಎಂದು ಬರೆದಿದ್ದಾರೆ. ಭಾರತೀಯ ಪ್ರೇಕ್ಷಕರ ನಡೆಯ ಬಗ್ಗೆ ರಾಜದೀಪ್ ಸರದೇಸಾಯಿ ಕೂಡ ಆಕ್ಷೇಪ ಎತ್ತಿದ್ದರು.
ಈ ನಡುವೆ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಅಹಮದಾಬಾದ ಸಹಿತ ಹೈದ್ರಾಬಾದ್ ಒಳಗೊಂಡು ಅವರ ಉಳಿದಕೊಂಡ ಹೋಟೇಲುಗಳಲ್ಲಿ ಬಿಸಿಸಿಐನಿಂದ ಉತ್ತಮ ಸ್ವಾಗತ ದೊರಕಿದೆ.
Leave A Reply