ಹೈಕೋರ್ಟಿನಲ್ಲಿ ಶರಣ್ ಪಂಪ್ವೆಲ್ ವಿರುದ್ಧದ ಕೇಸಿಗೆ ತಡೆಯಾಜ್ಞೆ

ಕೇಸು ದಾಖಲಾದ 24 ಗಂಟೆಯೊಳಗೆ ಹೈಕೋರ್ಟಿನಲ್ಲಿ ತಡೆಯಾಜ್ಞೆ
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರು ತನ್ನ ಬೆಂಬಲಿಗರೊಂದಿಗೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿರುವ ಹಿಂದೂ ವ್ಯಕ್ತಿಗಳ ಮಾರಾಟದ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ಇಟ್ಟು ಎಲ್ಲಾ ಹಿಂದೂಗಳಿಗೆ ತಮಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಹಿಂದೂ ವ್ಯಾಪಾರಸ್ಥರ ಮಳಿಗೆಗಳಲ್ಲಿ ಮಾತ್ರ ಪಡೆದುಕೊಳ್ಳುವಂತೆ ಪತ್ರಿಕಾ ಪ್ರಕಟನೆ ನೀಡಿರುವುದರ ವಿರುದ್ಧ ದಕ್ಷಿಣ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಮನೋಹರ್ ಪ್ರಸಾದ್ ಇವರ ದೂರಿನ ಮೇರೆಗೆ ಶರಣ್ ಪಂಪ್ವೆಲ್ ಹಾಗೂ ಇತರರ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನದ 2023 ನೇ ನವರಾತ್ರಿ ಜಾತ್ರಾ ಮಹೋತ್ಸವದ ಸಮಯ ದೇವಸ್ಥಾನದ ಕಮಿಟಿ ವತಿಯಿಂದ ಮತ್ತು ಜಿಲ್ಲಾಡಳಿತದ ವತಿಯಿಂದ ಹರಾಜು ಪ್ರಕ್ರಿಯೆ ಮೂಲಕ ತೆರೆಯಲಾದ ಅಂಗಡಿಗಳ ಪೈಕಿ ಹಿಂದೂ ಧರ್ಮಿಯರ ಅಂಗಡಿಗಳಿಗೆ ಭಗವಾಧ್ವಜಗಳನ್ನು ಶರಣ್ ಪಂಪ್ವೆಲ್ ಅಳವಡಿಸಿದ್ದರು. ಅಕ್ಟೋಬರ್ 16 ಸಂಜೆ 4 ಗಂಟೆಗೆ ಮಂಗಳಾದೇವಿ ದೇವಸ್ಥಾನದ ಎದುರು ಇವರು ಸಾರ್ವಜನಿಕವಾಗಿ ಮಾತನಾಡಿ, ಹಿಂದೂ ಮತ್ತು ಮುಸ್ಲಿಮರ ನಡುವೆ ಮೈಮನಸ್ಸು, ಕೋಮು ದ್ವೇಷವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ಹೇಳಲಾಗಿದೆ.
ಇದರಿಂದ ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗುವ ಹಾಗೂ ಸಮಾಜದಲ್ಲಿ ಹಿಂದೂ, ಮುಸ್ಲಿಂ ಮತ್ತು ಇತರರ ನಡುವೆ ಕೋಮು ಸಂಘರ್ಷಗಳು ನಡೆಯುವ ಸಾಧ್ಯತೆ, ಸಾರ್ವಜನಿಕರ ಶಾಂತಿ ನೆಮ್ಮದಿಗೆ ಮತ್ತು ಸಾರ್ವಜನಿಕರ ಪ್ರಾಣ/ಸ್ವತ್ತುಗಳಿಗೆ ತೊಂದರೆಯಾಗುವ ರೀತಿಯಲ್ಲಿ ಇರುವುದರಿಂದ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್ ಹಾಗೂ ಇತರರ ವಿರುದ್ಧ ಕಲಾಂ 153 (ಎ) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಡಪಂಥಿಯ ಸಂಘಟನೆಗಳು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಒತ್ತಡ ಹಾಕಿ ಪ್ರಕರಣ ದಾಖಲಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೇಸು ದಾಖಲಾದ 24 ಗಂಟೆಯೊಳಗಾಗಿ ಶರಣ್ ಪಂಪ್ವೆಲ್ ವಿರುದ್ಧದ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೈಕೋರ್ಟಿನಲ್ಲಿ ಶರಣ್ ಪಂಪ್ವೆಲ್ ಪರ ತಡೆಯಾಜ್ಞೆಗೆ ವಾದ ಮಂಡಿಸಿದ್ದರು.
Leave A Reply