ಸ್ಮೋಕ್ ಬಾಂಬ್ ಪ್ರಕರಣ ಸುರಕ್ಷತೆಗೆ ಒಂದು ಪಾಠ!
ಸಂಸತ್ತಿನೊಳಗೆ ಹೋಗಲು ಪಾಸ್ ಸಿಗುವುದು ಎಂದರೆ ಅದು ಸಿನೆಮಾ ಥಿಯೇಟರ್ ಒಳಗೆ ಹೋಗಲು ಟಿಕೆಟ್ ತೆಗೆದುಕೊಂಡದ್ದು ಸುಲಭ ಅಲ್ಲ ಎನ್ನುವುದು ಮೊದಲ ವಿಷಯ. ನಾವು ಒಂದು ಸಿನೆಮಾ ಥಿಯೇಟರ್ ನ ಟಿಕೆಟ್ ಕೌಂಟರಿಗೆ ಹೋಗಿ ಹಣ ನೀಡಿ ಅಲ್ಲಿ ಟಿಕೆಟ್ ತೆಗೆದುಕೊಂಡು ಒಳಗೆ ಬಾಗಿಲಿನ ಹತ್ತಿರ ಟಿಕೆಟ್ ಕೊಟ್ಟು ಗೇಟ್ ಕೀಪರ್ ಅದನ್ನು ಹರಿದು ನಿಮ್ಮನ್ನು ಒಳಗೆ ಬಿಡುತ್ತಾನೆ. ಆದರೆ ಸಂಸತ್ತಿನಲ್ಲಿ ಹಾಗಲ್ಲ, ಪಾಸು ತೆಗೆದುಕೊಳ್ಳಲು ನೀವು ಸಂಸದರ ಕಚೇರಿಗೆ ಹೋದರೆ ಅಲ್ಲಿ ಕಣ್ಣುಮುಚ್ಚಿ ಪಾಸು ಕೊಡುವುದಿಲ್ಲ. ಇನ್ನು ನೀವು ಪಾಸು ಸಿಕ್ಕಿದ ತಕ್ಷಣ ನಿಮ್ಮ ಗಂಟುಮೂಟೆ ಕಟ್ಟಿ ಎಲ್ಲವನ್ನು ತೆಗೆದುಕೊಂಡು ಸಂಸತ್ತಿನ ಒಳಗೆ ಹೋಗಲು ಸಾಧ್ಯವೂ ಇಲ್ಲ. ಯಾಕೆಂದರೆ ಅದು ಛತ್ರ ಅಲ್ಲ. ನೀವು ಪಾಸು ತೆಗೆದುಕೊಂಡು ಒಳಗೆ ಹೋಗುವ ಮೊದಲು ಐದು ಕಡೆ ಪರಿಶೋಧನೆಗೆ ಒಳಗಾಗಬೇಕಾಗುತ್ತದೆ. ಅದು ಕೂಡ ಬೇರೆ ಬೇರೆಯದ್ದೇ ರೀತಿಯ ಪರಿಶೀಲನೆ ಆಗಿರುತ್ತದೆ. ಒಂದು ಕಡೆ ದೆಹಲಿ ಪೊಲೀಸರು ಚೆಕ್ ಮಾಡ್ತಾ ಇದ್ರೆ ಪ್ರತಿ ಹಂತದಲ್ಲಿ ಗಡಿ ಭದ್ರತಾ ಪಡೆ, ಯೋಧರು ಹೀಗೆ ಪರಿಶೀಲನೆ ಮಾಡುತ್ತಾರೆ. ಅದರಲ್ಲಿ ಒಂದು ಕಡೆ ನಿಮ್ಮ ಮುಖದ ಸ್ಕ್ಯಾನಿಂಗ್ ಕೂಡ ಮಾಡಲಾಗುತ್ತದೆ. ಅದರಲ್ಲಿ ನಿಮ್ಮ ಮುಖ ದೇಶದ ಭದ್ರತೆಗೆ ದಕ್ಕೆ ತರುವ ಯಾವುದಾದರೂ ಭಯೋತ್ಪಾದಕನ ಮುಖಕ್ಕೆ ಹೋಲಿಕೆಯಾಗುತ್ತಾ ಎಂದು ಕೂಡ ನೋಡಲಾಗುತ್ತದೆ. ಎಲ್ಲಿಯ ತನಕ ಎಂದರೆ ನೀವು ಒಂದು ಗುಂಡುಪಿನ್ ಕೂಡ ಸಂಸತ್ ಅಧಿವೇಶನ ಆಗುತ್ತದೆಯಲ್ಲ, ಅಲ್ಲಿ ವೀಕ್ಷಕರ ಗ್ಯಾಲರಿ ತನಕ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಅಂತಹ ಒಂದು ವ್ಯವಸ್ಥೆ ಇರುವಾಗ ಇಬ್ಬರು ಹೇಗೆ ಸ್ಮೋಕ್ ಬಾಂಬ್ ಹಿಡಿದುಕೊಂಡು ವಿಸಿಟರ್ ಗ್ಯಾಲರಿ ತನಕ ಹೋದರು ಎನ್ನುವುದೇ ಬಹಳ ಕುತೂಹಲಕಾರಿ ವಿಷಯ.
ಲೋಪಕ್ಕೆ ಕಾರಣ ಸೆಕ್ಯೂರಿಟಿಯಾ, ಪ್ರತಾಪಾ?
ಇನ್ನು ಈಗ ಈ ವಿಷಯಕ್ಕೆ ಬರೋಣ. ನಿಮಗೆ ಸಂಸತ್ ಅಧಿವೇಶನ ನೋಡಬೇಕಾದರೆ ಅದಕ್ಕೆ ನಿಮ್ಮ ಲೋಕಸಭಾ ಕ್ಷೇತ್ರದ ಸಂಸದರ ಬಳಿ ಪಾಸ್ ಕೇಳುವುದು ಒಂದು ಸುಲಭದ ಆಯ್ಕೆ. ಹಾಗಂತ ಅವರಿಗೆ ನಿಮ್ಮ ಪರಿಚಯ ಇಲ್ಲದೇ ಹೋದರೆ ನೀವು ಕ್ಷೇತ್ರದವರು ಎಂದು ಆಧಾರ್ ಕಾರ್ಡ್ ತೋರಿಸಿದ ಕೂಡಲೇ ಪಾಸ್ ಸಿಗುವುದಿಲ್ಲ. ಇಲ್ಲಿ ಕೂಡ ಹಾಗೆ. ಮನೋರಂಜನ್ ತಂದೆ ಮೈಸೂರಿನಲ್ಲಿ ಬಂದು ನೆಲೆಸಿ ಅನೇಕ ವರ್ಷಗಳಾಗಿವೆ. ಇನ್ನು ಅವರ ಮನೆ ಇರುವುದು ಪ್ರತಾಪಸಿಂಹರ ಮೈಸೂರಿನ ಕಚೇರಿಯ ಸನಿಹದಲ್ಲಿಯೇ ಇದೆ. ಹಾಗಂತ ಮನೋರಂಜನ್ ಅವರಿಗೆ ಸುಲಭವಾಗಿ ಪಾಸ್ ಸಿಕ್ಕಿರಲಿಲ್ಲ. ಆತ ಅನೇಕ ದಿನಗಳಿಂದ ಪ್ರತಾಪ್ ಸಿಂಹರಿಗೆ ದಂಬಾಲು ಬಿದ್ದಿದ್ದ. ಕೊನೆಗೆ ಅವನಿಗೆ ಒಬ್ಬನಿಗೆ ಪಾಸು ಕೊಡುವಾಗ ಮೂರು ಕೊಡಿ ಎಂದು ಗೋಗರೆದಿದ್ದ. ಹೇಗೂ ಯುವಕ ಇಂಜಿನಿಯರಿಂಗ್ ಮಾಡಿದ್ದಾನೆ. ಸಜ್ಜನ ಹಿನ್ನಲೆಯಿಂದ ಬಂದಿರುವುದು ಎಂದು ಮೂರು ಪಾಸ್ ಸಿಕ್ಕಿದೆ. ಆದರೆ ಕೊನೆಯ ಘಳಿಗೆಯಲ್ಲಿ ನೀಲಂಗೆ ಒಳಗೆ ಹೋಗಲು ಪೊಲೀಸರು ಅನುಮತಿ ನೀಡಲಿಲ್ಲ. ಹಾಗೆ ಉಳಿದ ಇಬ್ಬರೂ ಹೋಗಿದ್ದಾರೆ. ಹಾಗಾದರೆ ಇಲ್ಲಿ ಸ್ಮೋಕ್ ಬಾಂಬ್ ಇರುವ ವ್ಯಕ್ತಿಯನ್ನು ವೀಕ್ಷಕರ ಗ್ಯಾಲರಿ ತನಕ ಬಿಟ್ಟಿರುವುದು ಯಾರು? ಪ್ರತಾಪಸಿಂಹನಾ ಅಥವಾ ಸೆಕ್ಯೂರಿಟಿಗೆ ನಿಂತವರಾ?
ಇನ್ನು ಪ್ರತಾಪಸಿಂಹ ಅವರೇ ಯಾಕೆ?
ಇಡೀ ರಾಜ್ಯದಲ್ಲಿ ಸಂಸದರ ಪೈಕಿ ಪ್ರತಾಪು ಟಾರ್ಗೆಟ್ ಆಗಿರುವುದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಪ್ರತಾಪು ವಿರೋಧಿಗಳ ಪಾಳಯಕ್ಕೆ ನುಗ್ಗಿ ಹೊಡೆಯಬಲ್ಲಂತಹ ಯೋಧ. ಇನ್ನು ಮೈಸೂರಿನ ಲೋಕಸಭಾ ಕ್ಷೇತ್ರವನ್ನು ಹೇಗಾದರೂ ಗೆಲ್ಲಲೇಬೇಕು ಎಂಬ ದೂರದೃಷ್ಟಿ ಕಾಂಗ್ರೆಸ್ಸಿಗೆ ಈ ಬಾರಿ ಇದ್ದೇ ಇದೆ. ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸದರು ಇರುವುದು ಕಾಂಗ್ರೆಸ್ ಮಟ್ಟಿಗೆ ಈ ಬಾರಿಯಂತೂ ಒಳ್ಳೆಯ ಸಂಗತಿ ಅಲ್ಲ. ಯಾಕೆಂದರೆ ಜಿಲ್ಲೆಯಲ್ಲಿಯೇ ಕಾಂಗ್ರೆಸ್ಸನ್ನು ಗೆಲ್ಲಿಸಲಾರದ ಮುಖ್ಯಮಂತ್ರಿ ಎನ್ನುವ ಹಣೆಪಟ್ಟಿ ಸಿದ್ದುಗೆ ಬೀಳುತ್ತದೆ. ಪ್ರತಾಪು ಏರುತ್ತಿರುವ ವೇಗ ನೋಡಿದರೆ ಈ ಬಾರಿ ಸೋಲಿಸದಿದ್ದರೆ ಆ ಮನುಷ್ಯ ಒಕ್ಕಲಿಗರ ಮುಂದಿನ ಆಯ್ಕೆಯಾದರೂ ಅಚ್ಚರಿಯಿಲ್ಲ ಎನ್ನುವುದು ಡಿಕೆಶಿಗೂ ಅರಿವಿದೆ. ಒಂದು ಕಡೆ ಸಿಎಂ ತವರು ಕ್ಷೇತ್ರ, ಇನ್ನೊಂದು ಕಡೆ ಜಾತಿಪಟ್ಟಿ ಸೇರಿ ಮನೋರಂಜನ್ ಒಬ್ಬ ದಾಳವಾಗಿ ಹೋದ್ನಾ ಎನ್ನುವುದನ್ನು ಕೂಡ ತನಿಖೆಯಿಂದ ಪತ್ತೆಹಚ್ಚಬೇಕಾಗಿದೆ. ಯಾಕೆಂದರೆ ಅದರಲ್ಲಿ ಬಂಧಿತರಾಗಿ ಈಗ ಉಪಾ ಕಾಯ್ದೆಯಲ್ಲಿ ಒಳಗೆ ಬಿದ್ದಿರುವ ನೀಲಂ ವಿಷಯವನ್ನೇ ತೆಗೆದುಕೊಳ್ಳಿ. ಅವಳು ಹರ್ಯಾಣದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾಳೆ. ಶಹೀನ್ ಭಾಗ್ ನಲ್ಲಿ ಕುಳಿತು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾಳೆ. ಅಷ್ಟಕ್ಕೂ ಇವರೆಲ್ಲಾ ಸಾಧಿಸಿರುವುದು ಏನು? ವಿಷಯ ಒಂದೇ, ಸಂಸತ್ತಿನಲ್ಲಿ ಸುರಕ್ಷತಾ ವ್ಯವಸ್ಥೆ ದುರ್ಬಲವಾಗಿದೆ ಎಂದು ಅಣಕು ಕಾರ್ಯಾಚರಣೆ ಮಾಡಿದಂತೆ ಆಯಿತಲ್ಲ. ಒಂದು ವೇಳೆ ಆ ಸ್ಮೋಕ್ ಬಾಂಬ್ ಸ್ಥಳದಲ್ಲಿ ಜೀವಹಾನಿ ಮಾಡುವಂತಹ ಏನಾದರೂ ವಸ್ತುಗಳಿದ್ದು, ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಇಡೀ ಜಗತ್ತಿನ ಎದುರು ಏನಾಗುತ್ತಿತ್ತು. ಪ್ರಪಂಚದ ಎದುರು ಮೋದಿ ವಿರುದ್ಧ ಮಾತನಾಡಲು ಒಂದು ಅಸ್ತ್ರ ಸಿಗುತ್ತಿತ್ತು!
Leave A Reply