ಇನ್ಮುಂದೆ ವೆಯ್ಟಿಂಗ್ ಲಿಸ್ಟ್ ಇರದಂತೆ ರೈಲ್ವೆ ಇಲಾಖೆ ಪ್ಲಾನ್!
ಮುಂದಿನ 4 -5 ವರ್ಷಗಳಲ್ಲಿ ವೆಯ್ಟಿಂಗ್ ಲಿಸ್ಟ್ ಇರದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆ ಯೋಜನೆ ಹಾಕಿಕೊಂಡಿದೆ. ಎಲ್ಲರಿಗೂ ಕನ್ಫರ್ಮ್ ಟಿಕೆಟ್ ಕೊಡಲು ಏನು ಮಾಡಬೇಕೋ ಅದನ್ನು ಮಾಡುವ ಪ್ಲಾನ್ ನಡೆಯುತ್ತಿದೆ. ಭಾರತದಲ್ಲಿ ರೈಲ್ವೆಯಲ್ಲಿ ಹೊಸ ಕ್ರಾಂತಿ ಶುರುವಾಗಿದೆ. ರೈಲುಗಳ ವೇಗ ಮತ್ತು ಹಳಿಗಳನ್ನು ಸುಧಾರಿಸುವ ಯೋಜನೆಗಳು ಚಾಲ್ತಿಯಲ್ಲಿವೆ. ರೈಲ್ವೆ ಜಾಲ ವಿಸ್ತರಣೆಗಾಗಿ 5 ವರ್ಷಗಳ ಯೋಜನೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಭಾರತೀಯ ರೈಲ್ವೆ 5000 ಹೊಸ ಬೋಗಿಗಳನ್ನು ತಯಾರಿಸುತ್ತಿದೆ. ರೈಲ್ವೆ ಪ್ರಯಾಣಿಕರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ 4-5 ವರ್ಷಗಳಲ್ಲಿ ದೇಶಾದ್ಯಂತ 3000 ಹೊಸ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲ್ವೆಯು ಪ್ರತಿ ವರ್ಷ ಸುಮಾರು 250 ಹೊಸ ರೈಲುಗಳನ್ನು ಓಡಿಸುವ ಚಿಂತನೆ ನಡೆದಿದೆ. ಇದರೊಂದಿಗೆ ವಂದೇ ಭಾರತ್ ಹೊಸ ರೈಲುಗಳನ್ನು ಕೂಡ ಸೇರಿಸಿದರೆ ಆ ಸಂಖ್ಯೆ ಹೆಚ್ಚಾಗುತ್ತದೆ. ಮುಂಬರುವ ದಿನಗಳಲ್ಲಿ 400 – 450 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ಸಿಗಲಿದೆ. ಹೈಸ್ಪೀಡ್ ರೈಲಿನ ಕನಸನ್ನು ಈಡೇರಿಸುವಲ್ಲಿ ವಂದೇ ಭಾರತ್ ರೈಲು ಯಶಸ್ವಿಯಾಗಿದೆ. ಈ ರೈಲುಗಳನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಯೋಜನೆ ಹಾಕಿಕೊಂಡಿದೆ.
ವಾರ್ಷಿಕವಾಗಿ 800 ಕೋಟಿ ಪ್ರಯಾಣಿಕರ ಸಂಖ್ಯೆಯನ್ನು 1000 ಕೋಟಿಗೆ ಏರಿಸುವ ಗುರಿಯನ್ನು ಇಲಾಖೆ ಹೊಂದಿದೆ. ಪ್ರಸ್ತುತ ನಿತ್ಯ 10,748 ರೈಲುಗಳು ದೇಶದಲ್ಲಿ ಸಂಚರಿಸುತ್ತಿದ್ದು, 13000ಕ್ಕೆ ಏರಿಸಲು ಇಲಾಖೆ ಗುರಿ ಇಟ್ಟುಕೊಂಡಿದೆ. ವಂದೇ ಭಾರತ್ ರೈಲುಗಳಲ್ಲಿ ವೇಗವರ್ಧನೆ ಮತ್ತು ಬ್ರೇಕಿಂಗ್ ತಂತ್ರಜ್ಞಾನವು ಸಾಮಾನ್ಯ ರೈಲುಗಳಿಗಿಂತ ನಾಲ್ಕು ಪಟ್ಟು ಉತ್ತಮವಾಗಿದೆ. ಇದರಿಂದ ಪ್ರಯಾಣದ ಸಮಯ ಕೂಡ ಕಡಿಮೆಯಾಗಿದೆ. ಹೊಸ ತಂತ್ರಜ್ಞಾನವನ್ನು ರೈಲುಗಳಲ್ಲಿಯೂ ಅಳವಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Leave A Reply