ಹಲೋ ಅಪ್ಪಾ ಸಂಭಾಷಣೆಗೆ ಮತ್ತೊಂದು ಟ್ವಿಸ್ಟ್!
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರು ಮೊನ್ನೆಯಷ್ಟೇ ಫೋನಿನಲ್ಲಿ ಮಾತನಾಡಿದ ಆಡಿಯೋ ಮತ್ತು ವಿಡಿಯೋ ಮಾಧ್ಯಮಗಳಲ್ಲಿ ಲೀಕ್ ಆಗಿ ವಿಪಕ್ಷಗಳಿಗೆ ದೊಡ್ಡ ಮಟ್ಟದ ಆಹಾರವಾಗಿತ್ತು. ಯತೀಂದ್ರ ಮಾತನಾಡುತ್ತಿದ್ದದ್ದು ಅಧಿಕಾರಿಗಳ ವರ್ಗಾವಣೆ ದಂಧೆಯ ವಿಷಯ ಎಂದು ವಿಪಕ್ಷಗಳು ಹೇಳಿದರೆ ಸಿಎಂ ಸಿದ್ಧರಾಮಯ್ಯ ಅದರಲ್ಲಿ ವರ್ಗಾವಣೆ ವಿಷಯ ಮಾತನಾಡಿದ್ದಾರಾ? ಹಣದ ವಿಷಯ ಮಾತನಾಡಿದ್ದಾರಾ? ಎಂದು ತಿರುಗೇಟು ನೀಡಿದ್ದರು.
ಯತೀಂದ್ರ ಅವರು ಮಾತನಾಡುವಾಗ ಮಹದೇವ್ ಎನ್ನುವ ಹೆಸರು ತೆಗೆದಿದ್ದು ತಾನು ಹೇಳಿದ ಪಟ್ಟಿಗೆ ಮಾತ್ರ ತಂದೆಯಿಂದ ಸಹಿ ಹಾಕಿಸಬೇಕು ಎಂದು ಮಹದೇವ್ ಅವರಿಗೆ ಖಡಕ್ ಸೂಚನೆ ನೀಡಿದ್ದರು. ಅದರಲ್ಲಿ ಯತೀಂದ್ರ ಅವರ ಬಾಯಿಂದ ವಿವೇಕಾನಂದ ಎನ್ನುವ ಹೆಸರು ಬಂದಿದ್ದು, ಅವರನ್ನು ಎಲ್ಲಿಗೆ ಎಂದು ಇವರು ಕೇಳಿರುವುದು ಕೂಡ ಮಾಧ್ಯಮಗಳ ಕ್ಯಾಮೆರಾಗಳಿಗೆ ಕೇಳಿಸಿದೆ. ಇದನ್ನೆಲ್ಲಾ ಸಾರಾಸಗಟಾಗಿ ನಿರಾಕರಿಸಿರುವ ಸಿದ್ಧರಾಮಯ್ಯನವರು ಅದೆಲ್ಲಾ ವಿಪಕ್ಷಗಳ ಕಪೋಲಕಲ್ಪಿತ ಆರೋಪ ಎಂದಿದ್ದರು.
ಆದರೆ ಈಗ ಪೊಲೀಸ್ ಇನ್ಸಪೆಕ್ಟರ್ ಗಳ ವರ್ಗಾವಣೆ ಆದೇಶ ಹೊರಬಿದ್ದಿದ್ದು ಅದರಲ್ಲಿ ವಿವೇಕಾನಂದ ಎನ್ನುವವರಿಗೆ ಮೈಸೂರು ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅವರು ಹಿಂದೆ ರಾಜ್ಯ ಗುಪ್ತವಾರ್ತೆ ವಿಭಾಗದಲ್ಲಿದ್ದರು. ಒಂದು ಕಡೆ ಕಾಂಗ್ರೆಸ್ ಯತೀಂದ್ರ ಅವರು ಸಾರ್ವಜನಿಕವಾಗಿ ಫೋನಿನಲ್ಲಿ ಮಾತನಾಡುವಾಗ ವಿವೇಕಾನಂದ ಹೆಸರು ತೆಗೆದಿರುವುದು ಮತ್ತು ತಾವು ಹೇಳಿದ ಪಟ್ಟಿಗೆ ಮಾತ್ರ ತಂದೆಯಿಂದ ಸಹಿ ತೆಗೆದುಕೊಳ್ಳಿ ಎಂದು ಸಿಎಂ ವಿಶೇಷ ಕರ್ತವ್ಯ ಅಧಿಕಾರಿಗೆ ಸೂಚಿಸಿರುವುದು ಮತ್ತು ನವೆಂಬರ್ 17 ರಂದು ಬಿಡುಗಡೆಯಾಗಿರುವ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಎನ್ನುವವರಿಗೆ ವರ್ಗಾವಣೆ ಆಗಿರುವುದನ್ನು ನೋಡುವಾಗ ಸಿಎಂ ಪುತ್ರನೇ ವರ್ಗಾವಣೆ ವಿಷಯದಲ್ಲಿ ನೇರ ಭಾಗಿಯಾಗಿದ್ದಾರಾ ಎನ್ನುವ ಅನುಮಾನಗಳು ಮತ್ತಷ್ಟು ಗಟ್ಟಿಯಾಗಿದೆ ಎಂದು ವಿಪಕ್ಷಗಳ ಮುಖಂಡರು ಮಾಧ್ಯಮಗಳಲ್ಲಿ ಹೇಳಿದ್ದಾರೆ.
Leave A Reply