ನಿಮ್ಮಲ್ಲಿರುವ 200 ರೂ ನೋಟ್ ಜೆರಾಕ್ಸಾ, ಒರಿಜಿನಲಾ ಚೆಕ್ ಮಾಡಿ!

ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ನಕಲಿ ಕರೆನ್ಸಿ ನೋಟುಗಳು ಹೆಚ್ಚೆಚ್ಚು ಪತ್ತೆಯಾಗುತ್ತಿರುವುದು ಅಲ್ಲಿನ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅಸಲಿ ನೋಟುಗಳ ನಡುವೆ ಕೆಲವು ನಕಲಿ ನೋಟುಗಳನ್ನು ಇಟ್ಟು ಯಾರಾದರೂ ನೀಡಿದರೆ ಗಡಿಬಿಡಿಯಲ್ಲಿ ಅದು ಗೊತ್ತೇ ಆಗುವುದಿಲ್ಲ, ನಂತರ ಬ್ಯಾಂಕಿನಲ್ಲಿಯೇ ಅದು ನಕಲಿ ಎಂದು ಗೊತ್ತಾಗುತ್ತೆ. ಇದರಿಂದ ಸಾಕಷ್ಟು ನಷ್ಟ ಸಂಭವಿಸುತ್ತದೆ ಎನ್ನುವುದು ವ್ಯಾಪಾರಿಗಳ ಅಳಲು. ವಿಶೇಷವಾಗಿ ನಗದು ರೂಪದಲ್ಲಿ ವ್ಯವಹಾರ ಮಾಡುವ ಸಣ್ಣ ವ್ಯಾಪಾರಿಗಳು ಈ ಹೊಸ ಟೆನ್ಷನ್ ಗೆ ಬಲಿಯಾಗುತ್ತಿದ್ದಾರೆ.
ಹಾಗಾದರೆ ಇದು ಹೇಗೆ ಸಾಧ್ಯ?
200 ರೂ ಮುಖಬೆಲೆಯ ನೋಟುಗಳನ್ನು ಯಾರಾದರೂ ಡೂಪ್ಲಿಕೇಟ್ ಮಾಡುತ್ತಿದ್ದಾರಾ? ಮೇಲ್ನೋಟಕ್ಕೆ ಇದು ಕಲರ್ ಝೆರಾಕ್ಸ್ ದಂಧೆ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ. ನಕಲಿ ನೋಟುಗಳನ್ನು ಕಲರ್ ಝೆರಾಕ್ಸ್ ಮೂಲಕ ತಯಾರಿಸಿ ಅಡ್ಡದಾರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಚಲಾವಣೆ ನಡೆಸುತ್ತಿರುವ ಅನುಮಾನಗಳು ಕಾಣುತ್ತಿವೆ. ನಕಲಿ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅವುಗಳ ಅಸಲಿ ಬಣ್ಣ ಬಯಲಾಗುತ್ತದೆ. ಆದರೆ ಎಲ್ಲರ ಮೇಲೆ ಡೌಟಿನಿಂದ ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಏಳೆಂಟು ಬೇರೆ ನೋಟುಗಳ ನಡುವೆ ಒಂದೆರಡು ಇಟ್ಟು ನೀಡುವಾಗ ಅತ್ತ ಅನುಮಾನ ಪಡಲು ಆಗದೇ, ಬಿಡಲು ಆಗದೇ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಎರಡೂ ನೋಟುಗಳಿಗೂ ಇರುವ ಸುಲಭದ ವ್ಯತ್ಯಾಸ ಎಂದರೆ ನಕಲಿ ನೋಟುಗಳು ತುಂಬಾ ದಿನ ಬಾಳಿಕೆ ಬರಲ್ಲ. ಅವು ಬೇಗ ಮುದ್ದೆಯಾಗುತ್ತಿವೆ. ಇದು ರಾಯಚೂರಿಗೆ ಮಾತ್ರ ಸಂಬಂಧಪಟ್ಟ ವಿಚಾರ ಆಗಿರದೇ ಈ ಬಗ್ಗೆ ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದು ತುಳುನಾಡು ನ್ಯೂಸ್ ಜನಜಾಗೃತಿಯಿಂದ ಈ ಮಾಹಿತಿ ನೀಡುತ್ತಿದೆ.
Leave A Reply