ನೀನೆ ಯಜಮಾನಿ, 2000 ಮಾತ್ರ ಇಲ್ಲ!
ಹೇಳಿದಷ್ಟು ಸುಲಭವಾಗಿ ಕೈಗೆ 2000 ಬಂದಿದ್ರೆ ಇಷ್ಟೊತ್ತಿಗೆ ಕರ್ನಾಟಕದಲ್ಲಿ ಮಹಿಳೆಯರು ನಿತ್ಯ ಸಿದ್ದು, ಡಿಕೆಶಿಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಲೋಕಸಭಾ ಚುನಾವಣೆಗೆ ಮೋದಿ ಅಲ್ಲ, ಸ್ವತ: ದೇವರು ಬಂದರೂ ಕಾಂಗ್ರೆಸ್ಸಿಗೆ ವೋಟ್ ಹಾಕುತ್ತಿದ್ದರು. ಚುನಾವಣೆಯ ಮೊದಲು ಎರಡು ಸಾವಿರದ ಗರಿಗರಿ ನೋಟಿನ ಫೋಟೋ ಅದರಲ್ಲಿ ಹೆಣ್ಣುಮಕ್ಕಳು ನಗುವ ಪೋಸ್ಟರ್ ತೋರಿಸಿ ತೋರಿಸಿಯೇ ಮರಳು ಮಾಡಿದ ಕಾಂಗ್ರೆಸ್ ಚುನಾವಣೆಯ ನಂತರ ಮಹಿಳೆಯರ ಮೊಣಕೈಗೆ ಬೆಲ್ಲ ಹಚ್ಚಿ ಸಿಹಿ ತಿನ್ನಿ ಎಂದು ಹೇಳುತ್ತಿರುವ ಸಂಗತಿಯೇ ಪರಮ ರಾಜಕೀಯ ಅಸಹ್ಯಕ್ಕೆ ಮುನ್ನುಡಿ ಬರೆದಂತಿದೆ.
ನಾವು ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ಕೊಡುತ್ತೇವೆ ಎಂದು ಇವರು ಹೇಳುವಾಗಲೇ ಪ್ರತಿ ಮನೆಯ ಹೆಣ್ಣುಮಗಳು ತಾನು ಮನೆಯ ಯಜಮಾನಿ ಹೌದಾ ಎನ್ನುವುದನ್ನು ಗ್ಯಾರಂಟಿಪಡಿಸಿಕೊಳ್ಳಬೇಕಾಗಿತ್ತು. ಯಾಕೆಂದರೆ ಗ್ಯಾರಂಟಿ ಲಕ್ಷ್ಮಿಗೆ ಮಾನದಂಡ ರೇಶನ್ ಕಾರ್ಡ್. ನೀವು ಮನೆಯ ಯಜಮಾನಿ ಆಗಿದ್ದರೆ ಅದರಲ್ಲಿ ನಿಮ್ಮ ಹೆಸರು ಮೇಲೆ ಇರಬೇಕು ಅಥವಾ ಮೇಲೆ ಹೆಸರು ಇರುವವರು ಯಜಮಾನರಾಗುತ್ತಾರೆ. ಯಜಮಾನರ ಹೆಸರು ಯಾವಾಗಲೂ ಕೆಳಗೆ ಇರುತ್ತಾ, ಇಲ್ವಲ್ಲಾ. ಗಂಡಸರು ಮನೆಗಳಲ್ಲಿ ಹೆಂಡತಿಯನ್ನು ರಮಿಸಲು ನೀನೆ ಯಜಮಾನಿ ಎಂದು ಹೇಳುವುದುಂಟು. ಅದರ ಅರ್ಥ ಹೆಂಡತಿಗೆ ಕೋಪ ಬಂದಾಗ ಆ ಕ್ಷಣಕ್ಕೆ ಸಮಾಧಾನಪಡಿಸಲು ಮಾತ್ರ ಅದನ್ನು ಬಳಸುತ್ತಾರೆ. ಹಾಗೆ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಒಮ್ಮೆ ಪಾಸ್ ಆಗಲು ನೀವೆ ಯಜಮಾನಿ, ನಿಮಗೆ ಎರಡು ಸಾವಿರ ಗ್ಯಾರಂಟಿ ಎಂದು ಹೇಳಿಬಿಟ್ಟಿದ್ದು ಬಿಟ್ಟರೆ ಅಸಲಿಗೆ ಎಷ್ಟು ಮಂದಿಗೆ ಸಿಕ್ಕಿದೆ, ಯಾರಾದರೂ ನಿಖರ ಅಂಕಿಅಂಶ ನೀಡಲಿ, ನೋಡೋಣ.
ರೇಶನ್ ಕಾರ್ಡ್ ಕಥೆಯೇ ಬೇರೆ!
ಇನ್ನು ಭಾಗ್ಯಲಕ್ಷ್ಮಿಗೆ ಬೇಕಾದ ರೇಶನ್ ಕಾರ್ಡ್ ಬಗ್ಗೆ ಬರೋಣ. ಈ ರೇಶನ್ ಕಾರ್ಡ್ ನಿಂದ ಪ್ರಯೋಜನ ಆಗುವುದು ಅಷ್ಟರಲ್ಲಿಯೇ ಇದೆ ಎಂದು ಇವತ್ತಿನ ದಿನಗಳಲ್ಲಿ ಅಸಂಖ್ಯಾತ ಮನೆಗಳಲ್ಲಿ ರೇಶನ್ ಕಾರ್ಡ್ ಅನ್ನು ಕಪಾಟಿನ ಮೂಲೆಯಲ್ಲಿ ಹಳೆ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಸುತ್ತಿಟ್ಟು ಮರೆತವರೇ ಎಷ್ಟೋ ಜನ ಇದ್ದಾರೆ. ಈಗ ಅವರು ಪ್ಲಾಸ್ಟಿಕ್ ತೆರೆದು ಅದರ ಒಳಗಿನಿಂದ ರೇಶನ್ ಕಾರ್ಡ್ ಹೊರಗೆ ತೆಗೆದು ಅದರ ಮೇಲೆ ಇದ್ದ ಧೂಳು ಹೊಡೆದು ಅದನ್ನು ಪ್ರೀತಿಯ ಕಣ್ಣಿನಿಂದ ನೋಡಿ ಪುನ: ಒಳಗೆ ಇಡುವುದು ಮಾತ್ರ ಬಾಕಿ ಉಳಿದಿದೆ. ಯಾಕೆಂದರೆ ಎಷ್ಟೋ ವರ್ಷಗಳಿಂದ ಬಳಸಿಲ್ಲ ಎಂದು ಅದನ್ನು ರಿಜೆಕ್ಟ್ ಮಾಡಿದ್ದು ಹಲವರಿಗೆ ಗೊತ್ತೇ ಇಲ್ಲ.
ಹಾಗಂತ ಎರಡು ಸಾವಿರದ ಆಸೆಗೆ ಅನೇಕ ಮನೆಗಳ ಹೆಂಗಸರು ರೇಶನ್ ಕಾರ್ಡ್ ನಲ್ಲಿ ತಮ್ಮ ಹೆಸರು ಮೇಲೆ ಹಾಕಲು ಪ್ರಯತ್ನಪಟ್ಟಿದ್ದು ಇದೆ. ಆದರೆ ಸರ್ವರ್ ಡೌನ್, ಟೆಕ್ನಿಕಲ್ ಪ್ರಾಬ್ಲಂ ಎಂದು ಇವತ್ತಿನ ತನಕ ಹತ್ತರಲ್ಲಿ ಒಂಭತ್ತು ಮಂದಿಗೆ ನಾಳೆ ಬನ್ನಿ, ಮುಂದಿನ ವಾರ ಬನ್ನಿ ಎನ್ನುವ ಸಬೂಬು ಕೊಡಲಾಗುತ್ತಿದೆ. ಇದರಿಂದ ಚುನಾವಣೆ ಮುಗಿದು ಐದು ತಿಂಗಳಾಗುತ್ತಾ ಬಂದರೂ ಎಷ್ಟೋ ಹೆಣ್ಣುಮಕ್ಕಳಿಗೆ ಮೊದಲ ಅಥವಾ ಎರಡನೇಯ ಕಂತಿನ ಹಣವೇ ಬರಲಿಲ್ಲ.
ಅತ್ತ ಬಿಪಿಎಲ್ ಇಲ್ಲ, ಇತ್ತ ಎಪಿಎಲ್ ಕೂಡ ಇಲ್ಲ!
ಇನ್ನು ಗ್ಯಾರಂಟಿ ಯೋಜನೆಯ ಲಾಭ ಸಿಗಬೇಕಾದರೆ ಬಿಪಿಎಲ್ ಕಾರ್ಡ್ ಹೊಂದಿರಬೇಕೆಂಬ ನಿಯಮವನ್ನು ಕೂಡ ಕಾಂಗ್ರೆಸ್ ಚುನಾವಣೆಯ ನಂತರ ಹೇಳಿತ್ತಲ್ಲ. ಆಗ ಎಪಿಎಲ್ ಇದ್ದವರು ತಮ್ಮ ಕಾರ್ಡನ್ನು ಬಿಪಿಎಲ್ ಮಾಡಿಸಲು ಹೊರಟಿದ್ದರು. ಬಿಪಿಎಲ್ ಮಾಡಿಸುವ ಮೊದಲು ಆ ಮನೆಯವರು ಎಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಿಸಬೇಕು. ಈಗ ಏನಾಗಿದೆ ಎಂದರೆ ಎಷ್ಟೋ ಕುಟುಂಬಗಳಲ್ಲಿ ಅತ್ತ ಬಿಪಿಎಲ್ ಕಾರ್ಡ್ ಕೂಡ ಇಲ್ಲ. ಇತ್ತ ಎಪಿಎಲ್ ಕಾರ್ಡ್ ಕೂಡ ರದ್ದಾಗಿರುವ ಪರಿಸ್ಥಿತಿ. ಬೇಕಿತ್ತಾ? ಇದರಿಂದ ಏನಾಗಿದೆ ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ತನಕ ಎಪಿಎಲ್ ಕಾರ್ಡ್ ನವರಿಗೆ ಕನಿಷ್ಟ 10 ಕೆಜಿ ಅಕ್ಕಿ ತಲಾ ಕೆಜಿಗೆ 15 ರೂಪಾಯಿ ದರದಲ್ಲಾದರೂ ಸಿಗುತ್ತಿತ್ತು. ಈಗ ಅಂತವರ ಎಪಿಎಲ್ ರದ್ದಾಗಿರುವುದರಿಂದ ಅವರಿಗೆ ರೇಶನ್ ಅಂಗಡಿಯ ಕಡೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬಿಪಿಎಲ್ ಕಾರ್ಡ್ ರದ್ದಾಗಿರುವುದರಿಂದ ಕೇಂದ್ರ ಸರಕಾರದ 5 ಲಕ್ಷದ ವಿಮೆ ಹಲವರಿಗೆ ಸಿಗುವುದು ತಪ್ಪಿ ಹೋಗಿದೆ. ಅದಕ್ಕೆ ಸಚಿವ ಮುನಿಯಪ್ಪನಂತವರು ಮದ್ದಿಗಾಗಿ ಇರಲಿ ಎಂದು ಬಿಪಿಎಲ್ ಕಾರ್ಡ್ ಮಾಡಿಸಿ ಕೊಡೋಣ ಎಂದು ನಿರ್ಧರಿಸಿದ್ದಾರೆ. ಇದರಿಂದ ಮದ್ದಿಗೆ ಸರ್ ಎಂದು ಎಷ್ಟೋ ಅನುಕೂಲಸ್ಥರು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇದರಿಂದ ಯಾರ್ಯಾರೋ ಮೋದಿಯವರ ಐದು ಲಕ್ಷದ ಸ್ಕೀಮ್ ಲಾಭ ಪಡೆಯುತ್ತಿದ್ದಾರೆ. ಮಾಡಿಸಿಕೊಟ್ಟ ಮುನಿಯಪ್ಪರಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಯಾರದ್ದೋ ಮಗುವಿಗೆ ನಾನೇ ಅಪ್ಪ ಎಂದು ತಮ್ಮ ಬೆನ್ನು ತಾವೇ ತಟ್ಟಿಸಿಕೊಳ್ಳುತ್ತಿದ್ದಾರೆ!
Leave A Reply