ಹಣ ಬೆಡ್ ರೂಂನಲ್ಲಿ ಬೆಳೆಸುತ್ತಾರಾ?
ಕರ್ನಾಟಕದ ಭೂಮಿಯಲ್ಲಿ ಈಗ ಬರಗಾಲದಲ್ಲಿಯೂ ಅಬ್ಬರದ ಹಣದ ಬೆಳೆ ಕೀಳುವ ಕೆಲಸ ಐಟಿ ಇಲಾಖೆಯಿಂದ ಆಗುತ್ತಿದೆ. ಐಟಿ ಕೈ ಹಾಕಿದ ಕಡೆ ಕೋಟಿಗಟ್ಟಲೆ ರೂಪಾಯಿ ಸಿಗುತ್ತಿದೆ. ಇತ್ತೀಚೆಗಷ್ಟೇ 42 ಕೋಟಿ ರೂಪಾಯಿಯನ್ನು ಗುತ್ತಿಗೆದಾರರೊಬ್ಬರ ಪುತ್ರನ ಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಈಗ ಮತ್ತೆ ಬೇರೆ ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆದು 50 ಕೋಟಿ ರೂಪಾಯಿ ಸಿಕ್ಕಿದೆ. ಈಗ ಎಲ್ಲಿ ದಾಳಿ ನಡೆದರೂ ಕೋಟ್ಯಾಂತರ ರೂಪಾಯಿ ಸಿಗುವುದು ಗ್ಯಾರಂಟಿ ಎನ್ನುವ ಮಾತಿದೆ. ಆದರೆ ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಾಗ ನಮಗೆ ಕಾಮಗಾರಿಯ ಹಣ ಪಾವತಿಸಲು 40% ಕಮೀಷನ್ ಕೇಳಲಾಗುತ್ತದೆ ಎಂದು ಗುತ್ತಿಗೆದಾರರು ಸುದ್ದಿಗೋಷ್ಟಿ ನಡೆಸುತ್ತಿದ್ದರು. ಟಿವಿಗಳ ಮೈಕ್ ಸಿಕ್ಕಿದ ಕಡೆ ಬಿಜೆಪಿ ಸಚಿವರುಗಳನ್ನು ನಿಂದಿಸುತ್ತಿದ್ದರು. ಅವರ ಮಾತುಗಳು ಹೇಗಿರುತ್ತಿದ್ದವು ಎಂದರೆ ಸರಕಾರ ಹಣ ಬಿಡುಗಡೆ ಮಾಡದ ಕಾರಣ ಮಕ್ಕಳ ಫೀಸ್ ಕಟ್ಟಲಿಕ್ಕೂ ಕಷ್ಟವಾಗುತ್ತಿದೆ ಎಂದು ಇವರು ಹೇಳುತ್ತಿದ್ದದ್ದನ್ನು ನೋಡಿ ಕರುಳು ಚುರುಕ್ ಎನ್ನುತ್ತಿತ್ತು. ಆಗ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರ ವಯಸ್ಸು, ಹಿರಿತನ, ಮುಖದಲ್ಲಿದ್ದ ಮುಗ್ಧತೆ ನೋಡಿ ಜನಸಾಮಾನ್ಯರಿಗೂ ವಿಷಯ ನಿಜ ಇರಬಹುದು ಎಂದು ಅನಿಸಲು ಶುರುವಾಗಿತ್ತು. ಆಗ ಈ ಕೆಂಪಣ್ಣನವರೊಂದಿಗೆ ಎಡಬದಿಯಲ್ಲಿಯೇ ಕುಳಿತುಕೊಳ್ಳುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಬಿಜೆಪಿ ಸರಕಾರದ ವಿರುದ್ಧ 40% ಕಮೀಷನ್ ಹೋರಾಟದಲ್ಲಿ ಮುಂಚೂಣಿಯಲ್ಲಿಯಲ್ಲಿದ್ದರು. ಕಾಂಗ್ರೆಸ್ಸಿನ ಮಾಜಿ ಕಾರ್ಪೋರೇಟರ್ ಅಶ್ವತಮ್ಮನವರ ಗಂಡನಾಗಿರುವ ಅಂಬಿಕಾಪತಿ ಕಾಂಗ್ರೆಸ್ ಸದಸ್ಯರೂ ಹೌದು. ಯಾರು 40% ಕಮೀಷನ್ ಆರೋಪ ಹಾಕುತ್ತಾ, ಬಿಜೆಪಿ ಸರಕಾರದ ವರ್ಚಸ್ಸಿಗೆ ದಕ್ಕೆ ತರಲು ಯೋಜಿಸುತ್ತಿದ್ದರೋ ಅಂತವರದ್ದೇ ಸರಕಾರ ಬಂದ ಕೂಡಲೇ ಹಣ ಬಿಡುಗಡೆಯಾಗಿದೆ. ಹಣ ಬಿಡುಗಡೆಯಾದ ಕೆಲವೇ ಗಂಟೆಗಳ ಬಳಿಕ ಐಟಿ ರೇಡ್ ನಡೆದಿದೆ. ಇದೇ ಅಂಬಿಕಾಪತಿಯ ಪುತ್ರನ ಮನೆಯಲ್ಲಿ 42 ಕೋಟಿ ರೂ ನಗದು ಹಣ ಸಿಕ್ಕಿದೆ. ಹಾಗಾದರೆ ಈ ಹಣ ಎಲ್ಲಿಂದ ಬಂತು?
ಹಣದ ಹಿಂದಿನ ಮೂಲ ಯಾವುದು?
ಪಾಪ, ತುಂಬಾ ಕಷ್ಟದಲ್ಲಿರುವ ಗುತ್ತಿಗೆದಾರರ ಮನೆಯಿಂದ 42 ಕೋಟಿ ರೂಪಾಯಿ ಸಿಗುತ್ತೆ ಎಂದರೆ ಆ ಹಣದ ಹಿಂದಿನ ಮೂಲ ಯಾವುದು? ಈಗ ಮತ್ತೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿದ್ದು ಮತ್ತೆ ಬೇರೆ ಗುತ್ತಿಗೆದಾರ, ಅವರ ಮಗ ಮತ್ತು ಇತರ ಕಡೆಯಿಂದ 50 ಕೋಟಿ ರೂಪಾಯಿ ಸಿಕ್ಕಿದೆ. ಇನ್ನು ಎರಡೂ ಕಡೆ ಸಿಕ್ಕಿರುವ ಬಂಗಾರದ ಲೆಕ್ಕ ಬೇರೆ ಬಿಡಿ, ಅದು ಬೇಕಾದರೆ ಪಕ್ಕಕ್ಕೆ ಇಟ್ಟು ಈ ನಗದಿನ ಮೊತ್ತವನ್ನೇ ನೋಡುವಾಗ ಇಲ್ಲಿಯ ತನಕ ಗುತ್ತಿಗೆದಾರರು ಹೇಳುತ್ತಿದ್ದದ್ದು ಏನು? ಈಗ ಆಗುತ್ತಿರುವುದು ಏನು? ನಾವು ನಿಮಗೆ ಹಣ ಬಿಡುಗಡೆ ಮಾಡುತ್ತೇವೆ. ನಮ್ಮ ಪಾಲಿನ ಕಮೀಷನ್ ಹಣವನ್ನು ಚುನಾವಣೆಗೆ ಸಜ್ಜಾಗಿರುವ ಪಕ್ಕದ ಹೈದ್ರಾಬಾದಿಗೆ ಸಾಗಿಸಬೇಕು ಎಂದು ಹೇಳಲಾಗಿತ್ತಾ? ಅದಕ್ಕೆ ಹಣವನ್ನು ಒಟ್ಟು ಮಾಡಲಾಗಿತ್ತಾ? ಈ ಬಗ್ಗೆ ತನಿಖೆ ನಡೆಯಬೇಕು.
ಡೋಂಟ್ ಕೇರ್ ಪ್ರವೃತ್ತಿ!
ಇನ್ನು ಮೈಸೂರು ದಸರಾ ನಡೆಯುತ್ತಿದೆ. ಯಾವುದೇ ಸರಕಾರಿ ಕಾರ್ಯಕ್ರಮ ಎಂದಾದರೆ ಅಲ್ಲಿ ಸರಕಾರದ ಇಲಾಖೆಯಿಂದ ಹಣದ ಹೊಳೆ ಹರಿಯುತ್ತದೆ. ಆ ಹಣದ ಹೊಳೆಯಲ್ಲಿ ಅಧಿಕಾರಿಗಳು ಮಿಂದೆದ್ದು ತಮಗೆ, ತಮ್ಮ ಮೇಲಿನವರಿಗೆ ಹೀಗೆ ಎಷ್ಟು ಟಾರ್ಗೆಟ್ ಇದೆಯೋ ಅಷ್ಟು ನುಂಗುತ್ತಾರೆ. ಇದಕ್ಕೆ ಸಾಕ್ಷಿ ಸಿಗುವುದು ಕಷ್ಟ. ಆದರೆ ಕಾಂಗ್ರೆಸ್ ಸರಕಾರದ ಕಮೀಷನ್ ವ್ಯವಹಾರ ಎಷ್ಟು ರಾಜಾರೋಷವಾಗಿ ನಡೆಯುತ್ತಿದೆ ಎಂದರೆ ಡೋಂಟ್ ಕೇರ್ ಪ್ರವೃತ್ತಿ. ಮೈಸೂರು ದಸರಾದಲ್ಲಿ ಆಹಾರ ಮೇಳದಲ್ಲಿ ಸ್ಟಾಲ್ ಇಡಲು ರೈತರಿಂದ ಒಂದೊಂದು ಲಕ್ಷ ಕೇಳುತ್ತಾರೆ ಎಂದರೆ ಇವರ ಹಸಿವು ಎಷ್ಟಿರಬೇಡಾ. ಅತ್ತ ಕಲಾವಿದರಿಂದ ಕೂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಹಣ ಫೀಕ್ಸ್ ಮಾಡಿರುವ ಘಟನೆ ನಡೆದಿದೆ. ಸರೋದ್ ಮಾಂತ್ರಿಕ ರಾಜೀವ್ ತಾರಾನಾಥರ ಅಕೌಂಟಿಗೆ ಮೂರು ಲಕ್ಷ ಹೆಚ್ಚುವರಿ ಹಾಕಿ ನಂತರ ತೆಗೆಸಿಕೊಡುವಂತೆ ಮನವಿ ಮಾಡಿದ್ದರು ಎನ್ನುವುದು ಬಹಿರಂಗಗೊಂಡಿದೆ. ಇವರೇನೋ ಹೇಳಿದ್ದ ಕಾರಣ ಗೊತ್ತಾಯಿತು. ಆದರೆ ಬಹುತೇಕ ಕಲಾವಿದರು ಅಧಿಕಾರಿಗಳು ಹೇಳಿದ್ದನ್ನು ಚಾಚುತಪ್ಪದೇ ಮಾಡಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಹೀಗೆ ಎಲ್ಲಾ ಕಡೆಯಿಂದ ಕಾಂಗ್ರೆಸ್ಸಿನ ಬಂಡವಾಳ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುವಷ್ಟರಲ್ಲಿ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಆದರೆ ಸಿಎಂ, ಡಿಸಿಎಂ ಯಾವುದರಲ್ಲಿಯೂ ಹುರುಳಿಲ್ಲ ಎಂದು ಧೈರ್ಯದಿಂದ ಹೇಳಿ ದಕ್ಕಿಸಿಕೊಳ್ಳುತ್ತೇನೆ ಎಂಬ ಮನೋಭಾವನೆಯನ್ನು ಬೆಳೆಸಿಕೊಂಡಂತೆ ಕಾಣುತ್ತದೆ. ಯಾಕೆಂದರೆ ಅವರಿಗೆ ಒಂದು ವಿಷಯದಲ್ಲಿ ಧೈರ್ಯ ಇದೆ. ಐವತ್ತು ಕೋಟಿ ಅಲ್ಲ, ನಾಳೆ ಐನೂರು ಕೋಟಿ ಸಿಕ್ಕಿದರೂ ಈ ಬಿಜೆಪಿ ನಾಯಕರು ಪ್ರತಿಭಟನೆ ಮಾಡುವುದು ಅಷ್ಟರಲ್ಲಿಯೇ ಇದೆ. ಹೆಚ್ಚೆಂದರೆ ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಸೇರಿ ಒಂದಿಬ್ಬರು ಹೋರಾಟ ಮಾಡಬಹುದು. ಉಳಿದವರು ಏಳುವಾಗ ಐದು ವರ್ಷ ಮುಗಿದಿರುತ್ತದೆ!
Leave A Reply