ಗಂಡ ಬಿಟ್ಟರೂ ತಾಳಿ ತೆಗೆಯದ ಹೆಣ್ಣುಮಕ್ಕಳಿವೆ!
ನೇರವಾಗಿ ವಿಷಯಕ್ಕೆ ಬರುವುದೇ ಆದರೆ ಯುಪಿಎಸ್ ಸಿ ಅಥವಾ ಯಾವುದೇ ಪರೀಕ್ಷೆ ಆಗಲಿ, ತೀರಾ ಮಂಗಳಸೂತ್ರ, ಕರಿಮಣಿ ಅಥವಾ ಕಾಲುಂಗುರ ಹೊರಗೆ ತೆಗೆದಿಟ್ಟು ಪರೀಕ್ಷಾ ಕೊಠಡಿಗೆ ಹೋಗಿ ಎನ್ನುವುದು ಶುದ್ಧ ಅವಿವೇಕಿತನ. ಪಾಕಿಸ್ತಾನದಲ್ಲಿ ಬೆರಳೆಣಿಕೆಯ ಶೇಕಡಾದಷ್ಟು ಇರುವ ಹಿಂದೂಗಳು ಈ ಪರಿಸ್ಥಿತಿ ಅನುಭವಿಸುತ್ತಿದ್ದರೆ ಅದು ವಿಶೇಷ ಅಲ್ಲ ಎಂದು ಅಂದುಕೊಂಡು ಬಿಡಬಹುದಿತ್ತು. ಆದರೆ ತೀರಾ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಇದನ್ನು ಅನುಭವಿಸುತ್ತಾರೆ ಎಂದರೆ ಅದಕ್ಕಿಂತ ನಾಚಿಕೆ ಬೇರೆ ಇದೆಯಾ? ಒಂದು ವೇಳೆ ಕೇರಳವೋ, ಪಶ್ಚಿಮ ಬಂಗಾಲವೋ ಆಗಿದ್ದರೆ ಅಲ್ಲಿನ ಹೆಣ್ಣು ಮಕ್ಕಳ ಗ್ರಹಚಾರ ಎನ್ನಬಹುದಿತ್ತು. ಯಾಕೆಂದರೆ ಅವರು ಅಂತವರನ್ನೇ ಆರಿಸಿರುವುದರಿಂದ ಬೇರೆ ಆಯ್ಕೆ ಕೂಡ ಅವರಿಗೆ ಇರುವುದಿಲ್ಲ. ಆದರೆ ಕರ್ನಾಟಕದಲ್ಲಿ ಅಷ್ಟು ಬೇಗ ಕಾಲ ಕೆಟ್ಟುಹೋಯಿತಾ ಎಂದು ಅನಿಸದೇ ಇರುವುದಿಲ್ಲ. ಮಹಿಳೆಯರಿಗೆ ಫ್ರೀ ಬಸ್ ವ್ಯವಸ್ಥೆ ಮಾಡಿ ಬೇರೆ ಏನು ಬೇಕಾದರೂ ಕಿರುಕುಳ ಕೊಡಬಹುದು ಎಂದು ಯೋಚಿಸಿದರೆ ಅದಕ್ಕೆ ತಕ್ಕುದಾಗಿರುವ ಉತ್ತರವನ್ನು ಮಹಿಳೆಯರೇ ಕೊಡುತ್ತಾರೆ.
ಗಂಡ ಬಿಟ್ಟರೂ ತಾಳಿ ತೆಗೆಯದ ಹೆಣ್ಣುಮಕ್ಕಳಿವೆ!
ಯಾಕೆಂದರೆ ಸನಾತನ ಧರ್ಮದಲ್ಲಿ ಮಹಿಳೆ ಯಾವ ದು:ಖವನ್ನು ಸಹಿಸಿಕೊಂಡರೂ ಇರುತ್ತಾಳೆ. ಆದರೆ ಗಂಡ ಬದುಕಿರುವಾಗಲೇ ತಾಳಿ, ಮಂಗಳಸೂತ್ರ ತೆಗೆದಿಡಬೇಕು ಎನ್ನುವುದನ್ನು ಒಪ್ಪಲ್ಲ. ಗಂಡ ಎಂತವನಿದ್ದರೂ ಅವನನ್ನು ಸಹಿಸಿಯಾಳು, ಆದರೆ ಅವನು ಕಟ್ಟಿದ ಮಾಂಗಲ್ಯ ಕಿತ್ತು ಬದಿಗಿಟ್ಟು ಬಿಡುವಷ್ಟು ಕೆಟ್ಟ ದಿನಗಳು ನಮ್ಮಲ್ಲಿ ಬಂದಿಲ್ಲ. ಆದರೆ ಈಗ ಅದನ್ನು ಸರಕಾರವೇ ನಿಂತು ಮಾಡಿಸುತ್ತಿದೆಯೇನೋ ಎನಿಸುವ ಮಟ್ಟಿಗೆ ಪರಿಸ್ಥಿತಿ ಬದಲಾಗುತ್ತಿದೆ. ಮಾಂಗಲ್ಯ ಹೊರಗಿಟ್ಟು ಪರೀಕ್ಷಾ ಕೊಠಡಿಗೆ ಬರಬೇಕು ಎನ್ನುವ ನಿಯಮ ಎಲ್ಲಿದೆ ಎನ್ನುವುದನ್ನು ಮೊದಲು ಸರಕಾರದ ಪರವಾಗಿ ಯಾರಾದರೂ ಹೇಳಬೇಕು. ಯಾಕೆಂದರೆ ಹಿಜಾಬ್ ತೆಗೆದು ಕಾಲೇಜಿನ ಕೊಠಡಿಗೆ ಬರಲು ಅಭ್ಯಂತರವಿಲ್ಲ ಎನ್ನುವುದು ಕಾಂಗ್ರೆಸ್ ನಿಲುವು. ಹಾಗಿದ್ದ ಮೇಲೆ ಹಿಜಾಬಿಗಿಂತ ಕಿವಿಯೋಲೆ, ಮಾಂಗಲ್ಯ, ಕಾಲುಂಗುರ ಡೇಂಜರಾ. ಕಿವಿಯೋಲೆ ತೆಗೆಯಲು ಕಷ್ಟವಾಗಿ ಹೆಣ್ಣುಮಕ್ಕಳು ನೋವು ಅನುಭವಿಸಿ ಬಲವಂತವಾಗಿ ತೆಗೆಸುತ್ತಿರುವ ಕರಾಳ ದಿನಗಳು ಕರ್ನಾಟಕದಲ್ಲಿ ಈಗ ನೋಡಲು ಸಿಗುತ್ತಿದೆ. ಅಷ್ಟಕ್ಕೂ ಇವೆಲ್ಲವನ್ನು ಹಾಕಿ ಚೀಟಿಂಗ್ ಮಾಡಲು ಆಗುತ್ತಾ ಎನ್ನುವುದನ್ನು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಹೇಳಬೇಕು. ಯಾಕೆಂದರೆ ಎಲ್ಲವನ್ನು ದುರ್ಬಿನು ಹಾಕಿ ನೋಡಿ ಒಳಗೆ ಬಿಡುವುದಾದರೆ ಒಳಗೆ ಲೆಕ್ಚರರ್ ಯಾಕೆ?
ಇನ್ನು ಯಾವುದರಲ್ಲಿ ನಕಲು ಆಗುತ್ತೆ, ಯಾವುದರಿಂದ ಆಗಲ್ಲ ಎನ್ನುವುದು ಹೊರಗೆ ಚೆಕಿಂಗ್ ಗಾಗಿ ನಿಂತಿರುವ ಸೆಕ್ಯೂರಿಟಿಯವರಿಗೆ ಗೊತ್ತಾಗಬೇಕು. ಅಂತವರನ್ನು ಅಲ್ಲಿ ನಿಲ್ಲಿಸಬೇಕು. ಇದೆಲ್ಲವನ್ನು ಬಿಟ್ಟು ಹೆಣ್ಣುಮಕ್ಕಳಿಂದ ಇದೆಲ್ಲವನ್ನು ತೆಗೆಸಿ ಅವರನ್ನು ಅಳಿಸಿ ಒಳಗೆ ಬಿಟ್ಟರೆ ಅವರು ಯಾವ ನಿರಾಳ ಮನಸ್ಥಿತಿಯಲ್ಲಿ ಪರೀಕ್ಷೆ ಬರೆದಾರು? ಅವರಿಗೆ ಹೇಗೆ ಉತ್ತಮ ಅಂಕಗಳು ದೊರೆತಾವು ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು.
ಇನ್ನು ಈ ಬಗ್ಗೆ ಧ್ವನಿ ಎತ್ತಬೇಕಾದವರು ಯಾರು?
ನಮ್ಮ ಜಾತಿಯವರನ್ನು ಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡಿ, ಮೀಸಲಾತಿ ಕೊಡಿ ಎಂದು ಆಕಾಶ, ಪಾತಾಳ ಒಂದು ಮಾಡುವ ಕೆಲವು ಮಠಾಧೀಶರು ನಮ್ಮ ಧರ್ಮದ ಮೇಲೆ, ಹೆಣ್ಣುಮಕ್ಕಳ ನಂಬಿಕೆಯ ಮೇಲೆ, ಸನಾತನ ಸಂಸ್ಕೃತಿಯ ಅಸ್ಮಿತೆಯ ಮೇಲೆ ಹೊಡೆತ ಬೀಳುವಾಗ ಧ್ವನಿ ಎತ್ತದಿದ್ದರೆ ಹೇಗೆ? ಅದು ಅವರ ಕರ್ತವ್ಯವಲ್ಲವೇ? ಅವರು ಯಾವುದರ ಉದ್ಧಾರಕ್ಕಾಗಿ ಆಯಾ ಪೀಠಗಳ ಮೇಲೆ ಕುಳಿತಿದ್ದಾರೋ ಅದು ಈಡೇರಬೇಕು. ಸ್ವಾಮಿಗಳು, ಸಂತರು ಯಾವ ಉದ್ದೇಶಕ್ಕೆ ಮುಂದಾಗಬೇಕೋ ಅದನ್ನೇ ಮಾಡದಿದ್ದರೆ ಆಡಳಿದಲ್ಲಿ ಇರುವ ಉಳಿದವರು ತಮಗೆ ಖುಷಿ ಬಂದಂತೆ ನಿಯಮ ತರುತ್ತಾರೆ.
ಇನ್ನು ಇದರೊಂದಿಗೆ ಸಂಘಟನೆಗಳು ಕೂಡ ಕಾನೂನು ಮಾರ್ಗ ಅನುಸರಿಸಬೇಕು. ಪ್ರತಿಭಟನೆ, ಸುದ್ದಿಗೋಷ್ಟಿ ಎಲ್ಲವೂ ಇರಲಿ, ಅವು ಜನಾಭಿಪ್ರಾಯ ರೂಪಿಸಲು ಬೇಕು. ಆದರೆ ವಿಷಯ ದಡ ಕೂಡ ಮುಟ್ಟಬೇಕಲ್ಲ. ಅದಕ್ಕಾಗಿ ಕಾನೂನು ಮೆಟ್ಟಿಲು ಕೂಡ ಹತ್ತಬೇಕು. ಇಲ್ಲದಿದ್ದರೆ ಯಾವುದೇ ಹೋರಾಟ ದಡ ಮುಟ್ಟುವುದಿಲ್ಲ. ಒಟ್ಟಿನಲ್ಲಿ ತಾಳಿಗೂ ಕೈ ಹಾಕುವ ಕ್ರಮಕ್ಕೆ ಎಂತಹ ಭಂಡ ಸರಕಾರ ಕೂಡ ಮುಂದಾಗಬಾರದು. ಹೆಸರಿನಲ್ಲಿ ದೇವರನ್ನು ಇಟ್ಟುಕೊಂಡರೆ ಆಗಲ್ಲ, ಒಂದಿಷ್ಟು ಅದಕ್ಕೆ ಸರಿಯಾಗಿ ನಡೆಯಬೇಕಲ್ಲ!
Leave A Reply