ಮೋದಿಯೇ ಕಾರಣ ಎಲ್ಲದಕ್ಕೂ!?
ಭಾರತದ 11 ಜನರ ಕ್ರಿಕೆಟ್ ತಂಡ ಉಳಿದ ಹತ್ತು ತಂಡಗಳನ್ನು ಸೋಲಿಸಿ ಫೈನಲ್ ಪಂದ್ಯಕ್ಕೆ ಬಂದಿತ್ತು. ಅಷ್ಟೇ ಯಾಕೆ, ಇದೇ ಕ್ರೀಡಾಕೂಟದ ಲೀಗ್ ಹಂತದಲ್ಲಿ ಅಕ್ಟೋಬರ್ 8 ರಂದು ಇದೇ ಆಸ್ಟ್ರೇಲಿಯಾವನ್ನು ಭಾರತ ತಂಡ ಆರು ವಿಕೆಟ್ ನಿಂದ ಸೋಲಿಸಿತ್ತು. ಈಗ ಫೈನಲ್ ಪಂದ್ಯದಲ್ಲಿ ಅದೇ ಆಸ್ಟ್ರೇಲಿಯಾ ಆರು ವಿಕೆಟ್ ಗಳಿಂದ ಭಾರತ ತಂಡವನ್ನು ಸೋಲಿಸಿದೆ. ಅದು ಲೀಗ್, ಇದು ಫೈನಲ್, ವ್ಯತ್ಯಾಸ ಇಷ್ಟೇ. ಇಲ್ಲಿ ಯಾವ ದಿನ ಏನು ಬೇಕಾದರೂ ಆಗಬಹುದು. ಯಾಕೆಂದರೆ ಅದು ಕ್ರಿಕೆಟ್.
ಅನಿಶ್ಚಿತತೆಯ ಆಟ ಯಾವುದಾದರೂ ಇದ್ದರೆ ಅದಕ್ಕೆ ಪರ್ಯಾಯ ಹೆಸರೇ ಕ್ರಿಕೆಟ್. ಕ್ರಿಕೆಟನ್ನು ಅದೇ ದೃಷ್ಟಿಯಿಂದ ನೋಡಬೇಕು. ಒಂದೂವರೆ ತಿಂಗಳ ಹಿಂದೆ ನಾವು ಆಸ್ಟ್ರೇಲಿಯಾವನ್ನು ಸೋಲಿಸಿದಾಗ ಇಡೀ ದೇಶ ಖುಷಿಪಟ್ಟಿತ್ತು. ಈಗ ಫೈನಲ್ ನಲ್ಲಿ ಸೋತಾಗ ಇಡೀ ದೇಶಕ್ಕೆ ನೋವಾಗಿದೆ, ನಿಜ. ಆದರೆ ಭಾರತ ತಂಡ ಸೋತಿರುವುದರಲ್ಲಿ ಕೆಲವರಿಗೆ ಖುಷಿಯಾಗಿದೆ. ಅವರು ಖುಷಿ ಪಡುತ್ತಿರುವುದಕ್ಕೆ ಕಾರಣ ಅದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂ. ಅಲ್ಲಿ ಆಟ ನೋಡಲು ದೇಶದ ಪ್ರಧಾನಿ ಬಂದಿದ್ರು. ಅಮಿತ್ ಶಾ ಬಂದಿದ್ರು. ಇನ್ನು ಅಮಿತ್ ಶಾ ಮಗ ಜಯ ಶಾ ಭಾರತ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ. ಇದೆಲ್ಲದ ಕಾರಣದಿಂದ ಭಾರತ ಸೋತಿರುವುದಕ್ಕೆ ಕೆಲವು ವಿಘ್ನಸಂತೋಷಿಗಳಿಗೆ ಆನಂದವೋ ಆನಂದ.
ಕ್ರಿಕೆಟಿನ ಗೆಲುವಿಗೂ ಪ್ರಧಾನಿಗೂ ಏನು ಸಂಬಂಧ?
ಭಾರತ ತಂಡ ಸೋತಿರುವುದಕ್ಕೂ ಮೋದಿ, ಶಾಗೂ ಸಂಬಂಧವೇ ಇಲ್ಲ. ಇಬ್ಬರೂ ತಮ್ಮ ತವರು ರಾಜ್ಯದಲ್ಲಿ ನಡೆಯುವ ಪಂದ್ಯವನ್ನು ನೋಡಲು ಬಂದಿರುವುದು ಏನೂ ದೊಡ್ಡ ಟೀಕೆಯ ವಿಷಯವಲ್ಲ. ಇನ್ನು ಅದೊಂದು ಪಂದ್ಯ. ಅಲ್ಲಿ ಗ್ಯಾಲರಿಯಲ್ಲಿ ಕುಳಿತು ಮೋದಿ, ಶಾ ಆಟ ನೋಡುವುದರಿಂದ ಆಟದ ಪಂದ್ಯದ ಫಲಿತಾಂಶ ಬದಲಾಗುವುದಿಲ್ಲ. ಆದರೂ ಮೋದಿ ಬಂದ ಕಾರಣ ಸೋತು ಹೋಯಿತು ಅಥವಾ
ಗೆದ್ದಿದ್ದರೆ ಅದರ ಕ್ರೆಡಿಟ್ ಮೋದಿಗೆ ಹೋಗುತ್ತಿತ್ತು ಎಂದು ಅಂದುಕೊಳ್ಳುವುದು ಎಂತಹ ಮೂರ್ಖತನ. ಇನ್ನು ಜಯ್ ಶಾ ಬಿಸಿಸಿಐ ಸೆಕ್ರೆಟರಿ ಆದ ಕೂಡಲೇ ಅವರು ಪಂದ್ಯದ ಫಲಿತಾಂಶವನ್ನು ತೀರ್ಮಾನ ಮಾಡಲು ಆಗುವುದಿಲ್ಲ. ಒಂದು ವೇಳೆ ಭಾರತ ತಂಡ ಗೆದ್ದಿದ್ದರೆ ಅದಕ್ಕೆ ಅವರು ತಾನೇ ಕಾರಣ ಎಂದು ಹೇಳಲು ಆಗುತ್ತಿರಲಿಲ್ಲ. ಆದರೆ ಭಾರತ ತಂಡ ಗೆದ್ದಿದ್ದರೆ ಅಮಿತ್ ಶಾ ಮಗನಿಗೆ ಕೋಡು ಬರುತ್ತಿತ್ತೋ ಎನ್ನುವ ಹೆದರಿಕೆಯಿಂದ ಕೆಲವರು ಸೋತದ್ದಕ್ಕೆ ಖುಷಿ ಪಡುತ್ತಿದ್ದಾರೆ.
ಮೋದಿಯೇ ಕಾರಣ ಎಲ್ಲದಕ್ಕೂ!?
ಇನ್ನು ತಮ್ಮ ತಂಡ ಸೋತಿರುವುದಕ್ಕೆ ಕೊಹ್ಲಿ, ರೋಹಿತ್ ಶರ್ಮಾ, ಶಮಿ ಸಹಿತ ಎಲ್ಲರೂ ಭಾವುಕರಾಗಿರುವುದನ್ನು ದೇಶ ಕಂಡಿದೆ. ಸೋತರೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರಧಾನಿ ಭರವಸೆ ತುಂಬಿದ್ದಾರೆ. ಕೊನೆಯದಾಗಿ ಇಷ್ಟೇ ಹೇಳುವುದು, ಇದು ಒಂದು ಆಟ, ಇದರಿಂದ ಭಾರತದ ಭವಿಷ್ಯ ಬದಲಾಗುವುದಿಲ್ಲ. ಗೆದ್ದಿದ್ರೆ ಅದು ಆಟವಷ್ಟೇ. ಸೋತರೂ ಆಟವಷ್ಟೇ. ಎಲ್ಲಿಯೂ ಸೋಲದೆ ಕೊನೆಯ ತನಕ ಬಂದದ್ದಕ್ಕೆ ಹೆಮ್ಮೆ ಪಡೋಣ. ಅದು ಬಿಟ್ಟು ಮೋದಿಯವರನ್ನು ಮೂದಲಿಸುವುದಕ್ಕೆ ಅರ್ಥ ಇದೆಯಾ? ಇತ್ತೀಚೆಗೆ ಏಕೋ ಎಲ್ಲದ್ದಕ್ಕೂ ಮೋದಿಯೇ ಕಾರಣ ಎನ್ನುವ ಗಾದೆ ಸೃಷ್ಟಿಯಾಗುತ್ತಿದೆ!
Leave A Reply