ನಂಬಿಕೆ ಮೇಲೆ ಜಗತ್ತು ನಿಂತಿದೆ!
ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಅನಗತ್ಯ ಗೊಂದಲವನ್ನು ಸೃಷ್ಟಿಸಿದ್ದಾರೆ. ಇದೇ ಮಾತನ್ನು ಜಾಕೀರ್ ನೈಕ್ ಹೇಳಿದರೆ ಆತ ಮುಸ್ಲಿಮರ ಖುಷಿಗಾಗಿ ಹೇಳಿದ್ದಾನೆ ಎಂದು ಖಂಡಿತವಾಗಿ ಅಂದುಕೊಳ್ಳಬಹುದು. ಯಾಕೆಂದರೆ ಹಿಂದೂ ದೇವರುಗಳನ್ನು ಟೀಕಿಸಿ, ಹಿಂದೂತ್ವವನ್ನು ಹಂಗಿಸುವುದೇ ಆತನ ಕಾಯಕ. ಇದರಿಂದ ಹಿಂದೂಗಳ ಭಾವನೆಗೆ ದಕ್ಕೆ ಬರುತ್ತೆ ಎಂದು ಗೊತ್ತಿಲ್ಲದಷ್ಟು ಅಮಾಯಕನಲ್ಲ ಜಾಕೀರ್ ನೈಕ್. ಅವನಿಗೆ ಅದು ಹೊಟ್ಟೆಪಾಡು. ಅವನ ಮಾತುಗಳನ್ನು ತಮ್ಮ ಸ್ವಾಮೀಜಿಯವರ ಬಳಿ ಹೇಳಿ ಬೇಸರ ತೋಡಿಕೊಂಡವರು ತುಂಬಾ ಜನ ಇದ್ದಾರೆ. ಆದರೆ ತೀರಾ ಹಿಂದೂ ಸ್ವಾಮೀಜಿಗಳೇ ನಮ್ಮ ದೇವರ ಅಸ್ತಿತ್ವದ ಬಗ್ಗೆ ಮಾತನಾಡಿದರೆ ನಾವು ಎಲ್ಲಿಗೆ ಹೋಗೋದು.
ಸಾಣೀಹಳ್ಳಿ ಶ್ರೀ ಎಂದೇ ಪ್ರಖ್ಯಾತರಾಗಿರುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಭಕ್ತರ ಭಾವನೆಗೆ ಘಾಸಿ ಮಾಡಿದ್ದಾರೆ. ಒಂದು ವೇಳೆ ಸಾಣೀಹಳ್ಳಿ ಶ್ರೀಗಳು ಗಣಪತಿ ದೇವರನ್ನು ನಂಬದೇ ಇದ್ದರೆ ಅದು ಅವರ ವೈಯಕ್ತಿಕ ವಿಚಾರ. ಅವರು ಯಾವುದೇ ಗಣೇಶೋತ್ಸವಕ್ಕೆ ಹೋಗದೇ ಇದ್ದರೆ ಅದು ಅವರ ಇಷ್ಟ. ಹಾಗಂತ ಗಣಪತಿ ದೇವರನ್ನು ಪೂಜಿಸುವುದು ಅಥವಾ ಗಣೇಶೋತ್ಸವ ನಡೆಸುವುದು ಸರಿಯಲ್ಲ, ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಏನು ಸಾಧನೆ ಮಾಡಿದಂತೆ ಆಯಿತು. ಹಾಗಂತ ಇವರು ಶಿವ ದೇವರನ್ನು ನಂಬುತ್ತಾರೆ ಆದರೆ ಗಣಪತಿ ಯಾಕೆ ಬೇಡಾ ಎನ್ನುವುದು ಅವರೇ ಹೇಳಬೇಕು.
ಶಂಖದಿಂದ ಬಂದ ತೀರ್ಥ ಅಲ್ಲ!
ದೇವರು ಎನ್ನುವುದು ನಂಬಿಕೆ. ನಾವು ಆ ನಂಬಿಕೆಯ ಮೇಲೆಯೇ ಜೀವಿಸಿರುವುದು. ಹಾಗೆ ನೋಡಿದರೆ ತಂದೆ ಯಾರು ಎಂದು ತಾಯಿ ತೋರಿಸುತ್ತಾರೆಯೋ ಅವರೇ ನಮ್ಮ ತಂದೆ ಎನ್ನುವುದು ಇಡೀ ಜಗತ್ತು ಒಪ್ಪಿರುವ ನಂಬಿಕೆ. ಈಗ ಸ್ವಾಮೀಜಿಯವರದ್ದೇ ಉದಾಹರಣೆಯನ್ನು ತೆಗೆದುಕೊಂಡರೂ ಅವರು ಕೂಡ ಮೇಲಿನಿಂದ ಅವತರಿಸಿದವರಲ್ಲ. ಅವರು ಸ್ವರ್ಗದಲ್ಲಿ ಯಾವೆಲ್ಲಾ ದೇವರು ಇದ್ದಾರೆ ಎಂದು ನೋಡಿ ಪಟ್ಟಿ ಮಾಡಿ ಕೆಳಗೆ ಇಳಿದವರಲ್ಲ. ಹಾಗಿರುವಾಗ ಗಣಪತಿ ನಮ್ಮ ದೇವರು ಅಲ್ಲ ಎಂದು ಹೇಳಲು ಯಾರಿಗೂ ಅಧಿಕಾರವಿಲ್ಲ. ಈಗ ಸಾಣೇಹಳ್ಳಿ ಶ್ರೀಗಳು ಯಾರದ್ದೋ ಪುಸ್ತಕಗಳನ್ನು ಉದಾಹರಿಸಿಕೊಂಡು ಸಮಜಾಯಿಷಿಕೆ ಕೊಟ್ಟಿರಬಹುದು. ಹಾಗಂತ ಅವರು ಹೇಳಿದ ಕೂಡಲೇ ಶಂಖದಿಂದ ಬಂದ ತೀರ್ಥ ಎಂದು ಒಪ್ಪಿಕೊಳ್ಳಬೇಕಿಲ್ಲ.
ನಂಬಿಕೆ ಮೇಲೆ ಜಗತ್ತು ನಿಂತಿದೆ!
ಇನ್ನು ಶ್ರೀಗಳು ತಾವು ಲಿಂಗಾಯತ ಸಮುದಾಯಕ್ಕೆ ಅದನ್ನು ಹೇಳಿದ್ದು ಎಂದು ವಿಷಯವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಹೆಚ್ಚಿನ ಸ್ವಾಮೀಜಿಗಳು ತಾವು ಹಿಂದೂ ಸಂಸ್ಕೃತಿಯ ರಕ್ಷಣೆ, ಉದ್ಧಾರಕ್ಕೆ ಶ್ರಮಿಸುವುದನ್ನು ಬಿಟ್ಟು ಜಾತಿಗೆ ಸೀಮಿತರಾಗುತ್ತಿರುವುದೇ ಇಂತಹ ಹೇಳಿಕೆಗಳಿಗೆ ಕಾರಣ. ಗಣಪತಿ ದೇವರನ್ನು ಸ್ತುತಿಸದೇ ಯಾವುದೇ ಶುಭ ಸಮಾರಂಭವೂ ಆರಂಭವಾಗುವುದಿಲ್ಲ. ಹಾಗಿರುವಾಗ ಜಾತಿಗಳಲ್ಲಿ ಇಂತಹ ಗೊಂದಲ ಏರ್ಪಡಿಸುವುದು ಸರಿಯಲ್ಲ. ಇನ್ನು ಕಾಂಗ್ರೆಸ್ ಸರಕಾರ ಬಂದ ಬಳಿಕ ಸಿದ್ಧರಾಮಯ್ಯನವರನ್ನು ಓಲೈಸಿ ಪ್ರಶಸ್ತಿ ಪಡೆಯುವ ಹಂಬಲ ಕೆಲವರಲ್ಲಿ ಇರಬಹುದು. ಯಾಕೆಂದರೆ ಸಾಣೆಹಳ್ಳಿ ಶ್ರೀಗಳ ಹೇಳಿಕೆಯನ್ನು ಬೆಂಬಲಿಸಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.!!
Leave A Reply