ಮೂಡಬಿದ್ರೆಯ ಯುವಕ ರಿಲಯನ್ಸ್ ಮಿಸ್ಟರ್ ಇಂಡಿಯಾ 2017!
ಕರಾವಳಿ ಕರ್ನಾಟಕದಿಂದ ಹಲವಾರು ಜನ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಭಿನ್ನ ಕೇತ್ರದಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಅದರಲ್ಲಿಯೂ ಅನೇಕರು ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಲ್ಲಿ ಮಿಂಚಿ ತಮ್ಮ ಅಭಿನಯದಿಂದ ಜನಮನ ಗೆದ್ದಿದ್ದಾರೆ. ಈ ಮನೋರಂಜನ ಕ್ಷೇತ್ರದಲ್ಲಿ ಹೆಸರು ಮಾಡಬೇಕಾದರೆ ಅದಕ್ಕೆ ಆಕರ್ಷಕ ಅಂಗಸೌಷ್ಟವ, ನಿಲುವು, ಮಾತಿನ ಶೈಲಿ ಮತ್ತು ತೀಕ್ಣ ನೋಟ ಕೂಡ ಮುಖ್ಯ. ಅನೇಕರು ಸಿನೆಮಾ ಕ್ಷೇತ್ರದಲ್ಲಿ ಕಾಲಿಡುವ ಮುನ್ನ ಮಾಡೆಲ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಮಾಡೆಲ್ ಆಗಿ ಮಿಂಚುವುದು ಕೂಡ ಸುಲಭವಲ್ಲ. ಮಾಡೆಲ್ ಕ್ಷೇತ್ರದಲ್ಲಿ ಇರುವವರಿಗೆ ತಾವು ಇದೇ ರಂಗದಲ್ಲಿ ಅತ್ಯುನ್ನತ ಸ್ಥಾನಕ್ಕೆ ತಲುಪಬೇಕಾದರೆ ಯಾವುದಾದರೂ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ರಾಷ್ಟ್ರಮಟ್ಟದಲ್ಲಿ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಸಾವಿರಾರು ಜನರ ನಡುವೆ ಮೊದಲ ಸ್ಥಾನ ಪಡೆಯುವುದು ಕೂಡ ಸಲೀಸಲ್ಲ. ಅದನ್ನು ತುಳುನಾಡಿನ ಯುವಕನೊಬ್ಬ ಮಾಡಿ ತೋರಿಸಿದ್ದಾರೆ. ಆ ಯುವಕನ ಹೆಸರು ರಿತೇಶ್ ಶೆಟ್ಟಿ.
ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂನಲ್ಲಿ ಇಂಜಿನಿಯರಿಂಗ್ ಮಾಡಿರುವ ರಿತೇಶ್ ಶೆಟ್ಟಿ ಮೂಲತ: ಮೂಡಬಿದ್ರೆಯವರು. ಬಾಲಾಜಿ ಸ್ಕೂಲ್ ಆಫ್ ಆಕ್ಟಿಂಗ್ ನಲ್ಲಿ ಕ್ರಿಯೇಟಿವ್ ಫೀಲ್ಡ್ ನಲ್ಲಿ ತರಬೇತಿ ಪಡೆದಿರುವ ರಿತೇಶ್ ಶೆಟ್ಟಿ 2016 ರಲ್ಲಿ ಮುಂಬೈಯಲ್ಲಿ ನಡೆದ ಮಿಸ್ಟರ್ ಬಂಟ್ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ 5 ಸ್ಥಾನಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಅದರ ನಂತರ 2017 ರಲ್ಲಿ ಮಿಸ್ಟರ್ ಮಂಗಳೂರು ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡ ರಿತೇಶ್ ಶೆಟ್ಟಿ ರಿಲಯನ್ಸ್ ಕಂಪೆನಿಯವರು ಅಗಸ್ಟ್ ನಲ್ಲಿ ಹೈದ್ರಾಬಾದ್ ನಲ್ಲಿ ನಡೆಸಿದ ಮಿಸ್ಟರ್ ಇಂಡಿಯಾ 2017 ಕಿರೀಟ ಗೆಲ್ಲುವ ಮೂಲಕ ತನ್ನ ಸಾಧನೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಂಡಿದ್ದಾರೆ.
ಅದರೊಂದಿಗೆ ಅವರು ಮಿಸ್ಟರ್ ಯೂನಿವರಸ್ ಟೂರಿಸಂ ಇಂಡಿಯಾ 2017 ಕೂಡ ಗೆಲ್ಲುವ ಮೂಲಕ ತುಳುನಾಡಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಮುಂಬೈಯಲ್ಲಿ ಖ್ಯಾತ ಸಾಹಸ ನಿರ್ದೇಶಕ ಚೀತಾ ಯಜ್ಞೇಶ್ ಶೆಟ್ಟಿಯವರ ಬಳಿ ಮಾರ್ಸಲ್ ಆಟ್ಸ್ ಕಲಿತಿರುವ ರಿತೇಶ್ ಶೆಟ್ಟಿ ಪ್ರಸ್ತುತ ತುಳು ಸಿನೆಮಾವೊಂದಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಬುಧಾಬಿಯಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿರುವ ರಘುನಾಥ ಶೆಟ್ಟಿ ಹಾಗೂ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ವಸಂತಿ ಶೆಟ್ಟಿಯವರ ಸುಪುತ್ರ ರಿತೇಶ್ ಅವರು ಡಾ|ನಿತೀನ್ ಅವರಿಂದ ವ್ಯಕ್ತಿತ್ವ ಅಭಿವೃದ್ಧಿಯ ಬಗ್ಗೆ ತರಬೇತಿ ಪಡೆದುಕೊಂಡಿರುತ್ತಾರೆ.
ಈಗಾಗಲೇ ತೆಲುಗು, ಹಿಂದಿಯಿಂದ ಸಿನೆಮಾ ಅವಕಾಶಗಳನ್ನು ಪಡೆದುಕೊಂಡಿರುವ ರಿತೇಶ್ ಶೆಟ್ಟಿಯವರು ಮುಂದಿನ ದಿನಗಳಲ್ಲಿ ಕರಾವಳಿಯ ಹೆಸರನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಏರಿಸುವುದರಲ್ಲಿ ಸಂಶಯವಿಲ್ಲ
Leave A Reply