ಅದೃಷ್ಟಶಾಲಿ ರಾಜಕಾರಣಿ ಡಿವಿ ಚುನಾವಣಾ ಇನ್ಸಿಂಗ್ಸ್ ಖತಂ!

ಹೊಟ್ಟೆ ತುಂಬಿದ ಮೇಲೆ ಪ್ರಾಣಿಗಳು ಕೂಡ ಬೇಟೆಯಾಡುವುದಿಲ್ಲ. ಆದರೆ ರಾಜಕಾರಣಿಗಳು ಎಲ್ಲವನ್ನು ಅನುಭವಿಸಿದ ಬಳಿಕ ಕೂಡ ಏನಾದರೂ ಅಧಿಕಾರ ಇದೆಯಾ ಎಂದು ಹೊಂಚು ಹಾಕುತ್ತಾ ಕೂತಿರುತ್ತಾರೆ. ಸರಿಯಾಗಿ ಕರೆದು ಬುದ್ಧಿವಾದ ಹೇಳಬೇಕಾದವರು ಹೇಳದಿದ್ದರೆ ಇಂತವರಲ್ಲಿ ಕೆಲವರು ತಮ್ಮ ಪಕ್ಷದ ಒಳಗೆ ಆಟಂ ಬಾಂಬ್ ಗಳಾಗುತ್ತಾರೆ. ಕೆಲವರು ಸೂಸೈಡ್ ಬಾಂಬರ್ ಗಳಾಗುತ್ತಾರೆ. ಕೊನೆಗೆ ತಾವು ಕೂಡ ಮೂಲೆಗೆ ಸರಿದು ಪಕ್ಷವನ್ನು ಕೂಡ ಮುಳುಗಿಸಿಬಿಡುತ್ತಾರೆ. ಅಂತಹ ಚಾನ್ಸ್ ಈ ಬಾರಿ ಲೋಕಸಭೆಯಲ್ಲಿ ಕರ್ನಾಟಕದಿಂದ ಇತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಿಂದ ಪಾಠ ಕಲಿತಿರುವ ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ನಾಯಕರು ಮ್ಯಾಚ್ ಶುರುವಾಗುವ ಮೊದಲೇ ಎಚ್ಚೆತ್ತುಕೊಂಡಿದ್ದಾರೆ.
ಶೆಟ್ಟರ್ ಗಿಂತ ಬೆಟರ್ ಇದು!
ಅದರ ಮೊದಲ ಹಂತವಾಗಿ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡು “ನೀವು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡಾ” ಎನ್ನುವ ಸಂದೇಶ ನೀಡಿದ್ದಾರೆ. ಮನಸ್ಸು ಇತ್ತೋ, ಅನಿವಾರ್ಯವೋ,
ಒಲ್ಲದ ಮನಸ್ಸಿನಿಂದಲೋ ಸದಾನಂದ ಗೌಡರು ಒಪ್ಪಿದಂತೆ ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿರುವ ಸದಾನಂದ ಗೌಡರ ಬಾಡಿ ಲ್ಯಾಂಗ್ವೆಜ್ ನೋಡಿದ ವರದಿಗಾರರು ಈ ಮಾತನ್ನು ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ನಾಲ್ಕೈದು ತಿಂಗಳು ಇರುವಾಗಲೇ ಹೈಕಮಾಂಡ್ ಹಾಲಿ ಸಂಸದರನ್ನು ಕರೆಸಿ ಹೀಗೆ ಹೇಳುವುದರಿಂದ ಕೊನೆಯ ಹಂತದಲ್ಲಿ ಆಗಬಹುದಾದ ಸಂಭಾವ್ಯ ಅನಾಹುತವನ್ನು ತಪ್ಪಿಸಬಹುದು. ಇಲ್ಲದಿದ್ದರೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರ ರೀತಿಯಲ್ಲಿಯೇ ಪಕ್ಷಕ್ಕೆ ಹೊಡೆತ ಬೀಳುತ್ತಿತ್ತು. ಶೆಟ್ಟರ್ ಅಥವಾ ಸವದಿ ತರಹ ಸದಾನಂದ ಗೌಡರಿಗೆ ರಾಜಕೀಯ ಸಾಮರ್ತ್ಯ ಇದೆಯೋ, ಇಲ್ವೋ ಬೇರೆ ವಿಷಯ. ಕೊನೆಯ ಹಂತದಲ್ಲಿ ನಿಮಗೆ ಟಿಕೆಟ್ ಇಲ್ಲ ಎಂದು ಹೇಳುವುದರಿಂದ ಅದು ಆ ರಾಜಕಾರಣಿಯ ಅಹಂಗೆ ಪೆಟ್ಟಾಗುತ್ತಿತ್ತು. ಅವರ ಸ್ವಾಭಿಮಾನಕ್ಕೆ ದಕ್ಕೆಯಾಗುತ್ತಿತ್ತು. ನೀವು ಮೊದಲೇ ಹೇಳಬಹುದಿತ್ತಲ್ಲ ಎಂದು ಇವರು ಹೇಳುವುದು ನಡೆಯುತ್ತಿತ್ತು. ಆದರೆ ಈ ಬಾರಿ ಮೊದಲೇ ಸದಾನಂದ ಗೌಡರಿಗೆ ಹೇಳಬೇಕಾಗಿರುವುದನ್ನು ಹೇಳಿರುವುದರಿಂದ ಅವರು ಕೂಡ ತಮ್ಮ ಬೆಂಬಲಿಗರಿಗೆ (ಇದ್ದರೆ) ಈ ವಿಷಯ ತಲುಪಿಸಬಹುದು. ಇನ್ನು ಅವರ ಹಾಲಿ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗೂ ತಯಾರಾಗಲು ಅವಕಾಶ ನೀಡಿದಂತಾಗುತ್ತದೆ.
ಅದೃಷ್ಟದ ರಾಜಕಾರಣಿಯ ವಿಫಲ ಯಾತ್ರೆ!
Click Here to watch Detailed Video
ಇನ್ನು ಸದಾನಂದ ಗೌಡರಿಗೆ ಇಲೆಕ್ಷನ್ ಟಿಕೆಟ್ ಇಲ್ಲದಿರುವುದರಿಂದ ಪಕ್ಷದಲ್ಲಿಯೂ ಒಳ್ಳೆಯ ಸಂದೇಶ ಹೋಗುತ್ತದೆ. ಯಾಕೆಂದರೆ ಒಬ್ಬರೇ ಎಲ್ಲಾ ಸ್ಥಾನಮಾನವನ್ನು ಅನುಭವಿಸಿ, ಮುದುಕರಾದ ಮೇಲೆಯೂ ಕೂದಲಿಗೆ ಡೈ ಹೊಡೆದು ಇನ್ನು ಅಧಿಕಾರ ಬೇಕು ಎಂದು ಹೇಳುವುದರಿಂದ ಯುವ ತಲೆಮಾರು ಏನು ಮಾಡಬೇಕು? ಈಗ ಡಿವಿಯವರನ್ನೇ ತೆಗೆದುಕೊಳ್ಳಿ. ಅವರು ಶಾಸಕರಾಗಿ, ಸಂಸದರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಮುಖ್ಯ ಮಂತ್ರಿಯಾಗಿ, ಕೇಂದ್ರದಲ್ಲಿ ರೈಲ್ವೆಯಂತಹ ಪ್ರಭಾವಿ ಖಾತೆ ನಿರ್ವಹಿಸಿ ಇನ್ನು ಕೂಡ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದರೆ ಏನಾಗುತ್ತದೆ? ಅಷ್ಟಕ್ಕೂ ಡಿವಿಯವರ ಅದೃಷ್ಟ ಚೆನ್ನಾಗಿದೆ. ಇಷ್ಟೆಲ್ಲಾ ಸ್ಥಾನಮಾನ ಸಿಕ್ಕಿರುವುದು ಅವರ ಅರ್ಹತೆಯಿಂದ ಅಲ್ಲ, ಅದೃಷ್ಟದಿಂದ ಎನ್ನುವುದು ರಾಜಕೀಯ ಪಂಡಿತರಿಗೆ ಗೊತ್ತೆ ಇದೆ. ಯಾಕೆಂದರೆ ರಾಮ ಭಟ್ಟರ ನೆರಳಿನಲ್ಲಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಡಿವಿ ನಂತರ ಏರಿದ ಎತ್ತರ ಯಾರು ನೋಡಿದರೂ ಥ್ರಿಲ್ ಆಗುವುದು ಗ್ಯಾರಂಟಿ. ಯಾಕೆಂದರೆ ಆಗಿನ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಧನಂಜಯ ಕುಮಾರ್ ಅವರಿಗೆ ಟಿಕೆಟ್ ಕೊಡುವುದು ಬೇಡಾ ಎಂದು ಬಿಜೆಪಿಯ ವರಿಷ್ಟರು ನಿಶ್ಚಯಿಸಿದಾಗ ಅವರಿಗೆ ಪರ್ಯಾಯವಾಗಿ ಕಾಣಿಸಿದ್ದು ಡಿವಿ. ಆದರೆ ಡಿವಿ ರಾಷ್ಟ್ರೀಯ ನಾಯಕರ ನಿರೀಕ್ಷೆಗಳನ್ನು ಹುಸಿಗೊಳಿಸಿಬಿಟ್ಟರು. ಆದ್ದರಿಂದ ಅವರನ್ನು ಉಪಾಯವಿಲ್ಲದೆ ಒಂದೇ ಅವಧಿಗೆ ಮಂಗಳೂರಿನಿಂದ ಉಡುಪಿಗೆ ಸಾಗಿಸಲಾಯಿತು. ಯಾಕೆಂದರೆ ಮಂಗಳೂರಿನಲ್ಲಿಯೇ ಇದ್ದಿದ್ದರೆ ಅಲ್ಲಿ ಅವರ ಸೋಲು ಖಚಿತವಾಗಿತ್ತು. ನಂತರ ಉಡುಪಿಯಲ್ಲಿ ಒಂದು ಅವಧಿ ಮುಗಿಸುವಷ್ಟರಲ್ಲಿ ಅಲ್ಲಿಯೂ ವಿಫಲರಾದರು. ಕೊನೆಗೆ ಅಲ್ಲಿಂದ ಬೆಂಗಳೂರು ಉತ್ತರಕ್ಕೆ ಅವರನ್ನು ಕಳುಹಿಸಲಾಯಿತು. ಅದೃಷ್ಟ ಇತ್ತು. ಕೇಂದ್ರ ಸಚಿವರಾದರು. ಆದರೆ ಏನೋ ಮಾಡಲು ಹೋಗಿ ಮೋದಿ ಕೆಂಗೆಣ್ಣಿಗೆ ಗುರಿಯಾಗಿ ಏನೂ ಹೆಸರಿಲ್ಲದ ಖಾತೆಗೆ ವರ್ಗವಾದರು. ಕೊನೆಗೆ ಅಲ್ಲಿಯೂ ಉಳಿಸದೇ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ಇಷ್ಟು ವಿಫಲ ಯಾತ್ರೆಯ ನಡುವೆ ಯಡಿಯೂರಪ್ಪನವರ ಕೃಪಾಕಟಾಕ್ಷ ಇದ್ದ ಕಾರಣ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ತಮ್ಮ ಪಾದುಕೆಯನ್ನು ಸಿಂಹಾಸನದಲ್ಲಿ ಇಟ್ಟು ಪೂಜಿಸಲು ಒಪ್ಪಿಗೆ ಕೊಟ್ಟಿದ್ದೇ ಡಿವಿಗೆ. ಅವರ ನಂಬಿಕಸ್ಥರಾಗಿದ್ದ ಕಾರಣ ಡಿವಿ ಊಹಿಸದೇ ಸಿಎಂ ಆದರು. ಆದರೂ ಅಲ್ಲಿಯೂ ವಿಫಲರಾಗಿ ಕೊನೆಗೆ ಜಗದೀಶ್ ಶೆಟ್ಟರ್ ಅವರಿಗೆ ಬಿಟ್ಟುಕೊಡಬೇಕಾಯಿತು. ಹೀಗೆ ಎಷ್ಟೇ ವಿಫಲತೆ ಕಾಣುತ್ತಿದ್ದರೂ ಡಿವಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಅಧಿಕಾರ ಅನುಭವಿಸಿದರು. ಒಬ್ಬ ವಕೀಲನಾಗಿ ಗಳಿಸಲಾಗದಿದ್ದಷ್ಟು ಆಸ್ತಿ, ಪಾಸ್ತಿ ಹೊಂದಿ ಎಲ್ಲದರಲ್ಲಿಯೂ ಬಲಿಷ್ಟರಾದರು. ಸ್ವಂತಕ್ಕೆ ಸ್ವಲ್ವ, ಸಮಾಜಕ್ಕೆ ಸರ್ವಸ್ವ ಎನ್ನುವ ಸಂಘದ ಸಿದ್ಧಾಂತದ ಹಿನ್ನಲೆಯಿಂದ ಬಂದ ಡಿವಿ ಸಮಾಜಕ್ಕೆ ಏನು ಮಾಡಿದರೋ, ತಮ್ಮ ಅದೃಷ್ಟದ ಹಣೆಬರಹದಿಂದ ತಮಗೆ ಎಲ್ಲವನ್ನು ಮಾಡಿದರು. ನೇತ್ರಾವತಿ ನದಿ ತಿರುವು ಯೋಜನೆಯಿಂದ ಹೋದ ಮಾನ ಕೊನೆಗೂ ಸಿಗದೇ ರಾಜಕೀಯದ ಕಣದಿಂದ ಇಳಿಯುತ್ತಿದ್ದಾರೆ!!
Leave A Reply