ಆಗುಂಬೆ ಸಾಹುಕಾರರ ಮಾಲ್ಗುಡಿ ಡೇಸಿನ ಹೆಜ್ಜೆಗುರುತು ಹುಡುಕುತ್ತಾ…!
ಇವತ್ತಿಗೂ ಮಾಲ್ಗುಡಿ ಡೇಸ್ ಧಾರಾವಾಹಿಯ ಟ್ಯೂನ್ ನಿಮ್ಮ ಮನಪಟಲದಲ್ಲಿ ತಣ್ಣನೆಯ ತಂತಿಯನ್ನು ಮೀಟುತ್ತಿದೆ ಎಂದರೆ ಅದಕ್ಕೆ ಕಾರಣ ಶಂಕರನಾಗ್. 1986 ರಲ್ಲಿ ಅವರು ಪ್ರಕೃತಿ ಮಾತೆ ಪುರುಸೊತ್ತಿನಲ್ಲಿ ಕ್ಯಾನ್ ವಾಸ್ ಮೇಲೆ ಹಸಿರು ಬಣ್ಣವನ್ನು ಮಾತ್ರ ಬಳಸಿ ರಚಿಸಿರುವ ಆಗುಂಬೆಗೆ ಕಾಲಿಟ್ಟರಲ್ಲ, ಆಗಲೇ ಮಾಲ್ಗುಡಿ ಡೇಸ್ ಕಿರುತೆರೆ ಇತಿಹಾಸದ ಸುವರ್ಣ ಅಧ್ಯಾಯದಲ್ಲಿ ದಾಖಲಾಗಿ ಹೋಯಿತು. ಮಾಲ್ಗುಡಿ ಡೇಸ್ ಆಗುಂಬೆಯಲ್ಲಿ ಚಿತ್ರೀಕರಣವಾಗುವ ಸಮಯದಲ್ಲಿ ಅವರಿಗೆ ಕಥೆಗೆ ಅಗತ್ಯವಿರುವಂತೆ ಒಂದು ದೊಡ್ಡ ಮನೆ ಬೇಕಾಗಿತ್ತು. ಅದಕ್ಕೆ ತಕ್ಕಂತೆ ಅವರಿಗೆ ಸಿಕ್ಕಿದ್ದು ಆಗುಂಬೆ ಸಾಹುಕಾರರ ಮನೆ. ನಂತರ ಆ ಮನೆ ಕೂಡ ಆ ಧಾರಾವಾಹಿಯಂತೆ ಚರಿತ್ರೆಯಲ್ಲಿ ತನ್ನ ಛಾಪನ್ನು ಉಳಿಸಿಬಿಟ್ಟಿದೆ. ಆ ಬಳಿಕ ಅಲ್ಲಿ ಕಿಚ್ಚ ಸುದೀಪ್ ನಟನೆ, ನಿರ್ಧೇಶನದ ಮೈ ಆಟೋಗ್ರಾಪ್, ಇತ್ತೀಚೆಗೆ ಮಾನ್ಸೂನ್ ರಾಗ ಹೀಗೆ ಹಲವು ಸಿನೆಮಾಗಳು ಕೂಡ ಚಿತ್ರೀಕರಣಗೊಂಡಿವೆ.
ಆಗುಂಬೆ ಗ್ರಾಮ ಪಂಚಾಯತ್ ಕಚೇರಿಯ ಸನಿಹದಲ್ಲಿ ರಸ್ತೆ ಬದಿಯಲ್ಲಿಯೇ ಈ ಮನೆ ಇದೆ. ಇನ್ನು ನೀವು ಆಗುಂಬೆಗೆ ಹೋದರೆ ಆ ಮನೆಯನ್ನು ಒಮ್ಮೆ ನೋಡಿಕೊಂಡು ಬನ್ನಿ. ಭರ್ತಿ ಎರಡೂವರೆ ಅಡಿಯಷ್ಟು ದಪ್ಪದ ಗೋಡೆ. 135 ವರ್ಷಗಳ ಹಿಂದೆ ನಿರ್ಮಾಣವಾದ ಮನೆಯನ್ನು ಕಟ್ಟಲು ಸಿಮೆಂಟ್ ಬಳಸಲೇ ಇಲ್ಲ. ಅದನ್ನು ವಜ್ರಗಾರೆ ಎನ್ನುವ ಆಯಾಮದಲ್ಲಿ ಕಟ್ಟಲಾಗಿದೆ. ಮೊಳೆ ಹೊಡೆಯುವುದು ಕನಸಿನ ಮಾತು. ಚೌಕಾಕಾರದಲ್ಲಿ ನಿರ್ಮಿಸಿರುವ ಮನೆಗೆ ಬೀಗ ಹಾಕುವ ಕ್ರಮ ಇಲ್ಲ. ಯಾರಾದರೊಬ್ಬರು ಇರಲೇಬೇಕು. ಯಾಕೆಂದರೆ ಒಳಗೆ ನಿತ್ಯ ಶಾಸ್ತ್ರೋಕ್ತವಾಗಿ ದೇವರ ಪೂಜೆ ನಡೆಯಬೇಕು. ಮನೆಯ ಒಳಗೆ ಅಂಡರ್ ಗ್ರೌಂಡ್ ವ್ಯವಸ್ಥೆಯನ್ನು ಕಟ್ಟುವಾಗಲೇ ಮಾಡಲಾಗಿದೆ. ಅಲ್ಲಿ ಹೋಗಲು ಮೆಟ್ಟಿಲುಗಳಿವೆ. ಮನೆಯ ಹಿಂದೆ ಮೂರು ಬಾವಿಗಳಿವೆ. ಈ ಮನೆಯನ್ನು ನೋಡಲು ಸ್ವತ: ಮೈಸೂರಿನ ದಿವಾನರಾಗಿರುವ ಶ್ರೀ ಎಂ ವಿಶ್ವೇಶ್ವರಯ್ಯನವರು ಕೂಡ ಬಂದಿದ್ದರು. ಅವರು ಈ ಮನೆಯ ವಾಸ್ತುಶೈಲಿ, ವಿಶೇಷತೆಗಳನ್ನು ನೋಡಿ ಬೆರಗಾಗಿದ್ದರಂತೆ.
ಐದು ತಲೆಮಾರಿನ ಕುಟುಂಬಗಳು ಇಲ್ಲಿ ವಾಸಿಸಿವೆ. ಈಗಲೂ ಶತಾಯುಷಿ ಹಿರಿಯ ಜೀವವೊಂದು ಅಲ್ಲಿ ಇದ್ದಾರೆ. ಮನೆಯ ಈಗಿನ ಪೀಳಿಗೆಯ ಪ್ರಮುಖರಾಗಿ ರವಿಕುಮಾರ್ ಮತ್ತು ಅವರ ಕುಟುಂಬ ಈಗ ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಹಳೆಯ ಕಾಲದ ಮನೆಯಾಗಿರುವುದರಿಂದ ಆಗಾಗ ರಿಪೇರಿ ಕಾರ್ಯ ಮಾಡಬೇಕಾಗುತ್ತದೆ. ಒಂದಿಷ್ಟು ಬದಲಾವಣೆಯೊಂದಿಗೆ ಅದೇ ಹಳೆಯ ವಿನ್ಯಾಸವನ್ನು ಈಗಲೂ ಉಳಿಸಿಕೊಂಡು ಬರಲಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಮನೆಯ ಕುಟುಂಬದವರು ವರ್ಷಕ್ಕೆ ಕೆಲವು ಸಲ ಎಲ್ಲರೂ ಒಟ್ಟು ಸೇರುತ್ತಾರೆ. ಮನೆಯ ಒಳಗೆ ಪುಟ್ಟ ರಥವನ್ನು ಎಳೆಯುತ್ತಾರೆ. ಒಂದು ಕಾಲದಲ್ಲಿ 70 – 80 ಜನ ವಾಸಿಸುತ್ತಿದ್ದ ಈ ಮನೆಯಲ್ಲಿ ಈಗ ಮೂರ್ನಾಕು ಜನ ಮಾತ್ರ ಇದ್ದಾರೆ. ಆಗುಂಬೆಯ ತೊಟ್ಟಿಲಲ್ಲಿರುವ ಈ ದೊಡ್ಡ ಮನೆಯಿಂದ ನಾವು ಹೊರಗೆ ಬರುತ್ತಿದ್ದಂತೆ ವರುಣ ದೇವ ಇಳೆಯ ಮೇಲೆ ಧುಮ್ಮಿಕ್ಕುತ್ತಿದ್ದ!!
Leave A Reply