ಪ್ಯಾಚ್ ಅಪ್ ವರ್ಕ್ ಬಿಲ್ ಪಾಸಾಗುವ ಮೊದಲು ಉತ್ತರ ಬೇಕು!
ಮಂಗಳೂರು ಮಹಾನಗರ ಪಾಲಿಕೆಗೆ ಮಾನ ಮರ್ಯಾದೆ ಇಲ್ಲ ಎಂದು ನಮಗೆ ಗೊತ್ತಿದೆ. ಹಾಗಂತ ಇವರು ಮಾಡುವ ಕೆಲಸದಿಂದಾಗಿ ಪರ ಊರಿನವರ ಮುಂದೆ ಇಲ್ಲಿನ ಜನರ ಮಾನಮರ್ಯಾದೆ ಹೋಗದಿರಲಿ ಎಂದು ಆಶಯ. ಮಂಗಳೂರು ದಸರಾ ವಿಶ್ವವಿಖ್ಯಾತವಾಗಲಿ ಎಂದು ನಾವೆಲ್ಲರೂ ಬಯಸುತ್ತಿದ್ದೇವೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಶಾರದಾ ಮಾತೆಯ ಶೋಭಾಯಾತ್ರೆಯಲ್ಲಿ 50 ಟ್ಯಾಬ್ಲೋ ಇತ್ತು, ಅದು ಇತ್ತು, ಇದು ಇತ್ತು ಎಂದು ನಾವು ಮಾಧ್ಯಮಗಳಲ್ಲಿ ಇವತ್ತು ಓದಿದ್ದೇವೆ. ಅದನ್ನು ಖುಷಿಯಿಂದ ನಾಲ್ಕು ಮಂದಿಗೆ ಹೇಳುತ್ತಾ ಬರುತ್ತಿದ್ದೇವೆ. ಆದರೆ ಶೋಭಾಯಾತ್ರೆಯ ದಾರಿಯಲ್ಲಿ ರಸ್ತೆ ಹೇಗಿತ್ತು ಎಂದು ನಾವು ಯಾವಾಗಲೂ ಯೋಚಿಸಿದ್ದೇವಾ? ಬೇಕಾದರೆ ನಿನ್ನೆ ಶೋಭಾಯಾತ್ರೆ ಸಾಗಿದ ಮುಖ್ಯರಸ್ತೆಯಾದ ಕುಳೂರು ಫೇರಿ ರೋಡ್ (ಇದು ಹಿಂದಿನ ಬಾಲಾಜಿ ಥಿಯೇಟರ್ ನಿಂದ ಹಳೆ ನ್ಯೂಚಿತ್ರಾ ಟಾಕೀಸ್ ) ಬಿ.ಇ.ಎಂ ಹೈಸ್ಕೂಲ್ ಎದುರಿನ ರಸ್ತೆಯ ಫೋಟೋವನ್ನು ಒಮ್ಮೆ ನೋಡಿ. ಹೇಗಿದೆ?
ಪ್ರತಿ ವರುಷ ಹೀಗೆ ಜಾತ್ರೆ ಬರುವಾಗ ಮೆರವಣಿಗೆ ಸಾಗುವ ದಾರಿಯಲ್ಲಿ ಎಲ್ಲೆಲ್ಲಿ ಪ್ಯಾಚ್ ಅಪ್ ಆಗಬೇಕೋ ಅಲ್ಲೆಲ್ಲಾ ಶೀಘ್ರ ಪ್ಯಾಚ್ ಅಪ್ ವರ್ಕ್ ಮಾಡಲು ಗುತ್ತಿಗೆ ನೀಡಲಾಗುತ್ತದೆ. ಅಷ್ಟಿದ್ದೂ ಈ ಜಾಗ ನೋಡಿ. ಇದನ್ನು ಯಾರಾದರೂ ಪ್ಯಾಚ್ ಅಪ್ ಆಗಿದೆ ಅನ್ನುತ್ತಾರಾ? ಇಲ್ಲಿ ಟ್ಯಾಬ್ಲೋ ವಾಹನಗಳು ಹೋಗುವಾಗ ತೊಂದರೆಯಾಗುವುದಿಲ್ಲವಾ? ಹಾಗಾದರೆ ಎಲ್ಲಿ ಪ್ಯಾಚ್ ಅಪ್ ವರ್ಕ್ ಆಯಿತು? ಇದಕ್ಕಾಗಿ ನಮ್ಮ ನಿಮ್ಮ ತೆರಿಗೆಯ ಹಣದಿಂದ ಲಕ್ಷಾಂತರ ರೂಪಾಯಿ ವ್ಯಯವಾಗುತ್ತದೆ. ಹಾಗಾದರೆ ಆ ಹಣ ಎಲ್ಲಿಗೆ ಹೋಯಿತು? ಪ್ಯಾಚ್ ಅಪ್ ವರ್ಕ್ ಬಿಲ್ ರೆಡಿಯಾಗಿ ಅದರ ಹಣ ಡ್ರಾ ಆಗಿ ಯಾರ್ಯಾರಿಗೋ ಹಂಚಿಕೆ ಆಗುತ್ತದೆಯಾ? ಅದಕ್ಕಾಗಿ ಈ ಬಗ್ಗೆ ಧ್ವನಿ ಎತ್ತಬೇಕಾದ ಇಂಜಿನಿಯರಿಂಗ್ ವಿಭಾಗ ಮತ್ತು ಬೇರೆ ಅಧಿಕಾರಿಗಳು ಬಾಯಿಯಲ್ಲಿ ಅವಲಕ್ಕಿ ಹಾಕಿ ಕೂತಿದ್ದಾರಾ? ಇಲ್ಲದಿದ್ದರೆ ಗುತ್ತಿಗೆದಾರರ ಕಾಲರ್ ಪಟ್ಟಿ ಹಿಡಿದು ಕೆಲಸ ಮಾಡಿಸಲು ಇವರಿಗೆ ಅದ್ಯಾವ ರೋಗ ಬಡಿದಿದೆ?
ಲೈಟಿಂಗ್ಸ್ ಓಲೈಕೆಗೆ ಮಾತ್ರವೇ?
ಇನ್ನು ಎರಡನೇ ವಿಷಯಕ್ಕೆ ಬರೋಣ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ದಸರಾದ ಅಂಗವಾಗಿ ನಗರದಲ್ಲಿ ವಿದ್ಯುದೀಪಾಲಂಕಾರ ಮಾಡಿರುವ ವಿಷಯ ಜನರಿಗೆ ಈಗಾಗಲೇ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಇದನ್ನು ಆರಂಭಿಸಿದ್ದೇ ನಾವು ಎಂದು ಭಾರತೀಯ ಜನತಾ ಪಾರ್ಟಿಯವರು ಹೇಳಿಕೊಂಡು ತಿರುಗುತ್ತಿದ್ದರೆ, ಕಾಂಗ್ರೆಸ್ಸಿನವರು ನಮ್ಮ ಉಸ್ತುವಾರಿ ಸಚಿವರು ಇದಕ್ಕೆ ಪೂರ್ಣ ಸಹಕಾರ ನೀಡಿದ್ದಾರೆ ಎಂದು ತಮಗೆ ಸಿಕ್ಕಿದ್ದಷ್ಟು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಒಂದು ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಎಂದು ಕಳೆದ ಬಾರಿ ಅಲ್ಲೊಂದು ಇಲ್ಲೊಂದು ಎಡಪಂಥಿಯ ಧ್ವನಿಗಳು ಕೇಳಿತ್ತಾದರೂ ಕಾಂಗ್ರೆಸ್, ಬಿಜೆಪಿ ಯಾರೂ ಕೂಡ ಆ ಕಡೆ ಕಿವಿ ಹಾಕಲಿಲ್ಲ. ಯಾಕೆಂದರೆ ಈ ಬಗ್ಗೆ ವಿರೋಧ ಮಾತನಾಡಿದ್ರೆ ಒಂದು ಜಾತಿ, ಸಮುದಾಯದವರ ಕೆಂಗೆಣ್ಣಿಗೆ ಗುರಿಯಾಗುತ್ತೇವೆ ಎನ್ನುವ ಹೆದರಿಕೆ ಇದ್ದೇ ಇದೆ. ಹಾಗಾದರೆ ಪ್ರಬಲ ಜಾತಿಯೊಂದನ್ನು ಮಾತ್ರ ಓಲೈಸಲು ನೀವು ಲೈಟಿಂಗ್ ಹಾಕಿಸಿದ್ದೀರಿ ಎಂದು ನಾನು ಇವತ್ತು ಒಂದು ಉದಾಹರಣೆ ಕೊಟ್ಟು ಹೇಳಬಲ್ಲೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಷ್ಟೇ ಪ್ರಖ್ಯಾತವಾಗಿರುವ ಇನ್ನೊಂದು ಶಾರದೆ ಎಂದರೆ ಅದು ರಥಬೀದಿ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ 101 ವರ್ಷಗಳಿಂದ ನಡೆಯುವ ಶಾರದಾ ಮಹೋತ್ಸವ. ಇಲ್ಲಿನ ಶಾರದೆಯ ಶೋಭಾಯಾತ್ರೆ ಸಾಗುವ ಹಾದಿ ಮಂಗಳೂರು ಮಹಾನಗರ ಪಾಲಿಕೆಗೆ ಗೊತ್ತಿಲ್ಲವೇ? ಗೊತ್ತಿದ್ರೆ ಹಳೆ ನ್ಯೂಚಿತ್ರಾ ಟಾಕೀಸ್, ಚಾಮರಗಲ್ಲಿ, ಕೆಳರಥಬೀದಿ ಆ ಸೈಡ್ ಯಾಕೆ ಲೈಟಿಂಗ್ಸ್ ಹಾಕಿಸಿಲ್ಲ. ಯಾಕೆ ಬೇಡವೇ? ಕುದ್ರೋಳಿ ಶಾರದೆಯಷ್ಟೇ ಪ್ರಖ್ಯಾತವಾಗಿರುವುದು ರಥಬೀದಿ ವೆಂಕಟರಮಣ ದೇವಸ್ಥಾನದ ಶಾರದೆ. ಹಾಗಿದ್ರೆ ನಿರ್ಲಕ್ಷ್ಯ ಯಾಕೆ? ಇನ್ನು ಈ ಶಾರದಾ ದೇವಿಯ ಶೋಭಾಯಾತ್ರೆ ಹೋಗುವ ದಾರಿಯಲ್ಲಿ ತ್ಯಾಜ್ಯದ ರಾಶಿ ಹೇಗಿವೆ ಎನ್ನುವುದನ್ನು ಆರೋಗ್ಯ ವಿಭಾಗದವರು ಒಮ್ಮೆ ಹೋಗಿ ಕಣ್ತುಂಬಿ ಬನ್ನಿ.
ಒಟ್ಟಿನಲ್ಲಿ ಈ ಮೂರು ವಿಷಯಗಳಲ್ಲಿ ಪಾಲಿಕೆ ಸುಧಾರಿಸುವುದಿಲ್ಲ. ಯಾವ ಅಧಿಕಾರಿಗೂ ಇದು ಬಿದ್ದು ಹೋಗಿಲ್ಲ. ಈ ಮೇಲೆ ಉದಾಹರಿಸಿದ ಎರಡೂ ವಿಷಯ ಕಾಂಗ್ರೆಸ್ ಕಾರ್ಪೋರೇಟರ್ ವ್ಯಾಪ್ತಿಯಲ್ಲಿ ಬರುವುದರಿಂದ ಅವರಿಗೆ ಅಂತಹ ಆಸಕ್ತಿ ಇದ್ದಂತೆ ಕಾಣುವುದಿಲ್ಲ. ಹಾಗಂತ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು ಏನು ಪಾಲಿಕೆಯ ಅಂಗಳದಲ್ಲಿ ಕುಂಟೆ ಬಿಲ್ಲೆ ಆಡುತ್ತಿದ್ದಾರಾ??
Leave A Reply