ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಸ್ಥಾನಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ನಂತರ ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅವರ ಒಂದು ಕಾಲದ ಆಪ್ತ ಸುನೀಲ್ ಕನಗೋಳು ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ಸಿನ ಚುನಾವಣಾ ರಣತಂತ್ರಕ್ಕೆ ಇಳಿದಿದ್ದರು. ಡಿಸೆಂಬರ್ 3 ರಂದು ಈ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗಲಿದ್ದು, ಒಂದು ವೇಳೆ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೆ ಸುನೀಲ್ ಕನಗೋಳು ವರ್ಚಸ್ಸು ಇನ್ನಷ್ಟು ಹೆಚ್ಚಾಗಲಿದೆ. ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಅದರಲ್ಲಿ ರಣತಂತ್ರ ರೂಪಿಸಿ ಯಶಸ್ವಿಯಾದ ಕಾರಣಕ್ಕೆ ಉಡುಗೊರೆಯಾಗಿ ಅವರಿಗೆ ಮುಖ್ಯಮಂತ್ರಿಗಳ ವಿಶೇಷ ಸಲಹೆಗಾರ ಹುದ್ದೆಯನ್ನು ಸೃಷ್ಟಿಸಿ ನೀಡಲಾಗಿದೆ. ಅವರಿಗಾಗಿ ವಿಶೇಷ ಕೊಠಡಿ ಹಾಗೂ ಎಲ್ಲಾ ಸೌಲಭ್ಯಗಳನ್ನು ಪೂರೈಸಲಾಗಿದ್ದು, ಸಂಪುಟ ದರ್ಜೆ ಸ್ಥಾನಮಾನ ಕೂಡ ನೀಡಲಾಗಿದೆ. ವಿಧಾನಸೌಧದಲ್ಲಿ ಸುನೀಲ್ ಕಚೇರಿ ಮೂರನೇ ಮಹಡಿಯಲ್ಲಿದ್ದು, ಸಿಎಂ ಕಚೇರಿಯ ಹತ್ತಿರದಲ್ಲಿಯೇ ಇರುವುದು ಕನುಗೋಳ್ ಲೆವೆಲ್ ಯಾವ ಮಟ್ಟದಲ್ಲಿದೆ ಎನ್ನುವುದನ್ನು ತೋರಿಸುತ್ತದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರಳ ಬಹುಮತವನ್ನು ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಫೈಟ್ ಟಫ್ ಆಗಿದ್ದು, ಭಾರತೀಯ ಜನತಾ ಪಾರ್ಟಿ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಬಹುದು ಎನ್ನಲಾಗಿದೆ. ಒಂದು ವೇಳೆ ಅಲ್ಲಿ ಕೂಡ ಕಾಂಗ್ರೆಸ್ ಗೆದ್ದರೆ ಅದು ಕಾಂಗ್ರೆಸ್ ಮಟ್ಟಿಗೆ ದೊಡ್ಡ ಸಾಧನೆಯಾಗಲಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನುಗೋಳ್ ರಾಷ್ಟ್ರರಾಜಕಾರಣದಲ್ಲಿ ಪ್ರಭಾವಿ ಎನಿಸಲಿದ್ದಾರೆ. ಇನ್ನು ಛತ್ತೀಸ್ ಘಡದಲ್ಲಿ ಕಾಂಗ್ರೆಸ್ ಸುಲಭವಾಗಿ ಅಧಿಕಾರ ಹಿಡಿಯಲಿದ್ದು, ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ ಹತ್ತಿರದಲ್ಲಿದೆ ಎಂದು ಹೇಳಲಾಗುತ್ತಿದೆ
Leave A Reply