ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
ಎನ್ ಡಿಎ ಮೈತ್ರಿಕೂಟದ ವಿರುದ್ಧ ಪ್ರಬಲ ಶಕ್ತಿ ಪ್ರದರ್ಶಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂಬ ಲೋಕಸಭೆಯ ವಿಪಕ್ಷ ಮುಖಂಡರ ಪ್ರಯತ್ನ ಪಂಚರಾಜ್ಯ ಚುನಾವಣಾ ಫಲಿತಾಂಶದೊಂದಿಗೆ ಹಳ್ಳ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಡಿಸೆಂಬರ್ 6 ರಂದು ದೆಹಲಿಯಲ್ಲಿ ಇ.0.ಡಿ.ಯಾ ಮೈತ್ರಿಕೂಟದ ನಾಲ್ಕನೇ ಸಭೆ ನಡೆಯಲಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೈತ್ರಿಕೂಟದ ಪ್ರಮುಖರಿಗೆ ಈ ಬಗ್ಗೆ ಈಗಾಗಲೇ ಆಹ್ವಾನ ನೀಡಿದ್ದು, ಪ್ರಮುಖ ಪಕ್ಷಗಳ ಎಷ್ಟು ಮಂದಿ ಮುಖಂಡರು ಆಗಮಿಸುತ್ತಾರೆ ಎನ್ನುವ ಅನುಮಾನ ದಟ್ಟವಾಗಿದೆ.
ಇ.0.ಡಿ.ಯಾ ಮೈತ್ರಿಕೂಟದ ಕೊಂಡಿಯಾಗಿರುವ ಜೆಡಿಯು ಪರಮೋಚ್ಚ ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಯಲ್ಲಿ ಭಾಗವಹಿಸುವುದು ಬಹುತೇಕ ಇಲ್ಲ ಎನ್ನುವ ಮಾಹಿತಿ ಬಂದಿದೆ. ಇ.0.ಡಿ.ಯಾ ಮೈತ್ರಿಕೂಟಕ್ಕೆ ಬೆಸುಗೆ ಹಾಕಿ ನಿಲ್ಲಿಸಿರುವುದೇ ನಿತೀಶ್ ಕುಮಾರ್. ಅವರು ಇ.0.ಡಿ.ಯಾ ಮೈತ್ರಿಕೂಟದ ಬಗ್ಗೆ ಒಂದಿಷ್ಟು ನಿರಾಸಕ್ತಿ ಹೊಂದಿರುವುದು ಎದ್ದುಕಾಣುತ್ತಿದೆ. ಅದರೊಂದಿಗೆ ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ ಘಡದಲ್ಲಿ ಮಿತ್ರಪಕ್ಷಗಳೊಂದಿಗೆ ಅಹಂಕಾರದಿಂದ ವರ್ತಿಸಿ ಚುನಾವಣೆ ಎದುರಿಸಿದ್ದು ಸಹಜವಾಗಿ ನಿತೀಶ್ ಅವರಿಗೂ ಕಾಂಗ್ರೆಸ್ ನಡವಳಿಕೆ ನುಂಗಲಾಗುತ್ತಿಲ್ಲ. ಒಂದು ವೇಳೆ ಮಿತ್ರಪಕ್ಷಗಳನ್ನು ಒಟ್ಟಿಗೆ ಕರೆದುಕೊಂಡು ಹೋಗದೇಯೂ ಕಾಂಗ್ರೆಸ್ ಎಂಪಿ, ರಾಜಸ್ಥಾನ, ಛತ್ತೀಸ್ ಘಡ್ ಗೆದ್ದಿದ್ದರೆ ಆಗ ಕಾಂಗ್ರೆಸ್ಸಿಗೆ ಗೌರವ ಜಾಸ್ತಿಯಾಗುತ್ತಿತ್ತು. ಆದರೆ ಈಗ ಸೋತಿರುವುದರಿಂದ ಸಹಜವಾಗಿ ಮಿತ್ರಪಕ್ಷಗಳು ಕಾಂಗ್ರೆಸ್ ವಿರುದ್ಧ ಧ್ವನಿ ಏರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಭಾರತದಲ್ಲಿ ಹಿಮಾಚಲ ಪ್ರದೇಶ ಬಿಟ್ಟರೆ ಕಾಂಗ್ರೆಸ್ ಬೇರೆ ಯಾವುದೇ ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿ ಇಲ್ಲ. ತೆಲಂಗಾಣದಲ್ಲಿ ಸರಳ ಬಹುಮತ ಬಂದಿದೆಯಾದರೂ ಅದು ಐದು ವರ್ಷ ಉಳಿಯುವುದು ಕೂಡ ಅನುಮಾನ. ಇನ್ನು ಕಾಂಗ್ರೆಸ್ ಬಲಿಷ್ಟವಾಗಿರುವುದು ಕರ್ನಾಟಕ ಮಾತ್ರ. ಹೀಗಿರುವಾಗ ಕಾಂಗ್ರೆಸ್ ಮೈತ್ರಿಕೂಟದ ಬಲಾಢ್ಯ ಪಕ್ಷ ಎನ್ನುವುದನ್ನು ಯಾರೂ ಒಪ್ಪಲು ಹೋಗುತ್ತಿಲ್ಲ. ಯಾವಾಗ ನಿತೀಶ್ ಕುಮಾರ್ ಸಭೆಗೆ ಬರಲ್ಲ ಎಂದು ಗೊತ್ತಾಯಿತೋ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಸಿಂಗ್ ಯಾದವ್ ಕೂಡ ತಾವು ಬರುವುದಿಲ್ಲ ಎಂಬ ಸಂದೇಶ ಕಳುಹಿಸಿದಂತೆ ಮಾಹಿತಿ ಬಂದಿದೆ. ಒಟ್ಟಿನಲ್ಲಿ ಚುನಾವಣೆಗೆ ನಾಲ್ಕೈದು ತಿಂಗಳು ಇರುವಾಗ ಇ.0.ಡಿ.ಯಾ ಮೈತ್ರಿಕೂಟದ ನಡುವಿನ ಕಂದಕ ಬೆಳೆಯುತ್ತಿದೆ. ಸೋಲು ಯಾವಾಗಲೂ ಒಬ್ಬಂಟಿ, ಗೆಲುವಿಗೆ ಮಾತ್ರ ಹಲವರು ತಂದೆಯಂದಿರು ಎನ್ನುವುದು ಇದಕ್ಕೆನಾ?
Leave A Reply