ಬಹಿರಂಗ ಬಂಡಾಯ ಘೋಷಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ!
ಬರುವವರು ನಮ್ಮ ಜೊತೆ ಬರಲಿ, ಬಿಜೆಪಿಯೊಂದಿಗೆ ಬರಲು ಮನಸ್ಸಿಲ್ಲದವರು ಹೋಗುವುದಾದರೆ ಹೋಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂದು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರನ್ನು ಕೇಳಿದಾಗ “ನಾವು ಕೂಡ ಅದನ್ನೇ ಹೇಳುತ್ತೇವೆ. ನಮ್ಮೊಡನೆ ಬರುವವರು ಬರಲಿ, ಅವರೊಡನೆ ಹೋಗುವವರು ಹೋಗಲಿ, ಯಾರೊಂದಿಗೆ ಎಷ್ಟು ಶಾಸಕರು ಇದ್ದಾರೆ ಎನ್ನುವುದು ಗೊತ್ತಾಗುತ್ತೆ” ಎಂದು ಹೇಳಿದ್ದಾರೆ. ಜೆಡಿಎಸ್ ಪಕ್ಷ ನಿಮ್ಮೊಂದಿಗೆ ಇದೆಯಾ ಎಂದದ್ದಕ್ಕೆ ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಎಂದು ಇಬ್ರಾಹಿಂ ಒತ್ತಿ ಹೇಳಿದ್ದಾರೆ. ನೀವು ಯಾರೊಂದಿಗಾದರೂ ಮೈತ್ರಿ ಮಾಡುತ್ತಿರಾ ಎಂದು ಮಾಧ್ಯಮದವರು ಕೇಳಿದಾಗ ನಾವು ಬಿಜೆಪಿಯೊಂದಿಗೆ ಬಿಲ್ ಕುಲ್ ಮಾಡಲ್ಲ. ಈಗ ರಾಷ್ಟ್ರದಲ್ಲಿ ಇರುವುದು ಎರಡೇ ಮೈತ್ರಿಕೂಟ. ಒಂದು ಎನ್ ಡಿಎ ಇನ್ನೊಂದು ಇ.0.ಡಿ.ಯಾ. ನಾವು ಬಿಜೆಪಿಯೊಂದಿಗೆ ಹೋಗುವ ಪ್ರಶ್ನೆ ಇಲ್ಲ. ನಾವು ಇನ್ನೊಂದು ಮೈತ್ರಿಕೂಟದ ಜೊತೆ ಮಾತುಕತೆ ನಡೆಸುತ್ತೇವೆ. ನಂತರ ಕರ್ನಾಟಕದಲ್ಲಿ ನಮ್ಮ ನಿರ್ಧಾರ ತೆಗೆದುಕೊಂಡು ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ದೇವೆಗೌಡರು ಬಿಜೆಪಿಯೊಂದಿಗೆ ಮೈತ್ರಿಯ ಮಾತುಕತೆ ಆಡಿದ್ದಾರಲ್ಲ ಎಂದು ಕೇಳಿದ್ದಕ್ಕೆ ಕೇರಳದಲ್ಲಿ ಜೆಡಿಎಸ್ ಇಲ್ಲ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಇಲ್ಲ, ನನ್ನ ಬಳಿ ಕರ್ನಾಟಕವಾದರೂ ಇದೆ. ಹಾಗಿರುವಾಗ ಅವರು ಹೇಗೆ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ ಎಂದು ವ್ಯಂಗ್ಯಭರಿತವಾಗಿ ಹೇಳಿದರು. ಕುಮಾರಸ್ವಾಮಿ ಸಹೋದರ ಇದ್ದ ಹಾಗೆ, ದೇವೆಗೌಡರು ತಂದೆ ಸಮಾನರು, ಬಿಜೆಪಿ ಮೈತ್ರಿ ಬಿಟ್ಟು ಹಿಂದಿರುಗಿ ಬನ್ನಿ, ಜೊತೆಯಾಗಿ ರಾಜ್ಯದಲ್ಲಿ ಜೆಡಿಎಸ್ ಕಟ್ಟೋಣ. ಇನ್ನು ಮೈತ್ರಿ ಮಾತುಕತೆ ಅವರ ವೈಯಕ್ತಿಕ ವಿಷಯ. ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಇವತ್ತಿನ ನಮ್ಮ ಸಭೆಯಲ್ಲಿ ಎಲ್ಲಾ ಮುಸ್ಲಿಂ ನಾಯಕರು ಉಪಸ್ಥಿತರಿದ್ದರು. ನಮ್ಮ ಬಳಿ ಹಣ ಇಲ್ಲದಿರಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಏನಿದೆಯೋ ಅದೇ ಅವರ ಮನಸ್ಸಿನಲ್ಲಿ ಇದೆ. ಆ ಪ್ರೀತಿ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಸಿದ್ಧರಾಮಯ್ಯ ಅವರ ಆತ್ಮೀಯರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ ವಿಧಾನಪರಿಷತ್ ನಲ್ಲಿ ಸಭಾ ನಾಯಕನಾಗಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಸಿದ್ದು ಜೊತೆ ಮುನಿಸಿಕೊಂಡು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿಕೊಂಡಿದ್ದರು. ಜೆಡಿಎಸ್ ನಲ್ಲಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ವಿಧಾನಸಭೆಯ ಹೀನಾಯ ಸೋಲಿನ ಬಳಿಕ ಜೆಡಿಎಸ್ ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಅದನ್ನು ಒಪ್ಪಲು ಸಾಧ್ಯವಿಲ್ಲದೇ ಇಬ್ರಾಹಿಂ ಈಗ ಬಂಡಾಯ ಘೋಷಿಸಿದ್ದಾರೆ. ಅವರು ಈಗ ಅತಂತ್ರ ಪರಿಸ್ಥಿತಿಯಲ್ಲಿದ್ದು, ಮತ್ತೆ ಕಾಂಗ್ರೆಸ್ಸಿಗೆ ಮರಳುತ್ತಾರಾ ಎಂದು ಕಾದು ನೋಡಬೇಕಿದೆ.
Leave A Reply