ಯುವಕರನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಸುವ ಗ್ಯಾಂಗ್ ಪಕ್ಡ್ವಾ!
ಬಿಹಾರದಲ್ಲಿ ಇವತ್ತಿಗೂ ಪಕ್ಡ್ವಾ ವಿವಾಹ ಎನ್ನುವ ಸಂಸ್ಕೃತಿ ಜಾರಿಯಲ್ಲಿದೆ. ಇದರಲ್ಲಿ ವಿದ್ಯಾವಂತ, ಉತ್ತಮ ಉದ್ಯೋಗದಲ್ಲಿರುವ ಯುವಕರನ್ನು ಅಜ್ಞಾತ ತಂಡವೊಂದು ಕಿಡ್ನಾಪ್ ಮಾಡಿ ಮದುವೆ ಮಾಡಿಸುವ ಕ್ರಮ ನಡೆಯುತ್ತದೆ. ನೀವು ಪ್ರಾಪ್ತ ವಯಸ್ಸಿಗೆ ಬಂದು ಉತ್ತಮ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಉದ್ಯೋಗದಲ್ಲಿ ಇದ್ದರೆ ಬಿಹಾರದಲ್ಲಿ ಯಾವುದೇ ಸಂದರ್ಭದಲ್ಲಿಯೂ ಕಿಡ್ನಾಪ್ ಆಗುವ ಸಾಧ್ಯತೆ ಇರುತ್ತದೆ. ಕಿಡ್ನಾಪ್ ಆದ ಯುವಕನನ್ನು ಅಜ್ಞಾತ ಬಂದೂಕುಧಾರಿಗಳು ಗುಪ್ತವಾಗಿರುವ ಜಾಗಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ರಾತ್ರಿಯೀಡಿ ಒಂದು ಕೋಣೆಯಲ್ಲಿ ಹಾಕಿ, ಮರುದಿನ ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವನನ್ನು ಬಲಾತ್ಕಾರವಾಗಿ ಸಜ್ಜುಗೊಳಿಸಿ ಯುವತಿಯೊಬ್ಬಳಿಗೆ ತಾಳಿ ಕಟ್ಟಿಸಲಾಗುತ್ತದೆ. ಇದನ್ನು ಪಕ್ಡ್ವಾ ವಿವಾಹ ಎಂದು ಕರೆಯಲಾಗುತ್ತದೆ.
ವರದಕ್ಷಿಣೆ ಕೊಡಲಾಗದ ಯುವತಿಯರಿಗೆ ಮದುವೆ ವಯಸ್ಸು ದಾಟುತ್ತಿದ್ದರೂ ಸೂಕ್ತ ವರ ಸಿಗದ ಹಿನ್ನಲೆಯಲ್ಲಿ ಇಂತಹ ಪಕ್ಡ್ವಾ ವಿವಾಹ ಬಹಳ ಹಿಂದಿನಿಂದ ಜಾರಿಯಲ್ಲಿತ್ತು. ಕೆಲವು ಕಡೆ ಊರಿನ ಶ್ರೀಮಂತ ಜಮೀನ್ದಾರರು ತಮ್ಮ ಮಗಳಿಗೆ ಉತ್ತಮ ವಿದ್ಯಾವಂತ ವರ, ಸುಸಂಸ್ಕೃತ ವರ ಸಿಗಬೇಕೆಂಬ ಉದ್ದೇಶದಿಂದ ಅಂತವರನ್ನು ಹುಡುಕಿ ಅವರು ಮದುವೆಯಾಗಲು ಒಪ್ಪದಿದ್ದಾಗ ಕಿಡ್ನಾಪ್ ಮಾಡಿ ಮದುವೆ ಮಾಡಿಸುತ್ತಾರೆ. ಇನ್ನು ಕೆಲವು ಕಡೆ ಅಪ್ರಾಪ್ತ ಬಾಲಕರನ್ನು ಕೂಡ ಕಿಡ್ನಾಪ್ ಮಾಡಿ ಮಹಿಳೆಯರೊಂದಿಗೆ ಮದುವೆ ಮಾಡಿಸುವ ಘಟನೆ ಕೂಡ ನಡೆದಿದೆ.
2020ರ ಒಂದೇ ವರ್ಷದಲ್ಲಿ ಬಿಹಾರದಲ್ಲಿ ಸುಮಾರು ಆರೂವರೆ ಸಾವಿರಕ್ಕೂ ಹೆಚ್ಚು ಇಂತಹ ಕಿಡ್ನಾಪ್ ಮಾಡಿ ನಡೆದ ಮದುವೆಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇದು ಬಿಹಾರದ ಬೇಗುಸರಾಯಿ, ಮುಂಗೇರ್, ಬಂಕಾ, ಖಾಗಾರಿಯಾ, ಮಧೇಪುರ್, ಪೂರ್ಣಿಯಾ, ಜೆಹನಾಬಾದ್, ಜಮುಐ ಸಹಿತ ಆಸುಪಾಸಿನ ಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತಾ ಬಂದಿದೆ. 90 ರ ದಶಕದಲ್ಲಿ ಬಿಹಾರದ ಬೇಗುಸರಾಯಿಯಲ್ಲಿ ಹೆಚ್ಚಾಗಿ ಕಂಡುಬಂದ ಈ ಘಟನೆಗಳ ಆಧಾರದ ಮೇಲೆ 2010 ರಲ್ಲಿ ಅಂತರೌಂಧ ಸಿನೆಮಾ ನಿರ್ಮಾಣವಾಗಿತ್ತು. ಆ ಸಿನೆಮಾಕ್ಕೆ ರಾಷ್ಟ್ರಪ್ರಶಸ್ತಿಯೂ ಒಲಿದಿತ್ತು.
Leave A Reply