ಸೋಮೇಶ್ವರದ ನೀರುದೋಸೆ ಬಾಯಲ್ಲಿ ನೀರೂರಿಸುತ್ತದೆ!
ಆಗುಂಬೆ ಘಾಟಿಯ ಹೆಬ್ಬೆರಳಿಗೆ ತಾಗಿಕೊಂಡಿರುವ ಪುಟ್ಟ ಗ್ರಾಮದ ಹೆಸರು ಸೋಮೇಶ್ವರ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಆರಾಧಿಸುವ ಶ್ರೀ ವೆಂಕಟರಮಣ ದೇವಸ್ಥಾನ ಬಿಟ್ಟರೆ ಆ ಗ್ರಾಮದಲ್ಲಿ ವಿಶೇಷತೆಗಳು ಎನ್ನುವುದು ಬೇರೆ ಏನೂ ಕಾಣುವುದಿಲ್ಲ. ಆದರೆ ನಿತ್ಯ ಅಸಂಖ್ಯಾತ ವಾಹನಗಳು ಈ ಸೋಮೇಶ್ವರದಲ್ಲಿ ನಿಲ್ಲುತ್ತವೆ. ಇಲ್ಲಿ ಕಾಫಿ, ತಿಂಡಿ ಮಾಡಿಕೊಂಡು ಮುಂದಕ್ಕೆ ಹೋಗುತ್ತವೆ. ಯಾಕೆಂದರೆ ಸೋಮೇಶ್ವರ ದಾಟಿದ ತಕ್ಷಣ ಕೆಲವೇ ಮೀಟರ್ ಗಳ ಅಂತರದಲ್ಲಿ ಆಗುಂಬೆ ಘಾಟಿ ಸಿಗುತ್ತದೆ. ದಾರಿಯಲ್ಲಿ ಎಲ್ಲಿಯೂ ತಿಂಡಿ, ಪಾನೀಯ ಸಿಗುವುದಿಲ್ಲ. ಆದ್ದರಿಂದ ಇಲ್ಲಿ ಟಿಫಿನ್ ಮಾಡದೇ ನೀವು ಮುಂದೆ ಹೋಗುವ ಮನಸ್ಸು ಮಾಡುವುದಿಲ್ಲ. ಇಂತಹ ಪುಟ್ಟ ಗ್ರಾಮ ಸೋಮೇಶ್ವರದಲ್ಲಿ ಹತ್ತಾರು ಹೋಟೇಲುಗಳಿವೆ. ಎಲ್ಲರಿಗೂ ಉತ್ತಮ ವ್ಯಾಪಾರವಿದೆ.
ಇಂತಹ ಸೋಮೇಶ್ವರದಲ್ಲಿ ಐದಾರು ದಶಕಗಳ ಹಿಂದೆ ಹೋಟೇಲು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ ಕುಟುಂಬಗಳಿವೆ. ಅಂತಹ ಒಂದು ಹೋಟೇಲಿನಲ್ಲಿ ನಮ್ಮ ತಂಡ ಟಿಫಿನ್ ಮಾಡಿತು. ಅಷ್ಟಕ್ಕೂ ಸೋಮೇಶ್ವರದ ಯಾವುದೇ ಹೋಟೇಲಿಗೆ ಬರುವ ಪ್ರವಾಸಿಗರು ಮೊದಲು ಕೇಳುವುದೇ ನೀರುದೋಸೆ. ಅದನ್ನು ನೆಚ್ಚಿಕೊಂಡು ತಿನ್ನುವ ಖುಷಿಯೇ ಬೇರೆ. ಇಲ್ಲಿ ದೋಸೆ ತಯಾರಿಸುವ ವಿಧಾನ, ಅದಕ್ಕೆ ಬಳಸುವ ಹಿಟ್ಟು ಎಲ್ಲವೂ ವಿಶಿಷ್ಟ. ಇಂತಹ ನೀರು ದೋಸೆಯ ಮೂಲಕ ಸೋಮೇಶ್ವರ ಫೇಮಸ್ ಆಗಿಬಿಟ್ಟಿದೆ.
ನೀರು ದೋಸೆ ಇಲ್ಲಿನ ಹೋಟೇಲುಗಳಲ್ಲಿ ವರ್ಷದ 365 ದಿನ, ವಾರದ 24*7 ಕೂಡ ಸಿಗುತ್ತದೆ. ನೀರು ದೋಸೆಯನ್ನು ತಿನ್ನಲೆಂದೆ ಇಲ್ಲಿ ಬರುವವರಿದ್ದಾರೆ. ಅದರ ರುಚಿಗೆ ಮಾರು ಹೋಗದವರಿಲ್ಲ. ಮಂಗಳೂರು, ಉಡುಪಿ ಕಡೆಯಿಂದ ಆಗುಂಬೆ, ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗುವವರು, ಅತ್ತ ಕಡೆಯಿಂದ ಇತ್ತ ಬರುವವರಿಗೆ ಒಂದು ಕೊಂಡಿಯಾಗಿರುವ ಸೋಮೇಶ್ವರದ ಈ ಹೋಟೇಲುಗಳ ನೀರುದೋಸೆಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ. ರುಚಿಯಿಂದ ನಿಮ್ಮ ನಾಲಿಗೆ ಕೂಡ ಸೂಪರ್ ಎನ್ನದೇ ಇರುತ್ತಾ?
Leave A Reply