ನೂತನ ಆರ್ಗೋಡು ಶೈಲಿಯ ಜನಕ, ರಂಗಸ್ಥಳದ “ಶ್ರೀರಾಮ” ಮೋಹನದಾಸ ಶೆಣೈ

ನೂತನ ಆರ್ಗೋಡು ಶೈಲಿಯ ಜನಕ, ರಂಗಸ್ಥಳದ ಶ್ರೀರಾಮ ಖ್ಯಾತಿಯ, ಬಡಗುತಿಟ್ಟು ಯಕ್ಷರಂಗದ ಮೋಡಿಗಾರ ಆರ್ಗೋಡು ಮೋಹನದಾಸ ಶೆಣೈ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಬಳಿಯ ಆರ್ಗೋಡು ಎಂಬಲ್ಲಿ ಬಡಗುತಿಟ್ಟು ಯಕ್ಷಗಾನದ ಸುಪ್ರಸಿದ್ಧ ಹಿರಿಯ ಭಾಗವತರಾದ ಗೋವಿಂದರಾಯ ಶೆಣೈ ಹಾಗೂ ಮುಕ್ತಾಬಾಯಿ ದಂಪತಿಗಳ ಪುತ್ರನಾಗಿ 10-02-1950 ರಂದು ಜನಿಸಿದ ಮೋಹನದಾಸ ಶೆಣೈಯವರು ಹಳ್ಳಿಹೊಳೆಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಂಕರನಾರಾಯಣದಲ್ಲಿ ಪ್ರೌಢ ಶಿಕ್ಷಣ ಪಡೆದರು. ತನ್ನ ಪಿ.ಯು.ಸಿ ವಿದ್ಯಾಭ್ಯಾಸದ ಬಳಿಕ ತಮ್ಮ ತಂದೆಯವರ ಪ್ರೇರಣೆ ಹಾಗೂ ಆಗಿನ ಹಿರಿಯಡಕ ಮೇಳದ ಯಜಮಾನರಾಗಿದ್ದ ಪೆರ್ಡೂರು ಮಹಾಬಲ ಶೆಟ್ಟಿಯವರ ಪ್ರೋತ್ಸಾಹದ ಕಾರಣ ಸ್ವ-ಆಸಕ್ತಿಯಿಂದ ಯಕ್ಷಗಾನ ಬಣ್ಣದ ಲೋಕವನ್ನು ಪ್ರವೇಶಿಸಿದರು.
ಆರ್ಗೋಡು ಮೋಹನದಾಸ ಶೆಣೈಯವರ ಈರ್ವರು ದೊಡ್ಡಪ್ಪಂದಿರೂ ಕೂಡ ಉತ್ತಮ ವೇಷಧಾರಿಗಳೆನ್ನುವ ಹೆಸರನ್ನು ಗಳಿಸಿಕೊಂಡವರು. ತಂದೆಯವರು ಬಡಗುತಿಟ್ಟು ಯಕ್ಷಗಾನ ಕ್ಷೇತ್ರದ ಪ್ರಖ್ಯಾತ ಭಾಗವತರು. ಕಮಲಶಿಲೆ ಮೇಳದ ಉಗಮಕ್ಕೂ ಕಾರಣರಾದವರು. ಈ ಕಲಾಹಿನ್ನೆಲೆ ಮೋಹನದಾಸ ಶೆಣೈಯವರಿಗೆ ಯಕ್ಷಗಾನದ ಪೂರಕ ವಾತಾವರಣ ಮತ್ತು ಯಕ್ಷಗಾನದ ಆಸಕ್ತಿ ಮೊಳೆತು ಬಲಿಯಲು ಸಹಾಯಕವಾಯಿತು.
ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗರಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ಅಭ್ಯಾಸ ಮಾಡಿದ ಇವರು ಮೊದಲಿಗೆ ಹವ್ಯಾಸಿಯಾಗಿ ಒಂದೆರಡು ವರ್ಷ ಯಕ್ಷಗಾನ ಕಲಾಸೇವೆಯನ್ನು ಮಾಡಿದ್ದರು. ತಂದೆ ಗೋವಿಂದರಾಯ ಶೆಣೈ ಹಾಗೂ ದೊಡ್ಡಪ್ಪನಾದ ರಾಮಚಂದ್ರ ಶೆಣೈಯವರಿಂದ ಯಕ್ಷಗಾನದ ಅರ್ಥಗಾರಿಕೆಯನ್ನೂ ತಿಳಿದುಕೊಂಡರು.
ಬ್ರಹ್ಮಾವರ-ಕುಂದಾಪುರ ಪ್ರಾಂತ್ಯದಲ್ಲಿ ಪರಿಚಿತವಾದ ನಡುತಿಟ್ಟಿನ ಎರಡು ಪ್ರಮುಖ ಶೈಲಿಗಳಾದ ಹಾರಾಡಿ, ಮಟ್ಪಾಡಿ ತಿಟ್ಟುಗಳ ಅನುಸರಣೆ ಯಾ ಅನುಕರಣೆ ಇಲ್ಲದೇ ತನ್ನದೇ ಆದ ಶೈಲಿಯಲ್ಲಿ ಮುಂದುವರಿದು ಆರ್ಗೋಡು ಶೈಲಿಯನ್ನು ಹುಟ್ಟು ಹಾಕಿದವರು ಆರ್ಗೋಡು ಮೋಹನದಾಸ ಶೆಣೈಯವರು.
ಪ್ರಾರಂಭದಲ್ಲಿ ಹಿರಿಯಡಕ ಮೇಳವನ್ನು ಸೇರಿ ಅಲ್ಲಿ ಮೂರು ವರ್ಷ ದುಡಿದ ಇವರು ಆ ಮೇಳದ ಸಂಚಾಲಕನಾಗಿ ಎರಡು ವರ್ಷ ಮೇಳವನ್ನು ಮುನ್ನೆಡಿಸಿದರು. ಆ ಬಳಿಕ ಸಾಲಿಗ್ರಾಮ, ಪೆರ್ಡೂರು, ಕುಮಟಾ, ಮುಲ್ಕಿ, ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ ಮುಂತಾದ ಮೇಳಗಳಲ್ಲಿ ಸುದೀರ್ಘ ಕಲಾಸೇವೆ ಮಾಡಿದ ಇವರು ಸದ್ಯ ಸಾಲಿಗ್ರಾಮ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ.
ಆರ್ಗೋಡು ಮೋಹನದಾಸ ಶೆಣೈಯವರ ಶ್ರೀರಾಮನ ಪಾತ್ರ ಅತ್ಯಂತ ಪ್ರಸಿದ್ಧಿಯನ್ನು ಗಳಿಸಿಕೊಂಡಿದೆ. ಶ್ರೀರಾಮ ಪಾತ್ರ ಪ್ರಧಾನ ಭೂಮಿಕೆಯಲ್ಲಿರುವ ಪ್ರಸಂಗಗಳಿಗೆ ಶೆಣೈಯವರು ಅನಿವಾರ್ಯ ಎನ್ನುವಷ್ಟರ ಮಟ್ಟಿಗಿನ ಖ್ಯಾತಿ ಆರ್ಗೋಡು ಅವರ ಶ್ರೀರಾಮನ ಪಾತ್ರಕ್ಕಿದೆ. “ರಾಮನೆಂದರೆ ಶೆಣೈ, ಶೆಣೈಯವರೆಂದರೆ ರಾಮ” ಎನ್ನುವ ಜನಜನಿತ ಮಾತು ಯಕ್ಷಗಾನ ವಲಯದಲ್ಲಿ ಪ್ರಸಿದ್ಧವಾಗಿದೆ. ಆರ್ಗೋಡು ಅವರ ಶ್ರೀರಾಮ ಸುಂದರವಾದ ಆಳಂಗ, ಸೌಮ್ಯ ಶ್ರುತಿಬದ್ಧ ಮಾತುಗಾರಿಕೆಯಿಂದ ಪಾತ್ರ ಚಿತ್ರಣ ಖ್ಯಾತಿಯನ್ನು ಪಡೆಯಿತು. ಕುಶಲವರ ಕಾಳಗ ಮತ್ತು ರಾಮಾಂಜನೇಯದ ಶ್ರೀರಾಮನ ಪಾತ್ರಗಳು ಯಕ್ಷಗಾನ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವುಗಳು.
ಪೆರ್ಡೂರು ಮತ್ತು ಮೂಲ್ಕಿ ಮೇಳದಲ್ಲಿ ಕುಮಟಾ ಗೋವಿಂದ ನಾಯ್ಕರ ಹನೂಮಂತ, ಆರ್ಗೋಡು ಮೋಹನದಾಸ ಶೆಣೈಯವರ ಶ್ರೀರಾಮ, ಎಂ. ಎ. ನಾಯ್ಕ್ ಮತ್ತು ಮುರೂರು ವಿಷ್ಣು ಭಟ್ಟರ ಸೀತೆಯ ಪಾತ್ರಗಳು ಆಯಾ ಮೇಳಗಳಲ್ಲಿ ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕಿದ್ದು ಇಂದೀಗ ಇತಿಹಾಸ. ಪೆರ್ಡೂರು ಮೇಳದಲ್ಲಿ ಗೋಪಾಲಾಚಾರ್ ತೀರ್ಥಹಳ್ಳಿ ಮತ್ತು ಕಣ್ಣಿಮನೆ ಗಣಪತಿ ಭಟ್ಟರ ಲವಕುಶನಿಗೆ ಇವರ ಶ್ರೀರಾಮ ಕುಶಲವ ಪ್ರಸಂಗದ ಮುಖ್ಯ ಆಕರ್ಷಣೆಯಾಗಿತ್ತು. ಮೂಲ್ಕಿ ಮೇಳದ ಸೀತಾಪಾರಮ್ಯ ಪ್ರಸಂಗದ ಶ್ರೀರಾಮನ ಪಾತ್ರವೂ ಅಪಾರ ಜನಮನ್ನಣೆ ಪಡೆದಿತ್ತು.
ಯಾವುದೇ ಪಾತ್ರಕ್ಕೆ ತನ್ನದೇ ಆದ ಸ್ವಂತ ಶೈಲಿಯಿಂದ ಜೀವ ತುಂಬುವ ಶೆಣೈಯವರ ಸೌಮ್ಯ ಪಾತ್ರಗಳಾದ ಶಂತನು, ಭೀಷ್ಮ, ಮಯೂರದ್ವಜ, ಉಗ್ರಸೇನ, ಕಮಲಭೂಪ, ಋತುಪರ್ಣ ಮುಂತಾದ ಪಾತ್ರ ನಿರ್ವಹಣೆ ಅಸಾಧಾರಾಣವಾದುದೆಂದು ಯಕ್ಷಲೋಕ ಒಪ್ಪಿಕೊಂಡಿತು. ಶೆಣೈಯವರ ಕಂಠದ ಏರಿಳಿತ ಸೌಮ್ಯ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದು, ಪ್ರೇಕ್ಷಕರೂ ಕೂಡ ಅವರನ್ನು ಸೌಮ್ಯ ಪಾತ್ರಗಳಲ್ಲಿ ನೋಡಲು ಹೆಚ್ಚು ಇಷ್ಟಪಡುವುದನ್ನು ಗಮನಿಸಬಹುದು.
ಐತಿಹಾಸಿಕ ಪ್ರಸಂಗವಾದ ವಸಂತಸೇನೆಯ ಮೈತ್ರೇಯ ಭಟ್ಟನ ಪಾತ್ರ ಅತ್ಯಂತ ಹೆಚ್ಚಿನ ಪ್ರಸಿದ್ಧಿಯನ್ನು ಆರ್ಗೋಡು ಅವರಿಗೆ ತಂದು ಕೊಟ್ಟಿತು. ಯಕ್ಷಗಾನದ ಇತಿಹಾಸದಲ್ಲಿ ಒಂದು ದಾಖಲೆಯನ್ನು ಇದು ನಿರ್ಮಿಸಿತು. ಸಾಲಿಗ್ರಾಮ ಮೇಳ ಮತ್ತು ಪೆರ್ಡೂರು ಮೇಳದಲ್ಲಿ ಶಿರಿಯಾರ ಮಂಜು ನಾಯ್ಕ ಮತ್ತು ನಗರ ಜಗನ್ನಾಥ ಶೆಟ್ಟರ ಚಾರುದತ್ತ , ಅರಾಟೆ ಮಂಜುನಾಥ ಮತ್ತು ರಾಮ ನಾಯರಿಯವರ ವಸಂತಸೇನೆ, ಕುಮಟಾ ಗೋವಿಂದ ನಾಯ್ಕರ ಶಕಾರನ ಪಾತ್ರಗಳಿಗೆ ಆರ್ಗೋಡು ಮೋಹನದಾಸ ಶೆಣೈಯವರ ವಸಂತಸೇನೆ ಪ್ರಸಂಗದ ಮೈತ್ರೇಯ ಭಟ್ಟನ ಪಾತ್ರ ಆಯಾ ಮೇಳಗಳಲ್ಲಿ ವಿಶೇಷ ಆಕರ್ಷಣೆಯಾಗಿ ಮೆರೆದಿರುವುದು ಇಂದೀಗ ಇತಿಹಾಸ.
ಪೌರಾಣಿಕ ಪ್ರಸಂಗಗಳಲ್ಲದೆ, ಸಾಮಾಜಿಕ, ಕಾಲ್ಪನಿಕ, ಐತಿಹಾಸಿಕ ಪ್ರಸಂಗಗಳಲ್ಲಿಯೂ ಆರ್ಗೋಡು ಮೋಹನದಾಸ ಶೆಣೈಯವರು ತಮ್ಮದೇ ಆದ ವೈಶಿಷ್ಟ್ಯಪೂರ್ಣತೆಯಿಂದ ಪಾತ್ರ ಪ್ರಸ್ತುತಿಯನ್ನು ಮಾಡಿದವರು. ನಾಗಶ್ರೀ, ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ, ಭಾಗ್ಯ ಭಾರತಿ, ರತಿರೇಖಾ, ಬನಶಂಕರಿ ಮೊದಲಾದ ನವ್ಯ ಪ್ರಸಂಗಗಳಲ್ಲೂ ತಮ್ಮ ಕಲಾಭಿವ್ಯಕ್ತಿಯನ್ನು ಮೆರೆಸಿದ್ದಾರೆ. ಆರ್ಗೋಡು ಮೋಹನದಾಸ ಶೆಣೈಯವರಿಗೆ ಅತೀವ ಪ್ರಸಿದ್ದಿ ನೀಡಿದ ಪಾತ್ರವೆಂದರೆ ನಾಗಶ್ರೀ ಪ್ರಸಂಗದ ಶುಭ್ರಾಂಗ. ದಿ| ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದ ಸೌಮ್ಯ ಪಾತ್ರವಾದ ಶುಭ್ರಾಂಗನ ಪಾತ್ರಕ್ಕೆ ಎಪ್ಪತ್ತರ ದಶಕದಲ್ಲಿ ಜೀವತುಂಬಿದ ಶಿರಿಯಾರ ಮಂಜುನಾಯ್ಕರ ನಾಯ್ಕರ ನಂತರ ಆ ಪಾತ್ರಕ್ಕೆ ಮರುಹುಟ್ಟು ನೀಡಿದವರು ವಾಸುದೇವ ಸಾಮಗರು ಮತ್ತು ಆರ್ಗೋಡು ಮೋಹನದಾಸ ಶೆಣೈಯವರು.
ರಂಗದಲ್ಲಿ ಸಾಧ್ಯವಾದಷ್ಟು ಪರಿಪೂರ್ಣವಾಗಿ ತನ್ನ ಪಾತ್ರವನ್ನು ಚಿತ್ರಿಸಬಲ್ಲ ಶೆಣೈಯವರು ತಮ್ಮಲ್ಲಿರುವ ವಿದ್ವತ್ತನ್ನು ಚೌಕಿಯಲ್ಲೂ ಹಂಚಿಕೊಳ್ಳುವ ಉದಾರ ಹೃದಯಿ. ಶೆಣೈಯವರು ಬಡಗುತಿಟ್ಟಿನ ಯಕ್ಷರಂಗದ ದೊಡ್ಡ ಆಸ್ತಿ. ಕಿರಿಯ ಕಲಾವಿದರಿಗೆ ತನ್ನ ಅನುಭವವನ್ನು, ತನ್ನಲ್ಲಿರುವ ಜ್ಞಾನವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಧಾರೆ ಎರೆಯುತ್ತಾ, ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಧಾರಾಳ ಹೃದಯಿ. ಹಿರಿ-ಕಿರಿಯರೆನ್ನದೇ ಮೇಳದ ಹೆಚ್ಚಿನ ಕಲಾವಿದರಿಗೆ ಇವರು ಅಘೋಷಿತ ಗುರುಗಳು. ಸರ್ವ ಕಲಾವಿದರಿಂದ ಗುರುಗಳೆಂದು ಕರೆಸಿಕೊಳ್ಳುವ ಇವರು ಕಿರಿಯ ಕಲಾವಿದರನ್ನು ತಿದ್ದಿ ತೀಡಿ ಜೊತೆಗೆ ಬೆಳೆಯಗೊಡುವವರು. ಹಾಗೂ ತಿರುಗಾಟಕ್ಕೆ ದಾರಿದೀಪವಾಗಿ ನಿಲ್ಲಬಲ್ಲ ಸರಳ ಸಜ್ಜನ ಸಹೃದಯೀ ಕಲಾವಿದರು.
ಆರ್ಗೋಡು ಮೋಹನದಾಸ ಶೆಣೈಯವರು ತಾಳಮದ್ದಳೆ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡವರು. ತಮ್ಮ ಅಸ್ಖಲಿತ, ತೂಕದ ಮಾತುಗಾರಿಕೆ, ಅಗಾಧವಾದ ಪೌರಾಣಿಕ ಜ್ಞಾನ, ಪ್ರಸಂಗ ಜ್ಞಾನ, ಉತ್ತಮ ರಂಗ ಮಾಹಿತಿ ಇವೆಲ್ಲವನ್ನೂ ಹೊಂದಿಕೊಂಡು ಯಕ್ಷಗಾನದ ಬಯಲಾಟಗಳಲ್ಲಿ ಮತ್ತು ತಾಳಮದ್ದಳೆ ಕ್ಷೇತ್ರಗಳೆರಡರಲ್ಲಿಯೂ ಉತ್ತಮವಾದ ಪ್ರದರ್ಶನವನ್ನು ನೀಡಬಲ್ಲವರಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ವೇಷಗಳನ್ನು ಮಾಡುತ್ತಾ, ಮೇಳದಲ್ಲಿ ತಿರುಗಾಟವನ್ನು ಮಾಡುತ್ತಾ, ತಾಳಮದ್ದಳೆಯಲ್ಲಿಯೂ ಅರ್ಥಗಾರಿಕೆಯನ್ನು ಮಾಡುತ್ತ ಬಂದಿರುವ ಇವರು ಕೆಲ ಪ್ರಸಂಗಗಳನ್ನೂ ಸಹ ರಚಿಸಿದ್ದಾರೆ. ಸ್ವಪ್ನ ಸಾಮ್ರಾಜ್ಯ, ರಕ್ತ ತಿಲಕ, ಮೃಗ ನಯನೆ, ಅವನಿ ಅಂಬರ, ಆನಂದ ಭೈರವಿ ಹಾಗೂ ಯಶೋದೆ ಕೃಷ್ಣ ಆರ್ಗೋಡು ಮೋಹನದಾಸ ಶೆಣೈಯವರು ರಚಿಸಿರುವ ಯಕ್ಷಗಾನ ಪ್ರಸಂಗಗಳು.
ಸೀತಾನದಿ ಪ್ರಶಸ್ತಿ, ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿ, ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ, ನಿಡಂಬೂರು ಪ್ರಶಸ್ತಿ ಮೊದಲಾಗಿ ಅಹಲವಾರು ಸಂಘ-ಸಂಸ್ಥೆಗಳಿಂದ ಗುರುತಿಸಿ ಗೌರವಿಸಲ್ಪಟ್ಟಿದ್ದಾರೆ ಆರ್ಗೋಡು ಮೋಹನದಾಸ ಶೆಣೈಯವರು.
ಆರ್ಗೋಡು ಮೋಹನದಾಸ ಶೆಣೈಯವರು ಕಸ್ತೂರಿ ಎನ್ನುವವರನ್ನು ವರಿಸಿ ಮೂವರು ಹೆಣ್ಣು ಹಾಗೂ ಎರಡು ಗಂಡು ಮಕ್ಕಳನ್ನು ಪಡೆದು ಸದ್ಯ ಕಮಲಶಿಲೆ ಸಮೀಪದ ಆರ್ಗೋಡು ಎಂಬಲ್ಲಿ ವಾಸವಾಗಿದ್ದಾರೆ.
Leave A Reply