ಸ್ವತಂತ್ರ ಭಾರತದಲ್ಲಿ ಪ್ರಥಮ ಬಾರಿ ಈ ದೇವಸ್ಥಾನದಲ್ಲಿ ನವರಾತ್ರಿ!
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿ ಇಂತಹ ಒಂದು ಘಟನೆ ಆಗಿರುವುದನ್ನು ನಾವೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳದೇ ಇದ್ದರೆ ಆಗುತ್ತಾ? ಅದರಲ್ಲಿಯೂ ನವರಾತ್ರಿ ಈ ಶುಭ ದಿನಗಳಲ್ಲಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿಯೇ ನಡೆದಿರುವ ಸಂಗತಿ ಈ ದೇಶದ ಸುವರ್ಣ ಅಧ್ಯಾಯದಲ್ಲಿ ದಾಖಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕುಪ್ವಾರಾ ಜಿಲ್ಲೆಯ ತೀಟ್ವಾಲಾ ಗ್ರಾಮದ ಲೈನ್ ಆಫ್ ಕಂಟ್ರೋಲ್ ಸಮೀಪದಲ್ಲಿ ಅನಾದಿ ಕಾಲದಿಂದಲೂ ಇದ್ದ ಶಾರದಾ ಮಾತೆಯ ದೇವಸ್ಥಾನದಲ್ಲಿ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಪ್ರಥಮ ಬಾರಿ ನವರಾತ್ರಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಯನ್ನು ಪೂಜಿಸಿ ಸಂಭ್ರಮಿಸಿದರು.
ಭಾರತದ 18 ಮಹಾಶಕ್ತಿ ಪೀಠಗಳಲ್ಲಿ ಒಂದಾಗಿರುವ ಈ ಶಾರದಾ ಮಾತೆಯ ದೇವಸ್ಥಾನ ನೀಲಂ ನದಿಯ ಕಣಿವೆಯಲ್ಲಿ ಪಾಕ್ ಆಕ್ರಮಿಕ ಕಾಶ್ಮೀರದ ವ್ಯಾಪ್ತಿಗೆ ಬರುತ್ತದೆ. ಈ ದೇವಸ್ಥಾನವನ್ನು ದ್ವಾಪರಯುಗದಲ್ಲಿ ಪಾಂಡವರು ನಿರ್ಮಿಸಿದ್ದಾರೆ ಎಂದು ಹೇಳಲಾಗಿದ್ದು, 8 ನೇ ಶತಮಾನದಲ್ಲಿ ರಾಜಾ ಲಲಿತಾದಿತ್ಯ ಮುಕ್ತಾಪೀದಾ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಹಿಂದೂ ಬಾಂಧವರಲ್ಲಿ ತಾಯಿ ಶಾರದಾ ಮಾತೆಯ ಈ ದೇವಸ್ಥಾನಕ್ಕೆ ವಿಶೇಷವಾದ ಪ್ರಾಶಸ್ತ್ಯವಿದ್ದು, ಅದರಲ್ಲಿಯೂ ಪ್ರಮುಖವಾಗಿ ಕಾಶ್ಮೀರಿ ಪಂಡಿತರು ಈ ದೇವಸ್ಥಾನದ ಬಗ್ಗೆ ಅಪಾರ ಶ್ರದ್ಧೆಯನ್ನು ಹೊಂದಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಸ್ತಿಕ ಬಾಂಧವರು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆರಾಧನೆಯನ್ನು ಮಾಡುತ್ತಾರೆ.
Leave A Reply