ಬಂದ್ ಮಾಡಿಟ್ಟರೆ ಏನು ಲಾಭ?
ಯಾವುದೇ ಯೋಜನೆ ಸಮರ್ಪಕವಾಗಿ ನಡೆದು ಅದರ ಲಾಭ ಜನಸಾಮಾನ್ಯರಿಗೆ ಸಿಗದೇ ಇದ್ದರೆ ಅದರಿಂದ ಪ್ರಯೋಜನ ಏನು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ತಾಜಾ ಉದಾಹರಣೆ ಮಂಗಳೂರಿನ ಕದ್ರಿ ಪಾರ್ಕಿನ ಪರಿಸರದಲ್ಲಿ ಸ್ಮಾರ್ಟ್ ಸಿಟಿ ಫಂಡ್ ನಿಂದ ನಿರ್ಮಿತವಾಗಿರುವ ಅಂಗಡಿಗಳ ಸಾಲು. ಮಂಗಳೂರಿನ ಕದ್ರಿ ಪಾರ್ಕ್ ಪರಿಸರ ಅಂದಾಜು 16.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಆಧುನಿಕರಣಗೊಂಡಿದೆ. ಈ ಪರಿಸರದಲ್ಲಿ ಹಿಂದೆ ವ್ಯವಸ್ಥಿತವಾಗಿ ಮಳಿಗೆಗಳು ಇರಲಿಲ್ಲ. ಪಾರ್ಕಿಗಾಗಿ ಬರುವ ನಾಗರಿಕರಿಗೆ ಉತ್ತಮವಾದ ಪರಿಸರದಲ್ಲಿ ತಿಂಡಿ, ತಿನಿಸುಗಳು ಸಿಗಬೇಕು ಎನ್ನುವ ಕಾರಣಕ್ಕೆ 38 ಮಳಿಗೆಗಳು ಮತ್ತು 5 ಫುಡ್ ಕೋರ್ಟ್ ಗಳ ನಿರ್ಮಾಣವಾಗಿದೆ. ಈಗ ಇರುವಂತಹ ಪ್ರಶ್ನೆ ಇದೆಲ್ಲವೂ ನಿರ್ಮಾಣವಾಗಿ ಆರು ತಿಂಗಳಿಗಿಂತ ಹೆಚ್ಚು ಸಮಯ ಆದರೂ ಯಾವ ಅಂಗಡಿ ಕೂಡ ಇನ್ನು ತೆರೆದಿಲ್ಲ. ಕಾರಣ ಯಾರಿಗೆ ಕೊಡುವುದು ಎನ್ನುವ ಗೊಂದಲ.
ಒಬ್ಬರಿಗೆ ಕೊಟ್ಟರೆ ಬೆಟರ್ ಅಥವಾ ಹಂಚುವುದಾ?
ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಹೇಗೆ ನಿಯಮ ರೂಪಿತವಾಗಿತ್ತು ಎಂದರೆ ಅಷ್ಟೂ ಮಳಿಗೆ, ಫುಡ್ ಕೋರ್ಟ್ ನಿರ್ವಹಣೆಯನ್ನು ಒಬ್ಬನೇ ವ್ಯಕ್ತಿಗೆ ಸಂಪೂರ್ಣ ಜವಾಬ್ದಾರಿ ನೀಡುವುದು. ಆತ ಆ ಅಂಗಡಿಗಳನ್ನು ಬಾಡಿಗೆಗೆ ನೀಡುವುದು, ಅಲ್ಲಿನ ಪರಿಸರವನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು, ಬೀದಿ ದೀಪ ನಿರ್ವಹಣೆ ಮಾಡುವುದು, ಒಟ್ಟು ಇಡೀ ಪರಿಸರವನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಒಬ್ಬರಿಗೆ ನೀಡುವುದು. ನಂತರ ಅವನು ಪಾಲಿಕೆಗೆ ವರ್ಷಕ್ಕೆ ಇಂತಿಂಷ್ಟು ಅಮೌಂಟ್ ಕಟ್ಟುವುದು ಎನ್ನುವ ನಿಯಮ ರೂಪಿತವಾಗಿತ್ತು. ಹೀಗೆ ಮಾಡಿ ಎಲ್ಲವನ್ನು ಒಬ್ಬರಿಗೆ ನೀಡುವುದರಿಂದ ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತದೆ. ಏನೂ ತೊಂದರೆ ಆದರೆ ಒಬ್ಬರೇ ಜವಾಬ್ದಾರಾಗುತ್ತಾರೆ ಎನ್ನುವುದು ಇದರ ಉದ್ದೇಶವಾಗಿತ್ತು. ಸಿಂಗಲ್ ಪಾಯಿಂಟ್ ನಲ್ಲಿ ಕೆಲಸ ಸುಸೂತ್ರವಾಗಿ ನಡೆಯುತ್ತದೆ ಎನ್ನುವ ಐಡಿಯಾ ಇತ್ತು. ಹಾಗೆ ಇಲ್ಲಿ ಟೆಂಡರ್ ಕರೆದಾಗ ಒಬ್ಬನೇ ವ್ಯಕ್ತಿ ಬಿಡ್ ಮಾಡಿದ್ದರು.
ಬಂದ್ ಮಾಡಿಟ್ಟರೆ ಏನು ಲಾಭ?
ಯಾವುದೇ ಒಂದು ಯೋಜನೆಗೆ ಟೆಂಡರ್ ಕರೆಯುವಾಗ ಒಬ್ಬನೇ ಬಿಡ್ ಮಾಡಿದರೆ ಆಗ ಕೆಲವು ಸಂದರ್ಭಗಳಲ್ಲಿ ಪಾಲಿಕೆಯವರು ಈ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಅಲ್ಲಿ ಓಕೆ ಮಾಡಿಸಿಕೊಂಡು ಮುಂದುವರೆಯುತ್ತಾರೆ. ಆದರೆ ಈ ವಿಷಯದಲ್ಲಿ ಹಾಗೆ ಮಾಡಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಮ್ಮತಿಸಲಿಲ್ಲ. ಅದರ ನಂತರ ಎರಡನೇ ಬಾರಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯಿತು. ಆಗ ರಾಜ್ಯದಲ್ಲಿ ಸರಕಾರ ಬದಲಾಯಿತು. ಆಗ ಒಬ್ಬನೇ ವ್ಯಕ್ತಿ ಟೆಂಡರ್ ನೀಡುವುದು ಬೇಡಾ. ಬೇರೆ ಬೇರೆ ಕ್ಯಾಟಗರಿ ಮಾಡಿ ಹಂಚಿಬಿಡೋಣ ಎನ್ನುವ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ರಾಜಕೀಯ ಕಾರಣಗಳಿಂದ ಕಳೆದ ಆರು ತಿಂಗಳುಗಳಿಗಿಂತಲೂ ಹೆಚ್ಚು ಅವಧಿಯಿಂದ ಈ ಅಂಗಡಿಗಳು ಬಂದ್ ಬಿದ್ದಿವೆ. ನಿಯಮಗಳ ಪ್ರಕಾರ ಇಂತಹ ಮಳಿಗೆಗಳನ್ನು ಮೀಸಲಾತಿಯ ಆಧಾರದ ಮೇಲೆ ಕೊಡುವ ಕ್ರಮ ಇಲ್ಲ. ಆದರೆ ಅನಗತ್ಯವಾಗಿ ರಾಜಕೀಯ ನಡೆಯುತ್ತಿರುವುದರಿಂದ ಅತ್ತ ಅಂಗಡಿಗಳು ಒಬ್ಬರಿಗೂ ಸಿಗದೇ ಆರು ತಿಂಗಳುಗಳಿಂದ ಮುಚ್ಚಿದೆ. ಪಾಲಿಕೆಗೆ ಬರಬೇಕಾದ ಆದಾಯ ವ್ಯರ್ಥವಾಗುತ್ತಿದೆ. ಇದಕ್ಕೆ ಪರಿಹಾರ ಇಲ್ವಾ? ಕೋಟಿ ಖರ್ಚು ಮಾಡಿ ಕಟ್ಟಿರುವುದು ಬಂದ್ ಮಾಡಿ ಇಡಲಾ ಎಂದು ನಾಗರಿಕರು ಕೇಳುತ್ತಿದ್ದಾರೆ.
Leave A Reply